ಕರಾವಳಿ

ಕಾರ್ಕಳ ಅತ್ಯಾಚಾರ ಪ್ರಕರಣ: ಬೆಂಗಳೂರಿನಿಂದ ಡ್ರಗ್ಸ್ ತಂದಿದ್ದ ಆರೋಪಿಗಳು.!

Pinterest LinkedIn Tumblr

ಉಡುಪಿ: ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದ ಹಿಂದಿರುವ ಮಾದಕ ದ್ರವ್ಯ ಜಾಲದ ಬಗ್ಗೆ ಕಾರ್ಕಳ ನಗರ ಪೊಲೀಸರ ತನಿಖೆಯಲ್ಲಿ ಹಲವು ಮಹತ್ವದ ವಿಚಾರಗಳು ಬಹಿರಂಗಗೊಂಡಿವೆ.

ಆರೋಪಿ ಆಂಧ್ರಪ್ರದೇಶದ ಗಿರಿರಾಜು ಜಗಾಧಾಬಿ (31) ಹಾಗೂ ಶಂಕರಪುರದ ಜಾನ್‌ ನೊರೋನ್ಹಾ (30) ಅವರು ಈ ಮೊದಲು ಕುವೈಟ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಜಾನ್‌ ನೊರೋನ್ಹಾನಿಗೆ ಗಿರಿರಾಜು ಕರೆ ಮಾಡಿ ಡ್ರಗ್ಸ್‌ ಎಲ್ಲಿ ಸಿಗುತ್ತದೆ ಎಂದು ಕೇಳಿದ್ದ .
ಜಾನ್‌ ನೊರೋನ್ಹಾ ಸೂಚನೆಯಂತೆ ಗಿರಿರಾಜು ಉಡುಪಿಗೆ ಬಂದಿದ್ದು, ಅಲ್ಲಿ ಆತನಿಗೆ ಕಾರ್ಕಳದ ಶಾಹಿದ್‌(39)ನನ್ನು ಪರಿಚಯಿಸಲಾಗಿತ್ತು. ಶಾಹಿದ್‌ ಸ್ಥಳೀಯವಾಗಿ ಸುಮಾರು ಒಂದು ತಿಂಗಳಿನಿಂದ ಸಿಂಥೆಟಿಕ್‌ ಡ್ರಗ್ಸ್‌ಗೆ ಪ್ರಯತ್ನಿಸಿದ್ದ. ಸಿಗದಿದ್ದಾಗ ಅಭಯ್‌(23)ನನ್ನು ಸಂಪರ್ಕಿಸಿದ್ದ.

ಅಭಯ್‌ ಈ ಮೊದಲು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಆತ ಬೆಂಗಳೂರಿನಲ್ಲಿ ಡ್ರಗ್ಸ್‌ ಸಿಗುವ ಬಗ್ಗೆ ಖಚಿತಪಡಿಸಿ ಶಾಹಿದ್‌ ಹಾಗೂ ಗಿರಿರಾಜುನನ್ನು ಬೆಂಗಳೂರಿಗೆ ಬರಲು ತಿಳಿಸಿದ್ದ. ಕಾರ್ಕಳದಿಂದ ಶಾಹಿದ್‌, ಅಲ್ತಾಫ್‌ ಮತ್ತು ಅಭಯ್‌ನೊಂದಿಗೆ ಬೆಂಗಳೂರಿಗೆ ತೆರಳಿ ಅಲ್ಲಿ ಒಬ್ಬ ವ್ಯಕ್ತಿಯಿಂದ ಡ್ರಗ್ಸ್‌ ಖರೀದಿಸಿ ಗಿರಿರಾಜುವಿಗೆ ನೀಡಿರುತ್ತಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಈ ಮೂವರು ಆರೋಪಿಗಳು ಬ್ರೋಕರೇಜ್‌ ಕಮಿಷನ್‌ ಪಡೆದು, ಅದರಲ್ಲಿ ಸ್ವಲ್ಪ ಡ್ರಗ್ಸ್‌ ಅನ್ನು ಅಲ್ತಾಫ್‌ಗೆ ತಂದಿದ್ದರು. ಇದೇ ಡ್ರಗ್ಸ್‌ ಅನ್ನು ಅತ್ಯಾಚಾರ ಪ್ರಕರಣದ ದಿನ ಯುವತಿಗೆ ನೀಡಲಾಗಿದೆ ಎಂದು ಹೇಳಲಾಗಿದೆ. ಯುವತಿಗೆ ನೀಡಿ ಉಳಿದ ಡ್ರಗ್ಸ್‌ ಅನ್ನು ಅಲ್ತಾಫ್‌ನ ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ ಹಾಗೂ ಗಿರಿರಾಜುವಿನಿಂದ ಎಂಡಿಎಂಎ ಡ್ರಗ್ಸ್‌ ಅನ್ನುವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಆರೋಪಿಗಳಿಗೆ ಡ್ರಗ್ಸ್‌ ನೀಡಿದ ವ್ಯಕ್ತಿಯನ್ನು ಇನ್ನಷ್ಟೇ ಬಂಧಿಸಬೇಕಿದೆ.

Comments are closed.