ಕರಾವಳಿ

ಸ್ವಂತ ಖರ್ಚಿನಲ್ಲಿ ಗ್ರಾಮಸ್ಥರೇ ನಿರ್ಮಿಸಿಕೊಂಡ ಮರದ ಕಾಲು ಸಂಕವೂ ನೀರುಪಾಲು!; ಅತಂತ್ರರಾದ ಚಿತ್ತೂರು ನೈಕಂಬ್ಳಿ ಜನರು!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ತಮ್ಮೂರಿನ ಒಂದಷ್ಟು ಗ್ರಾಮಗಳಿಗೆ ಸಂಪರ್ಕಿಸಲು ಹರಿಯುವ ನೀರಿನ ಮದ್ಯೆ ಸ್ಥಳೀಯರು ಸಾವಿರಾರು ರೂಪಾಯಿ ವ್ಯಯಿಸಿ ಕಟ್ಟಿಕೊಂಡ ಕಾಲುಸಂಕದಲ್ಲಿ ಮಳೆಯ ರಭಸಕ್ಕೆ ಸಿಕ್ಕು ಕೊಚ್ಚಿ ಹೋದ ಘಟನೆ ಬೈಂದೂರು ವಿಧಾನಸಭಾ ಕ್ಷೇತ್ರದ ಚಿತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನೈಕಂಬ್ಳಿಯಲ್ಲಿ ನಡೆದಿದೆ.

ಸ್ಥಳಕ್ಕೆ ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ಚಿತ್ತೂರು ಗ್ರಾಮಪಂಚಾಯತಿ ಅಧ್ಯಕ್ಷ ರವಿರಾಜ್ ಶೆಟ್ಟಿ, ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಕಲಾವತಿ, ಪಿಡಿಒ ಸುಶೀಲಾ ಭೇಟಿ ನೀಡಿದರು. ಪ್ರತಿವರ್ಷವೂ ಸಾವಿರಾರು ರೂ. ಹಣ ವ್ಯಯಿಸಿ, ಜೆಸಿಬಿ ತರಿಸಿ ಮರದ ದಿಣ್ಣೆಗಳನ್ನು ಬಳಸಿಕೊಂಡು ಕಾಲು ಸೇತುವೆ ನಿರ್ಮಿಸಿಕೊಳ್ಳುತ್ತಿದ್ದೇವೆ. ಈ ವರ್ಷ ಮಳೆಗೆ ಕೊಚ್ಚಿಹೋಗಿದ್ದರಿಂದ ಸಂಪರ್ಕ ಕಷ್ಟಸಾಧ್ಯವಾಗಿದೆ. ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಿ ಎಂದು ಸ್ಥಳೀಯರು ಮನವಿ ಮಾಡಿದರು.

ಸಂಪರ್ಕ ಕೊಂಡಿ ನೀರುಪಾಲು: ಚಿತ್ತೂರು ಹಳೆಯಮ್ಮ ದೇವಸ್ಥಾನ ಮತ್ತು ಶ್ರೀಮಹಾಲಿಂಗೇಶ್ವರ ದೇವಸ್ಥಾನ ಸಂಪರ್ಕದ ಕೊಂಡಿ ನೀರುಪಾಲಾಗಿದ್ದು ಎರಡೂ ಭಾಗದ ಜನರಿಗೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಪರಿಸ್ಥಿತಿ ಬಂದೊದಗಿದೆ. ಇನ್ನೊಂದು ಭಾಗದಲ್ಲಿ ರಸ್ತೆಯೂ ಕುಸಿಯುವ ಭೀತಿಯಿದ್ದು ಅಲ್ಲಿಯೂ ಸಂಚಾರ ದುಸ್ತರ.
ಕಳೆದ ವರ್ಷ ಮಳೆಗಾಲದಲ್ಲಿ ನದಿ ದಾಟಲು ಮರದಿಂದ ತಾವೇ ನಿರ್ಮಿಸಿಕೊಂಡ ಕಿರಿದಾದ ಕಾಲು ಸಂಕ ತಕ್ಕಮಟ್ಟಿಗೆ ನಡೆದಾಡಲು ಅನುಕೂಲವಾಗಿತ್ತು. ಕಷ್ಟಪಟ್ಟು ಹಿಂದಿನ ಮಳೆಗಾಲ ಕಳೆದ ಜನರಿಗೆ ಈ ಬಾರೀ ಸುರಿದ ಭಾರೀ ಮಳೆ ದೊಡ್ಡ ಆಘಾತವುಂಟು ಮಾಡಿದೆ. ಮೂರ್ನಾಲ್ಕು ದಿನಗಳ ಹಿಂದೆ ಸುರಿದ ನಿರಂತರ ಮಳೆಗೆ ಮರದ ಕಾಲು ಸಂಕದ ಮೇಲೂ ನೀರು ಹರಿದು ಎರಡೂ ಭಾಗದ ಮಣ್ಣು ಜರ್ಝರಿತಗೊಂಡು ಕಾಲು ಸಂಕ ಕೊಚ್ಚಿ ಹೋಗಿದ್ದು ಎರಡೂರುಗಳ ಸಂಪರ್ಕ ಕಡಿತಗೊಂಡಿದೆ. ಹೊಸೂರು, ಹಾರ್ಮಣ್ಣು, ನೈಕಂಬ್ಳಿ ಮಾರ್ಗವಾಗಿ ಮಾರಣಕಟ್ಟೆ ಹಾಗೂ ಚಿತ್ತೂರು, ಕೆರಾಡಿ ನಡುವಿನ ಸಂಪರ್ಕ ಈ ಮಾರ್ಗ ಬಹಳ ಹತ್ತಿರವಾಗಿತ್ತು. ನೂರಾರು ಮನೆಗಳ ನಿವಾಸಿಗಳು, ಕಾರ್ಮಿಕರು, ಕೃಷಿಕರ ಸಹಿತ ನೈಕಂಬ್ಳಿ ಅಂಗನವಾಡಿ, 1-5 ನೇ ತರಗತಿವರೆಗಿನ ಸರಕಾರಿ ಶಾಲೆ, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೊಲ್ಲೂರು, ನೆಂಪು, ಕುಂದಾಪುರ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಇದೇ ಮರದ ಕಾಲು ಸಂಕ ಉಪಯೋಗಿಸುತ್ತಿದ್ದು ಮಾತ್ರವಲ್ಲದೇ ಬೈಕ್, ದ್ವಿಚಕ್ರ ವಾಹನಗಳನ್ನು ಸವಾರರು ನಾಜೂಕಾಗಿ ಕೊಂಡೊಯ್ಯುತ್ತಿದ್ದರು.

ಸೇತುವೆ ಹಾಗೂ ರಸ್ತೆ ಸಂಪರ್ಕಕ್ಕಾಗಿ ಇಲ್ಲಿನ ಜನರು ಬಹಳಷ್ಟು ಮನವಿ ನೀಡಿದ್ದು ಹಿಂದಿನ ಅವಧಿಯಲ್ಲಿ ಶಾಸಕರು ಸರಕಾರದ ಗಮನ ಸೆಳೆದು ಕ್ರಿಯಾಯೋಜನೆಯೂ ಸಿದ್ದವಾಗಿತ್ತು. ಸಂಬಂದಪಟ್ಟ ಇಂಜಿನಿಯರ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದರೂ ಕೂಡ ಪ್ರಕ್ರಿಯೆ ಅಲ್ಲಿಗೆ ನಿಂತಿದೆ. ಸದ್ಯ ಇಲ್ಲಿದ್ದ ಮರದ ಸಂಕ ಕೊಚ್ಚಿಹೋಗಿದ್ದು ತಹಶಿಲ್ದಾರ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಬೈಂದೂರು ಶಾಸಕರು ಕೂಡ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇಲ್ಲಿಗೆ ಸುಸಜ್ಜಿತ ಸಂಪರ್ಕ ಸೇತುವೆ ಆದ್ಯತೆ ಮೇಲೆ ನಿರ್ಮಾಣವಾಗಬೇಕಿದೆ.
– ರವಿರಾಜ್ ಶೆಟ್ಟಿ (ಚಿತ್ತೂರು ಗ್ರಾ.ಪಂ ಅಧ್ಯಕ್ಷ)

Comments are closed.