(ವರದಿ: ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಕುಂದಾಪುರ ತಾಲೂಕಿನ ಶಂಕರನಾರಾಯಣದ ಸೌಡ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಮಾದರಿ ವಸತಿ ಶಾಲೆ ಕಟ್ಟಡಗಳ ಮೇಲ್ಭಾಗದಲ್ಲಿ ಗುಡ್ಡ ಜರಿತದ ಭೀತಿಯಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡುವೆಯೇ ಗುಡ್ಡ ಕುಸಿತವಾಗುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಗುಡ್ಡ ಜರಿಯದಂತೆ ನಿರ್ಮಿಸಿದ ತಡೆಗೋಡೆಗೂ ಹಾನಿಯಾಗಿರುವುದು ಕಂಡುಬಂದಿದೆ.
ಶಂಕರನಾರಾಯಣ ತಾಲೂಕು ರಚನಾ ಹೋರಾಟ ಸಮಿತಿಯ ನಿಯೋಗವು 2015-16ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದಾಗ ವಸತಿ ಶಾಲಾ ಬೇಡಿಕೆ ಮಂಜೂರಾತಿ ಮಾಡಿದ್ದರು ಎನ್ನಲಾಗಿದೆ. 2017ರಲ್ಲಿ ಶಂಕರನಾರಾಯಣದಲ್ಲಿ ಪ್ರಾರಂಭವಾದ ವಸತಿ ಶಾಲೆಯು ಮಾಸಿಕ 81 ಸಾವಿರ ರೂ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಮುಂದುವರಿದ ಬೆಳವಣಿಗೆಯಲ್ಲಿ ಇಲ್ಲಿಗೆ ಸಮೀಪದ ಸೌಡ ರಸ್ತೆಯ ಬಳಿ 8 ಎಕ್ರೆ ಜಾಗ ಸರಕಾರದಿಂದ ಮಂಜೂರುಗೊಂಡಿತ್ತು. ಜಾಗದ ತಕರಾರಿನಿಂದ ಕಟ್ಟಡ ನಿರ್ಮಾಣಕ್ಕೆ ಕಾನೂನು ತೊಡಕು ಬಂದಿದ್ದು ಸುಮಾರು ಒಂದೂವರೆ ವರ್ಷಗಳ ಕಾಲ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಾಗಿದ್ದು ಸ್ಥಳೀಯರ ಒತ್ತಾಸೆಯಂತೆ ಸಂಸದ ಬಿ.ವೈ. ರಾಘವೇಂದ್ರ, ಆಗಿನ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಪ್ರಯತ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಗೊಂಡು 24 ಕೋಟಿ ರೂಪಾಯಿಗೆ ಟೆಂಡರ್ ಆಗಿ 2023 ಮಾರ್ಚ್ ತಿಂಗಳಿನಲ್ಲಿ ಗುದ್ದಲಿ ಪೂಜೆ ನಡೆದು ಕೆಲಸ ಆರಂಭವಾಗಿತ್ತು.
ಏನಿದು ವಸತಿ ಶಾಲೆ ಉದ್ದೇಶ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮೊರಾರ್ಜಿ ವಸತಿ ಶಾಲೆಗಳನ್ನು ಆರಂಭಿಸಲಾಯಿತು. ಸುಮಾರು 250 ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ 6ನೇ ತರಗತಿಯಿಂದ ಎಸ್.ಎಸ್.ಎಲ್.ಸಿ ತನಕ ಉಚಿತ ಊಟ, ವಸತಿ, ಸಮವಸ್ತ್ರ, ಪಠ್ಯ ಪುಸ್ತಕ, ಲೇಖನ ಸಾಮಗ್ರಿ, ವಿಶೇಷ ಬೋಧನೆ, ಕಂಪ್ಯೂಟರ್ ಶಿಕ್ಷಣ, ಸಂಗೀತ ಮೊದಲಾದ ತರಬೇತಿ ನೀಡುವ ಜೊತೆಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡಲಾಗುತ್ತದೆ. ಸ್ಟಾಪ್ ನರ್ಸ್ ಕೂಡ ಇರಲಿದ್ದಾರೆ.
ಸುರಕ್ಷತೆಗೆ ಕ್ರಮವಹಿಸಲು ಸೂಚನೆ
ಸ್ಥಳಕ್ಕೆ ಸಮಾಜ ಇಲಾಖೆಯ ಉಪನಿರ್ದೇಶಕರೊಂದಿಗೆ ಭೇಟಿ ನೀಡಿದ್ದು ಕಾಮಗಾರಿ ನಿರ್ವಹಿಸುತ್ತಿರುವ ಕ್ರೈಸ್ ಸಂಸ್ಥೆಯವರಲ್ಲಿ ತಾಂತ್ರಿಕ ಗುಣಮಟ್ಟ ಹಾಗೂ ತಡೆಗೋಡೆ ನಿರ್ಮಾಣ ವಿಚಾರದಲ್ಲಿನ ಬಗ್ಗೆ ಈಗಾಗಲೇ ಪತ್ರ ಬರೆಯಲಾಗಿದೆ. ಕ್ರೈಸ್ ಸಂಸ್ಥೆ ಮುಖ್ಯ ಎಂಜಿನಿಯರ್, ತಾಂತ್ರಿಕ ವಿಭಾಗ ಭೇಟಿ ನೀಡಿ, ಪರಿಶೀಲನೆ ನಡೆಸಿ ತಡೆಗೋಡೆ ನಿರ್ಮಾಣ ಕಾರ್ಯ ಮಾಡಬಹುದು ಎಂದು ಸುರಕ್ಷತಾ ದೃಢೀಕರಣ, ತಾಂತ್ರಿಕ ಸದೃಢತೆ ಬಗ್ಗೆ ವರದಿ ನೀಡಬೇಕು. ಮುಂದೆ ಇಲ್ಲಿರಬೇಕಾದ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗಳ ಸುರಕ್ಷತೆ ಅಗತ್ಯ. ಆದ್ದರಿಂದ ಅಗತ್ಯ ಮುಂಜಾಗ್ರತಾ ಕ್ರಮವಹಿಸಲು ಸೂಚಿಸಲಾಗಿದೆ.
-ರಾಘವೇಂದ್ರ ವರ್ಣೇಕರ್ ಸಹಾಯಕ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ, ಕುಂದಾಪುರಅವೈಜ್ಞಾನಿಕ ಕಾಮಗಾರಿ ಸರಿಯಲ್ಲ
ಸಾರ್ವಜನಿಕರ ದೂರಿನ ಹಿನ್ನೆಲೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿದೆ. ಮೇಲ್ನೋಟಕ್ಕೆ ಕಳಪೆ ಕಂಡುಬಂದ ಹಿನ್ನೆಲೆ ತಕ್ಷಣ ಕಾಮಗಾರಿ ನಿಲ್ಲಿಸಲು ಆಗ್ರಹವಿದೆ. ಮುಂದಿನ ದಿನ ವಿದ್ಯೆಗಾಗಿ ಬರುವ ಮಕ್ಕಳಿಗೆ ಇಲ್ಲಿ ಸುರಕ್ಷತೆ ಇದೆಯಾ ಎಂಬ ಪ್ರಶ್ನೆ ಮೂಡುತ್ತಿದೆ. ಕೇರಳದ ವಯಮಾಡು, ಉತ್ತರಕನ್ನಡದ ಶಿರೂರು ಗುಡ್ಡ ಕುಸಿತದಿಂದ ಅಪಾರ ಸಾವು ನೋವು ಸಂಭವಿಸಿದ್ದು ಜಗತ್ತು ನೋಡಿದೆ. ಉಡುಪಿ ಜಿಲ್ಲೆಯ ಬೈಂದೂರು ಸಮೀಪದ ಒತ್ತಿನೆಣೆ, ಸೋಮೇಶ್ವರ ಭಾಗ ಕುಸಿತದ ಭೀತಿಯಲ್ಲಿರುವುದು ಎಲ್ಲರಿಗೂ ತಿಳಿದಿದೆ. ಮಕ್ಕಳು, ಬೋಧಕರು, ಸಿಬ್ಬಂದಿಗಳ ಹಿತದೃಷ್ಟಿಯಿಂದ ಕೂಡಲೇ ಸಂಬಂದಪಟ್ಟ ಸಂಸ್ಥೆಯ ಇಂಜಿನಿಯರ್, ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆದು ತಾಂತ್ರಿಕ ವಿಭಾಗದ ಒಪ್ಪಿಗೆ ಪಡೆಯಲು, ಸೂಕ್ತ ರೀತಿ ಕಾಮಗಾರಿ ನಡೆಸಲು ಒತ್ತಾಯಿಸಲಾಗಿದೆ. ಕಾಮಗಾರಿಗೆ ಈಗಾಗಾಲೇ ಬಳಸಲಾದ ಎಂ ಸ್ಯಾಂಡ್, ರಾಡುಗಳು, ಕಾಮಗಾರಿಯ ಸಂಪೂರ್ಣ ವೈಜ್ಞಾನಿಕತೆ ಬಗ್ಗೆ ತನಿಖೆಗೆ ಆಗ್ರಹವಿದೆ.
-ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು (ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ)
ಕಾಂಗ್ರೆಸ್ ನಿಯೋಗ ಭೇಟಿ:
ಸ್ಥಳಕ್ಕೆ ವಂಡ್ಸೆ ಹಾಗೂ ಬೈಂದೂರು ಬ್ಲಾಕ್ ಕಾಂಗ್ರೆಸ್ ನಿಯೋಗ ಮಂಗಳವಾರ ಭೇಟಿ ನೀಡಿದ್ದು ಅವ್ಯವಸ್ಥಿತ ಕಾಮಗಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ ಸ್ಥಳದಲ್ಲೆ ಕಾಮಗಾರಿ ನಡೆಸುತ್ತಿರುವ ಕ್ರೈಸ್ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಬಳಿ ದೂರವಾಣಿ ಮೂಲಕ ಚರ್ಚಿಸಿ ವೈಜ್ಞಾನಿಕವಾಗಿ ಕಾಮಗಾರಿ ನಡೆಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷ ಶೆಟ್ಟಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ತಾ.ಪಂ ಮಾಜಿ ಸದಸ್ಯರಾದ ವಾಸುದೇವ ಪೈ, ಉದಯ ಪೂಜಾರಿ ಚಿತ್ತೂರು, ಶಂಕರನಾರಾಯಣ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ, ಶಾಡಿಗುಂಡಿ ರಾಜೀವ ಶೆಟ್ಟಿ, ಹಾಲಿ ಸದಸ್ಯರಾದ ಮಂಜುನಾಥ ಕುಲಾಲ್ ಜನ್ಸಾಲೆ, ಗುರುದತ್ ಶೇಟ್, ಸುಧಾಕರ ಶೆಟ್ಟಿ ಉಳ್ಳೂರು, ಕಾಂಗ್ರೆಸ್ ಹಿರಿಯ ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಶರತ್ ಕುಮಾರ್ ಶೆಟ್ಟಿ, ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ ಮೊದಲಾದವರಿದ್ದರು.
ಕಾಮಗಾರಿ ನಡುವೆಯೇ ಆತಂಕ ಸೃಷ್ಟಿ!
ಶಂಕರನಾರಾಯಣದ ಸೌಡದಲ್ಲಿ ನಡೆಯುತ್ತಿರುವ ವಸತಿ ಶಾಲೆಗೆ ಸಂಬಂಧಿಸಿದಂತೆ ಒಟ್ಟು 5 ಕಟ್ಟಡಗಳಾಗಬೇಕಿದೆ. ಶಾಲಾ ಕಟ್ಟಡ, ಬಾಲಕ-ಬಾಲಕಿಯರ ಪ್ರತ್ಯೇಕ ವಸತಿನಿಲಯ, ಭೋಜನಾಲಯ, ಪ್ರಾಂಶುಪಾಲರ ಮತ್ತು ಸಿಬ್ಬಂದಿಗಳ ವಸತಿಗೃಹ ನಿರ್ಮಾಣವಾಗಬೇಕಿದ್ದು ಇದೀಗಾ 25-30% ಕೆಲಸ ಮಾತ್ರ ನಡೆಯುತ್ತಿದೆ. ಈ ಕಾಮಗಾರಿ ನಡುವೆಯೇ ಕಟ್ಟಡದ ಮೇಲ್ವಾಗದಲ್ಲಿರುವ ಬೃಹದಾಕಾರದ ಗುಡ್ಡ ಸ್ವಲ್ಪಸ್ವಲ್ಪವೇ ಕುಸಿತವಾಗಿರುವುದು ಕಂಡುಬರುತ್ತಿದೆ. ಇತ್ತೀಚಿನ ಭಾರೀ ಮಳೆಯೂ ಇದಕ್ಕೆ ಕಾರಣ ಎನ್ನಲಾಗಿದೆ. ಗುಡ್ಡ ಜರಿಯದಂತೆ ಕಟ್ಟಿದ ತಡೆಗೋಡೆ ಒಂದೆರಡು ಕಡೆ ಹಾನಿಯಾಗಿದ್ದು ಗುತ್ತಿಗೆ ಸಂಸ್ಥೆ ಮಾತ್ರ ಸಬೂಬು ಹೇಳುತ್ತಿದೆ. ಇನ್ನೂರಕ್ಕೂ ಅಧಿಕ ಮಕ್ಕಳು ವಿದ್ಯಾರ್ಜನೆ ಹಿನ್ನೆಲೆ ನೆಲೆಸುವ ದೊಡ್ಡದೊಂದು ವಸತಿ ವ್ಯವಸ್ಥೆಯು ಇಷ್ಟು ಅಪಾಯಕಾರಿಯಾಗಿರುವುದು ದುರಂತ. ಕಟ್ಟಡ ನಿರ್ಮಾಣ ಹಂತದಲ್ಲೇ ಅಗತ್ಯ ಕ್ರಮವನ್ನು ಸರಕಾರ, ಸಂಬಂದಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ಕೈಗೊಳ್ಳಬೇಕು. ಗುಡ್ಡ ಕುಸಿತವಾಗದಂತೆ ವೈಜ್ಞಾನಿಕ ಕಾಮಗಾರಿ ನಡೆಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಸಮಾಜ ಕಲ್ಯಾಣ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕಿ ಅನಿತಾ ಮಡ್ಲೂರು, ಕುಂದಾಪುರ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೇಕರ್ ಸ್ಥಳಕ್ಕೆ ಭೇಟಿ ನೀಡಿದ್ದು ಸುರಕ್ಷತೆಗೆ ಆದ್ಯತೆ ನೀಡಲು ಸಂಬಂದಪಟ್ಟವರಿಗೆ ಸೂಚಿಸಿದ್ದಾರೆ.
Comments are closed.