ಕರಾವಳಿ

‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಉದ್ಘಾಟನೆ | ಕುಂದಾಪ್ರ ಕನ್ನಡ ಭಾಷೆ ಆಡುಮಾತಿನಲ್ಲಿ ಮಾತ್ರವೇ ಉಳಿಯದೇ ದಾಖಲೀಕರಣವಾಗಬೇಕು: ಉಪ್ಪುಂದ ಚಂದ್ರಶೇಖರ ಹೊಳ್ಳ

Pinterest LinkedIn Tumblr

ಕುಂದಾಪುರ: ಕುಂದಾಪ್ರ ಕನ್ನಡ ಭಾಷೆ ಆಡುಮಾತಿನಲ್ಲಿ ಮಾತ್ರವೇ ಉಳಿಯದೇ ದಾಖಲೀಕರಣದತ್ತ ಶ್ರಮವಹಿಸಿದಾಗ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತದೆ. ಯಾವುದೇ ಭಾಷೆಗೆ ಶಾಸ್ತ್ರೀಯ ತಳಗಟ್ಟು ದೊರೆತಾಗ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ಹಿರಿಯ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳ ಹೇಳಿದರು.

ಅವರು ಕುಂದ ಅಧ್ಯಯನ ಕೇಂದ್ರ ಉಪ್ಪುಂದ, ಕುಂದಾಪ್ರ ಡಾಟ್ ಕಾಂ ಪೋರ್ಟೆಲ್ ಹಾಗೂ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಸಹಯೋಗದೊಂದಿಗೆ ಭಾನುವಾರ ಉಪ್ಪುಂದ ಶಂಕರ ಕಲಾಮಂದಿರದಲ್ಲಿ ಆಯೋಜಿಸಲಾದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಣ, ಪ್ರತಿಷ್ಠೆ, ಅಧಿಕಾರವೇ ಪ್ರಧಾನವಾಗಿರುವ ಹಾಗೂ ಅದಕ್ಕಾಗಿಯೇ ಸಾಂಸ್ಕೃತಿಕ ನಾಯಕರಂತೆ ಬಿಂಬಿಸಿಕೊಳ್ಳುವ ಈ ಕಾಲಘಟ್ಟದಲ್ಲಿ ನಶಿಸುತ್ತಿರುವ ಕಲೆ, ಸಂಸ್ಕೃತಿ, ಸಂಪ್ರದಾಯಗಳ ಪುನರುತ್ಥಾನಕ್ಕೆ ಶ್ರಮಿಸುವ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ ಎಂದರು.

ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮಾತನಾಡಿ, ಕುಂದಾಪ್ರ ಕನ್ನಡ ಬದುಕಿನೊಂದಿಗೆ ಬೆಸೆದುಕೊಂಡಿದೆ. ನಮ್ಮ ಪ್ರಧಾನ ಕಾಯಕವಾದ ಕೃಷಿಯಲ್ಲಿ, ಮೀನುಗಾರಿಕೆಯಲ್ಲಿ ವಿವಿಧ ಹಂತಗಳಲ್ಲಿ ಕುಂದಾಪ್ರ ಕನ್ನಡದ ನೂರಾರು ಹಾಡುಗಳನ್ನು ಬಳಸುತ್ತೇವೆ. ಅಂತಹ ಪದಗಳ ದಾಖಲೀಕರಣ ತುರ್ತಾಗಿ ಆಬೇಕಿದೆ. ಸಾಹಿತ್ಯ ಸಂಸ್ಕೃತಿಯ ಉಳಿವಿನೊಂದಿಗೆ ಭಾಷೆ ಬೆಳೆದರೆ ಅದಕ್ಕೊಂದು ಗಟ್ಟಿತನ ದೊರೆಯಲಿದೆ ಎಂದರು.

ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ನಿಕಟಪೂರ್ವ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ್, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್, ಉಪ್ಪುಂದ ಮೀನುಗಾರ ಮುಖಂಡ ಮದನ್ ಕುಮಾರ್, ಬೈಂದೂರು ಮಾತೃಮಂಡಳಿ ಅಧ್ಯಕ್ಷೆ ಗಾಯತ್ರಿ ರಾಮ ಸಭಾ ವೇದಿಕೆ ಉಪಸ್ಥಿತರಿದ್ದರು. ಝೋಮ್ ಮೀಟ್ ಮೂಲಕ ನಮ್ಮ ಕುಂದಾಪ್ರ ಕನ್ನಡ ಬಳಗದ ಪ್ರಧಾನ ಪೋಷಕರಾದ ಕಾಳವಾರ ವರದರಾಜ ಎಂ. ಶೆಟ್ಟಿ, ಪೋಷಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಸದನ್ ದಾಸ್, ಉಪಾಧ್ಯಕ್ಷ ಸುಜಿತ್ ಶೆಟ್ಟಿ ಕಾರ್ಯಕರ್ಶಿ ಸುಧಾಕರ ಪೂಜಾರಿ, ಧನಪಾಲ್ ಮತ್ತು ವಿವಿಧ ದೇಶಗಳ ಪ್ರತಿನಿದಿಗಳಾದ ರಾಮಚಂದ್ರ ಪ್ರಭು, ಸಂತೋಷ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಯುವ ಸಾಹಿತಿ ಶರತ್ ಶೆಟ್ಟಿ ಬಿಜೂರು ಅವರಿಗೆ ಕುಂದಾಪ್ರ ಕನ್ನಡ ದಿನದ ಗೌರವ ಸನ್ಮಾನ ಸಲ್ಲಿಸಲಾಯಿತು. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಹಾಗೂ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಪಡ್ಸಾಲೆ ಪ್ರದರ್ಶನ ಆಯೋಜಿಸಿದ ಶಿಕ್ಷಕ ದಂಪತಿ ಗಣಪತಿ ಹೋಬಳಿದಾರ್ ಹಾಗೂ ಜ್ಯೋತಿ ಗಣಪತಿ ಅವರನ್ನು ಸನ್ಮಾನಿಸಲಾಯಿತು.

ಬಹುಮಾನ ವಿತರಣೆ: ಕುಂದ ಕಂಠ – ಸಾಂಪ್ರದಾಯಕ ಹಾಡುಗಳ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಹಾಬಲ ಕೆ., ದ್ವಿತೀಯ ಬಹುಮಾನವನ್ನು ಮಂಜಿ ದೇವಾಡಿಗ, ತೃತೀಯ ಬಹುಮಾನವನ್ನು ಸಾನ್ವಿ ವಿ.ಎಸ್ ಯಳಜಿತ, ಪ್ರೋತ್ಸಾಹಕ ಬಹುಮಾನವನ್ನು ಧನಸ್ವಿ ಎಂ.ಜಿ., ಹಾಗೂ ಭಾಗೀರಥಿ ಸುರೇಶ್ ಪಡೆದುಕೊಂಡರು. ಕೊಟ್ಟಿ ಸೆಟ್ಟುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮೂಕಾಂಬು ಗಾಣಿಗ, ದ್ವಿತೀಯ ಬಹುಮಾನವನ್ನು ಶಾಲಿನಿ ನಾಗೇಶ್ ಹಾಗೂ ತೃತೀಯ ಬಹುಮಾನವನ್ನು ಪೂರ್ಣಿಮಾ ಪಡೆದುಕೊಂಡರು.

ಕುಂದಾಪ್ರ ಡಾಟ್ ಕಾಂ ಸಂಪಾದಕ ಸುನಿಲ್ ಹೆಚ್. ಜಿ. ಬೈಂದೂರು ಸ್ವಾಗತಿಸಿ, ಶಿಕ್ಷಕಿ ಲಕ್ಷ್ಮಿ ಬಿ. ಅವರು ವಂದಿಸಿದರು. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಪ್ರತಿನಿಧಿ ಅರುಣ್ ಕುಮಾರ್ ಶಿರೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದ ಅಧ್ಯಯನ ಕೇಂದ್ರ ಸಂಚಾಲಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದರು.

Comments are closed.