ಕುಂದಾಪುರ: ಕೆರೆಯಲ್ಲಿ ಈಜಲು ಹೋದ 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.
ಬೈಂದೂರು ತಾಲೂಕು ಯಡ್ತರೆ ಗ್ರಾಮದ ಯೋಜನಾನಗರ ನಿವಾಸಿ ಕೂಲಿ ಕಾರ್ಮಿಕ ಕೃಷ್ಣ ದೇವಾಡಿಗ ಎಂಬುವರ ಮಗ ನಾಗೇಂದ್ರ (13) ಹಾಗೂ ಅಲ್ಲೇ ಸಮೀಪದ ನಿವಾಸಿ ಕಟ್ಟಡ ಸಾಮಾಗ್ರಿ ಪೂರೈಕೆ ಕೆಲಸ ಮಾಡಿಕೊಂಡಿರುವ ಬೈಂದೂರು ರೈಲ್ವೆ ನಿಲ್ದಾಣದ ಬಳಿಯ ಜಿ.ಎಂ ಕಂಪೌಂಡ್ ನಿವಾಸಿ ಶಾನು ಶಾಲಿಯಾನ್ ಎಂಬುವರ ಮಗ ಶಾನು ಮೊಹಮದ್ ಶಫಾನ್ (13) ಸಾವನ್ನಪ್ಪಿದ ಬಾಲಕರು.
ಬೈಂದೂರು ಸರಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳು. ಇಬ್ಬರೂ ಜೊತೆಗೆ ಕಲಿಯುತ್ತಿದ್ದರು. ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿದ್ದು ಮಂಗಳವಾರ ಇಂಗ್ಲಿಷ್ ಪರೀಕ್ಷೆ ಮುಗಿಸಿ ಮಧ್ಯಾಹ್ನ ಮನೆಗೆ ಬಂದು ಊಟ ಮಾಡಿದ ಬಳಿಕ ಸಂಜೆ 4 ಗಂಟೆ ಸುಮಾರಿಗೆ ಬೈಂದೂರು ಸೇನೇಶ್ವರ ದೇವಸ್ಥಾನದ ಹಿಂಬದಿಯ ಕೆರೆಕಟ್ಟೆ ಎಂಬ ಕೆರೆಯಲ್ಲಿ ಈಜಲು ಹೋಗಿದ್ದರು ಎನ್ನಲಾಗಿದೆ.
ರಾತ್ರಿಯಾದರೂ ವಿದ್ಯಾರ್ಥಿಗಳು ಮನೆಗೆ ಬಾರದೇ ಇದ್ದಾಗ ಕೆರೆ ಬಳಿ ಹುಡುಕಾಟ ನಡೆಸಿದಾಗ ಕೆರೆಯ ಬಳಿ ಒಂದು ಸೈಕಲ್, ಬಟ್ಟೆ ಹಾಗೂ ಎರಡು ಜೊತೆ ಚಪ್ಪಲಿ ಪತ್ತೆಯಾಗಿದೆ. ಬಳಿಕ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತ ದೇಹ ಪತ್ತೆಯಾಗಿದೆ. ಕೆರೆಕಟ್ಟೆ ಕೆರೆಯು ಮಧ್ಯದಲ್ಲಿ 40 ಅಡಿ ಹಾಗೂ ಸುತ್ತಲೂ 10-20 ಅಡಿ ಆಳವಿದೆ. ಈ ಕೆರೆಯಲ್ಲಿ ಪ್ರತಿ ದಿನ ಊರಿನವರು ಈಜಲು ಬರುತ್ತಿರುತ್ತಾರೆ. ಮಂಗಳವಾರ ದಿನ ಮಳೆ ಇದ್ದುದರಿಂದ ಯಾರು ಈಜಲು ಬಂದಿರಲಿಲ್ಲ ಎನ್ನಲಾಗಿದೆ. ಸರಿಯಾಗಿ ಈಜಲು ಬಾರದ ಇಬ್ಬರು ಈಜಲು ಹೋದಾಗ ಮುಳುಗಿ ಮೃತ ಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.