ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ವೈಭವದ ಮಂಗಳೂರು ದಸರಾ-2024ರ ಉದ್ಘಾಟನೆ ಇಂದು ( ಅ.3) ಬೆಳಗ್ಗೆ ನೆರವೇರಿತು. ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ರೂವಾರಿ ಬಿ.ಜನಾರ್ದನ ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಈ ಬಾರಿಯ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಮಂಗಳೂರು ದಸರಾ ಮಹೋತ್ಸವ ಇಂದಿನಿಂದ ಆರಂಭಗೊಂಡು ಅ.14 ರವರೆಗೆ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವೈಭವದಿಂದ ನಡೆಯಲಿದೆ.
ಆದಿಶಕ್ತಿ, ಮಹಾಗಣಪತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಠಾಪನೆ.
ಇಂದು ಬೆಳಗ್ಗೆ ( ಅ.3) ಬೆಳಗ್ಗೆ 8.30ಕ್ಕೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ ಧರ್ನುಲಗ್ನಂ, ಕಲಶ ಪ್ರತಿಷ್ಠೆ ನಡೆಯಿತು. ಬಳಿಕ ಶ್ರೀ ಕ್ಷೇತ್ರದ ವರ್ಣರಂಜಿತ ಅದ್ದೂರಿ ದಸರಾ ದರ್ಬಾರ್ ಮಂಟಪದಲ್ಲಿ ಶ್ರೀ ಮಹಾಗಣಪತಿ ಮತ್ತು ನವದುರ್ಗೆಯರ ಹಾಗೂ ಶಾರದಾ ಪ್ರತಿಷ್ಠೆ ನೆರವೇರಿತು. ಆದಿಶಕ್ತಿ, ಮಹಾಗಣಪತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಿ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿಯರ ಪ್ರತಿಷ್ಠಾಪನೆ ನೆರವೇರಿತು. ಶ್ರೀಶಾರದೆಯ ಮೂರ್ತಿ ಎಂದಿನಂತೆ ಅತ್ಯಾಕರ್ಷಕವಾಗಿ ರೂಪುಗೊಂಡಿದ್ದು ಭಕ್ತರ ಮನ ಸೆಳೆಯುತ್ತಿದೆ.
ಕಾಂಗ್ರೆಸ್ ನಾಯಕರಾದ ರಮಾನಾಥ ರೈ, ಶ್ರೀ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಉಪಾಧ್ಯಕ್ಷೆ ಊರ್ಮಿಳ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ( ಅಡ್ವಕೇಟ್), ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಬಿ.ಜಿ. ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಕೆ. ಮಹೇಶ್ಚಂದ್ರ, ಎಂ. ಶೇಖರ್ ಪೂಜಾರಿ, ಲೀಲಾಕ್ಷ ಕರ್ಕೇರಾ, ಚಂದನ್ದಾಸ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಗಳ ವಿವರ :
ಅ.4ರಂದು ಬೆಳಗ್ಗೆ 10.00ಕ್ಕೆ ದುರ್ಗಾಹೋಮ, 12.3೦ರಿಂದ ಅನ್ನಸಂತರ್ಪಣೆ. ಅ.5ರಂದು ಬೆಳಗ್ಗೆ ಗಂಟೆ 10.00ಕ್ಕೆ ಪಂಚ ದುರ್ಗಾಹೋಮ, 12.30ರಿಂದ ಅನ್ನಸಂತರ್ಪಣೆ, ಅ.6ರಂದು ಬೆಳಗ್ಗೆ ಗಂಟೆ 0.00ಕ್ಕೆ ಆರ್ಯ ದುರ್ಗಾಹೋಮ, 12.30ರಿಂದ ಅನ್ನಸಂತರ್ಪಣೆ. ಅ.7ರಂದು ಬೆಳಗ್ಗೆ 10.00ಕ್ಕೆ ಅಂಬಿಕಾ ದುರ್ಗಾ ಹೋಮ, 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ.
ಅ. 8ರಂದು ಬೆಳಗ್ಗೆ ಗಂಟೆ 10.00ಕ್ಕೆ ಭಗವತೀ ದುರ್ಗಾ ಹೋಮ (ಲಲಿತಾ ಪಂಚಮಿ) 12.30ರಿಂದ ಅನ್ನಸಂತರ್ಪಣೆ, ಅ. 9ರಂದು ಬೆಳಗ್ಗೆ ಗಂಟೆ 9.00ಕ್ಕೆ ಸಾಮೂಹಿಕ ಚಂಡಿಕಾ ಹೋಮ, ಕುಮಾರಿ ದುರ್ಗಾ ಹೋಮ, ಪುಷ್ಪಾಲಂಕಾರ ಮಹಾಪೂಜೆ, 12.30ರಿಂದ ಅನ್ನಸಂತರ್ಪಣೆ. ಅ.10ರಂದು ಬೆಳಗ್ಗೆ ಗಂಟೆ 10.00ಕ್ಕೆ ಮಹಿಷರ್ದಿನಿ ದುರ್ಗಾ ಹೋಮ, 12.30ರಿಂದ ಅನ್ನಸಂತರ್ಪಣೆ. ಅ.11ರಂದು ಬೆಳಗ್ಗೆ ಗಂಟೆ 10.00ಕ್ಕೆ ಚಂಡಿಕಾಹೋಮ ಹಗಲೋತ್ಸವ,12.30ರಿಂದ ಅನ್ನಸಂತರ್ಪಣೆ. ಅ.12ರಂದು ಬೆಳಗ್ಗೆ ಗಂಟೆ 10.00ಕ್ಕೆ ಸರಸ್ವತಿ ದುರ್ಗಾಹೋಮ, 11.30ರಿಂದ ಶತ ಸೀಯಾಳಾಭಿಷೇಕ, ಶಿವಪೂಜೆ (ಮಹಾನವಮಿ), ಮಹಾಅನ್ನಸಂತರ್ಪಣೆ ನಡೆಯಲಿದೆ.
ಅ.13 ರಂದು ಭವ್ಯ ಶೋಭಾಯಾತ್ರೆ:
ಅ.13ರಂದು ಬೆಳಗ್ಗೆ ಗಂಟೆ 10.00ರಿಂದ ವಾಗೀಶ್ವರಿ ದುರ್ಗಾಹೋಮ, 12.30ಕ್ಕೆ ಶಿವಪೂಜೆ. ಸಂಜೆ 4.00ರಿಂದ ಮಹಾಗಣಪತಿ, ನವದುರ್ಗೆ, ಆದಿಶಕ್ತಿಯೊಂದಿಗೆ ಶ್ರೀ ಶಾರದ ಮಾತೆಯ ಶೋಭಾಯಾತ್ರೆ ನಡೆಯಲಿದೆ.
ಕೇರಳದ ಮೈನವಿರೇಳಿಸುವ ಚೆಂಡೆ ವಾದ್ಯ, ರಾಜ್ಯದ ನಾನಾ ಕಡೆಯಿಂದ ಆಗಮಿಸುವ ಜಾನಪದ, ಸಾಂಸ್ಕೃತಿಕ ಹಿನ್ನಲೆಯ ನೃತ್ಯ ತಂಡಗಳು ನಾನಾ ಜಿಲ್ಲೆಯ, ರಾಜ್ಯಗಳ ಕಲಾ ತಂಡಗಳು, ಸ್ತಬ್ದ ಚಿತ್ರಗಳು ಭಾಗವಹಿಸಲಿವೆ. ಮಂಗಳೂರು ದಸರಾ ಮಹೋತ್ಸವ ಹಾದು ಹೋಗುವ ರಸ್ತೆ ಸೇರಿದಂತೆ ನಗರದ ಕಟ್ಟಡಗಳನ್ನು ಅಲಂಕರಿಸುವ ಮೂಲಕ ಮಹೋತ್ಸವಕ್ಕೆ ಮತ್ತಷ್ಟು ವೈಭವ ತುಂಬಲಿದೆ.
Comments are closed.