ಕರಾವಳಿ

ಉಡುಪಿಯ ಜನಮೆಚ್ಚಿದ ಬ್ರಹ್ಮಾವರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮಧು ಅವರಿಗೆ ಮುಖ್ಯಮಂತ್ರಿ ಪದಕ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ನಡೆದ ಕ್ಲಿಷ್ಟಕರ ಕ್ರೈಮ್ ಪ್ರಕರಣಗಳ ತನಿಖೆಯ ಜಾಡು ಹಿಡಿದು ಆರೋಪಿಗಳ ಪತ್ತೆ ಮಾಡುವಲ್ಲಿ ಚಾಣಾಕ್ಷ ಎಂದೇ ಬಿಂಬಿತರಾಗಿ, ಜನಮನ್ನಣೆಗೆ ಪಾತ್ರರಾದ ಪ್ರಸ್ತುತ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ‌ಆಗಿರುವ ಮಧು ಬಿ.ಇ ಅವರು 2023ನೇ ಸಾಲಿನ ಮುಖ್ಯಮಂತ್ರಿ ಪದಕದ ಗೌರವಕ್ಕೆ ಭಾಜನರಾಗಿದ್ದಾರೆ.

ಮೂಲತಃ ಶಿವಮೊಗ್ಗದವರಾದ ಮಧು ಅವರು ಇಂಜಿನಿಯರಿಂಗ್ ಪದವಿಧರರಾಗಿದ್ದು  2014 ಬ್ಯಾಚ್‌ನಲ್ಲಿ ನೇಮಕಾತಿ ಹೊಂದಿದ್ದು 2017 ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ಉಡುಪಿ ಜಿಲ್ಲೆಯ ಮಲ್ಪೆ, ಕಾರ್ಕಳ, ಕೋಟ, ಶಂಕರನಾರಾಯಣ ಸಹಿತ ಇದೀಗಾ ಬ್ರಹ್ಮಾವರದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ 126 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಘೋಷಿಸಲಾಗಿದ್ದು, ಅವರಲ್ಲಿ ಮಧು ಬಿ.ಇ. ಕೂಡ ಉಡುಪಿ ಜಿಲ್ಲೆಯಿಂದ ಒಬ್ಬರಾಗಿದ್ದಾರೆ.

ಇಡೀ ರಾಜ್ಯಕ್ಕೆ ತಲೆನೋವಾಗಿದ್ದ ಶಾಲೆಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರಾಜ್ಯ ಕಳ್ಳರನ್ನು ಬಂಧಿಸಿದ‌ ಕೇಸಿನಲ್ಲಿ ಪಿಎಸ್ಐ ಮಧು ಅವರು ಪ್ರಮುಖ ಪಾತ್ರ ವಹಿಸಿದ್ದರು. ಬ್ರಹ್ಮಾವರದಲ್ಲಿ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣ, ಉಡುಪಿ‌ ಮಲ್ಪೆ ಠಾಣಾ ವ್ಯಾಪ್ತಿಯ ನೇಜಾರು ಪ್ರಕರಣದ ಆರೋಪಿಗಳ ಪತ್ತೆ ತಂಡದಲ್ಲಿ ಮಧು ಅವರು ಮುಂಚೂಣಿ ಭಾಗವಾಗಿದ್ದರು.

Comments are closed.