ಕರಾವಳಿ

ಬ್ರಹ್ಮಾವರ: ಆತ್ಮಹತ್ಯೆಗೆ ಶರಣಾದ ತಂದೆಯ ಅಸ್ವಾಭಾವಿಕ ಮರಣ ಪ್ರಕರಣ ಮುಚ್ಚಿಟ್ಟು ಮೃತದೇಹ ದಹನ ಮಾಡಿದ ಪುತ್ರನ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ನೇಣು ಬಿಗಿದುಕೊಂಡು‌ ಆತ್ಮಹತ್ಯೆಗೆ ಶರಣಾದ ತಂದೆಯ ಅಸ್ವಾಭಾವಿಕ ಮರಣ ಪ್ರಕರಣವನ್ನು ಪೊಲೀಸ್ ಠಾಣೆಗೆ ತಿಳಿಸದೆ ಮರೆಮಾಚಿ ಮೃತದೇಹ ಅಂತ್ಯಸಂಸ್ಕಾರ ಮಾಡಿದ ಘಟನೆಗೆ ಸಂಬಂಧಿಸಿದಂತೆ ಮೃತನ ಪುತ್ರನ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ: ಬ್ರಹ್ಮಾವರ ತಾಲೂಕಿನ 34ನೇ ಕುದಿ ಗ್ರಾಮದ ಬಿಯಾಳಿ ಹೊಸಗುಮ್ಮ ಎಂಬಲ್ಲಿ ಸುಬ್ರಾಯ ನಾಯ್ಕ (66) ಎನ್ನುವರು ಮಾನಸಿಕ ಖಾಯಿಲೆಯಿಂದ ಬೇಸತ್ತು ಸೆ.27 ರಂದು ಅವರ ಗದ್ದೆಯ ಹತ್ತಿರ ಇರುವ ಸೀತಾನದಿ ಹೊಳೆಗೆ ಹಾಕಿರುವ ಮೋಟಾರು ಶೆಡ್ ಪಕ್ಕದಲ್ಲಿರುವ ಗೇರು ಮರಕ್ಕೆ ಕೇಬಲ್ ವಯರ್ ನಿಂದ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಹಿರಿಯ ಮಗನಾದ ಆರೋಪಿ ಸೀತಾರಾಮ ನಾಯ್ಕ (39) ಎನ್ನುವರು ತನ್ನ ತಂದೆಯು ಸ್ವಾಭಾವಿಕವಾಗಿ ಮರಣ ಹೊಂದದೆ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ತಿಳಿದೂ ಕೂಡಾ ಈ ಬಗ್ಗೆ ಪೊಲೀಸ್ ಠಾಣೆಗೆ ಮತ್ತು ಸಂಬಂಧಪಟ್ಟ ಇಲಾಖೆಗೆ ಕಾನೂನಾತ್ಮಕವಾಗಿ ಮಾಹಿತಿ ನೀಡದೇ ಅಂದು ಸಂಜೆ 6 ಗಂಟೆಗೆ ತಂದೆ ಮೃತದೇಹವನ್ನು ದಹನ ಮಾಡಿದ್ದರು. ಈ ಬಗ್ಗೆ ಅ.3 ರಂದು ಪೊಲಿಸರಿಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ವಿಚಾರಿಸಿ ನಡೆದ ಕೃತ್ಯವನ್ನು ಖಚಿತಪಡಿಸಿಕೊಂಡು ಆರೋಪಿ ಸೀತಾರಾಮ ನಾಯ್ಕ ವಿರುದ್ದ ಸ್ವಯಂಪ್ರೇರಿತ (ಸೂಮೋಟೋ) ದೂರು ದಾಖಲಿಸಿಕೊಂಡು ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿದ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಅಸ್ವಾಭಾವಿಕ ಪ್ರಕರಣಗಳಾದ ಇಲಾಖೆಗೆ ಮಾಹಿತಿ ನೀಡಿ:
ಯಾವುದೇ ಅಸ್ವಾಭಾವಿಕ ಮರಣ ಪ್ರಕರಣಗಳಾದಾಗ ಸಂಬಂಧಪಟ್ಟ ಇಲಾಖೆಗೆ ವಾರೀಸುದಾರರು ಅಥವಾ ಸಂಬಂಧಿತರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅಸ್ವಾಭಾವಿಕ ಮರಣ ಪ್ರಕರಣ (ಯುಡಿಆರ್) ದಾಖಲಿಸುವುದು ಕಾನೂನು ಚೌಕಟ್ಟಿನಡಿರುವ ನಿಯಮವಾಗಿದೆ. ಯುಡಿಆರ್ ದಾಖಲಿಸದೆ ಮೃತದೇಹ ಅಂತ್ಯಕ್ರಿಯೆ ಮಾಡುವುದು ಅಪರಾಧ ಕೃತ್ಯವಾಗುತ್ತದೆ.
– ಡಾ. ಅರುಣ ಕೆ. (ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ)

Comments are closed.