ಕರಾವಳಿ

ಬೈಂದೂರು, ಕೊಲ್ಲೂರು ಭಾಗದಲ್ಲಿ ಕಳ್ಳರ ವದಂತಿಯಿಂದ ಜನರಲ್ಲಿ ಭೀತಿ; ಪೊಲೀಸ್, ಗ್ರಾ.ಪಂ.ನಿಂದ ಸೂಕ್ತ ಜಾಗೃತಿ ಕ್ರಮ

Pinterest LinkedIn Tumblr

ಕುಂದಾಪುರ: ಬೈಂದೂರು ಹಾಗೂ ಕುಂದಾಪುರ ತಾಲೂಕಿನ‌ ಗ್ರಾಮೀಣ ಭಾಗದಲ್ಲಿ ರಾತ್ರಿ ಸಮಯ ಕಳ್ಳರ ಓಡಾಟವಿದೆ ಎಂಬ ವದಂತಿಯೊಂದು ಹರಿದಾಡುತ್ತಿದ್ದು ನಾಗರಿಕರು ಭೀತಿಯಾಗಿದ್ದಾರೆ.

(ಇಡೂರು-ಕುಂಜ್ಞಾಡಿ ಹಾಗೂ ಜಡ್ಕಲ್ ಗ್ರಾಮಪಂಚಾಯತಿಯಲ್ಲಿ ಸಂಬಂಧಿತ ವಿಚಾರದ ಬಗ್ಗೆ ವಿವಿಧ ಇಲಾಖೆಗಳಿಂದ ತುರ್ತು ಸಭೆ ನಡೆಯಿತು)

ಕೊಲ್ಲೂರು ಠಾಣಾ ವ್ಯಾಪ್ತಿಯ ಬೀಸಿನಪಾರೆ, ನಿಡುಟಿ, ಹುಯ್ಯಂಗಾರು, ಬೋಗಿಹಾಡಿ, ಜನ್ನಾಲು, ಹೊಸೂರು, ಜಡ್ಕಲ್, ಇಡೂರು-ಕುಂಜ್ಞಾಡಿ ಭಾಗದಲ್ಲಿ ಹಾಗೂ ಬೈಂದೂರು ವ್ಯಾಪ್ತಿಯ ತಗ್ಗರ್ಸೆ, ಶಿರೂರು, ಕಿರಿಮಂಜೇಶ್ವರ, ಯಳಜಿತ್ ಮೊದಲಾದ ಭಾಗದಲ್ಲಿ ವದಂತಿ ಕೇಳಿಬರುತ್ತಿದೆ.

ಯಾರೋ ಓಡಾಡಿದಂತೆ ಭಾಸವಾಗುವುದು, ಬಾಗಿಲು ತಟ್ಟುವುದು, ಟಾರ್ಚ್ ಲೈಟ್ ಬಿಡುವುದು, ನಾಯಿ ಬೊಗಳುವುದು ಎಂದು ಜನರು ಆರೋಪಿಸುತ್ತಿದ್ದಾರೆ. ಅಲ್ಲದೆ ಪೊಲೀಸರಿಗೂ ಮಾಹಿತಿ ನೀಡುತ್ತಿದ್ದಾರೆ. ಆದರೆ ತನಿಖೆ ಕೈಗೊಳ್ಳುವ ಪೊಲೀಸರಿಗೆ ಈವರೆಗೆ ಅಂತಹ ಘಟನೆಗಳು ನಡೆದ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆಯೂ ಖಾತ್ರಿಯಾದ ಕುರುಹು ಲಭಿಸಿಲ್ಲ. ಮುಂದುವರಿದು ಜನರೆ ಗಸ್ತು ತಿರುಗುವ ಬೆಳವಣಿಗೆಗಳು ವರದಿಯಾಗುತ್ತಿದೆ. ಮಾತ್ರವಲ್ಲದೆ ಗುಜರಿ ಆಯುವವರು, ಸಣ್ಣ ಪುಟ್ಟ ವಸ್ತುಗಳ ವ್ಯಾಪಾರಸ್ಥರು ಊರಿಗೆ ಮಾರಾಟಕ್ಕೆ ಬಂದಾಗ ಅವರನ್ನು ಅನುಮಾನದಿಂದ ಕಾಣುವುದಲ್ಲದೆ ಪೊಲೀಸರಿಗೆ ಹಿಡಿದೊಪ್ಪಿಸಿದ ಘಟನೆಗಳು ನಡೆದಿದೆ. ಪೊಲೀಸರು ಅಂತಹ ವ್ಯಕ್ತಿಗಳ ಕೂಲಂಕುಷ ತನಿಖೆಯನ್ನು ನಡೆಸಿದ ವಿದ್ಯಾಮಾನಗಳು ಬೆಳಕಿಗೆ ಬಂದಿದೆ. ಮತ್ತೊಂದು ಘಟನೆಯಲ್ಲಿ ಅನ್ಯ ಜಿಲ್ಲೆಯ ವಾಹನ ನೋಂದಣಿ ಸಂಖ್ಯೆಯ ವಾಹನವನ್ನು ಕೂಡ ಸ್ಥಳೀಯರು ಅನುಮಾನಾಸ್ಪದ ರೀತಿಯಲ್ಲಿ ನೋಡುತ್ತಿದ್ದು ಪೊಲೀಸರು ಬಂದು ವಿಚಾರಣೆ ನಡೆಸುವಂತಾಗಿದೆ.

ಇಂತಹ ವಿದ್ಯಾಮಾನಗಳ ಕುರಿತು ಸಂಬಂದಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿದ್ದು ಈಗಾಗಲೇ ಜಡ್ಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ತುರ್ತು ಗ್ರಾಮಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಕೆ, ದಾರಿದೀಪ ನಿರ್ವಹಣೆ ಸಹಿತ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದೆ. ಜನರಲ್ಲಿ ಯಾವುದೇ ಆತಂಕ ಬೇಡ. ಅನುಮಾನಸ್ಪದ ಘಟನೆಗಳು ಇದ್ದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

Comments are closed.