ಕರಾವಳಿ

ಉಡುಪಿ-ಕುಂದಾಪುರದಿಂದ ತಿರುಪತಿಗೆ ನೇರ ರೈಲು ಸಂಪರ್ಕ: ಯಾತ್ರಾರ್ಥಿಗಳು ಫುಲ್ ಖುಷ್..!

Pinterest LinkedIn Tumblr

ಕುಂದಾಪುರ: ಪ್ರಸಿದ್ಧ ಪುಣ್ಯ ಕ್ಷೇತ್ರವಾದ ತಿರುಪತಿಗೆ ಉಡುಪಿ, ಕುಂದಾಪುರದಿಂದ ನೇರ ರೈಲು ಸಂಪರ್ಕ ಕಲ್ಪಿಸಬೇಕು ಅನ್ನುವ ಈ ಭಾಗದ ಜನರ ಬಹುದಿನಗಳ ಬೇಡಿಕೆ ಕೊನೆಗೂ ಈಡೇರಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೇ ಸಚಿವಾಲಯವು ಮಂಗಳೂರುವರೆಗೆ ಬರುತ್ತಿದ್ದ ರೈಲು (12789/12790) ಅನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲು ಒಪ್ಪಿಗೆ ನೀಡಿ ಆದೇಶಿಸಿದೆ. ಈ ರೈಲು ಸೇವೆಯೊಂದಿಗೆ ಹೈದರಾಬಾದ್‌ ನಗರಿಯೊಂದಿಗೂ ಸಂಪರ್ಕ ಸಾಧ್ಯವಾಗಲಿದೆ.

ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತ್ತಿದ್ದ ಕಾಚಿಗುಡ – ಮಂಗಳೂರು ನಡುವೆ ವಾರಕ್ಕೆರಡು ದಿನ ಸಂಚರಿಸುತ್ತಿದ್ದ ರೈಲನ್ನು ಉಡುಪಿ, ಕುಂದಾಪುರದ ಮೂಲಕ ಮುರ್ಡೇಶ್ವರದವರೆಗೆ ವಿಸ್ತರಣೆ ಮಾಡಬೇಕೆಂಬ ಸಂಸದರ ಮನವಿಗೆ ಭಾರತೀಯ ರೈಲ್ವೇ ಸ್ಪಂದಿಸಿದೆ.

ರೈಲು ವೇಳಾಪಟ್ಟಿ
ಈ ರೈಲು ಬುಧವಾರ ಮತ್ತು ಶನಿವಾರ ಮುರ್ಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡಲಿದ್ದು, ಕುಂದಾಪುರಕ್ಕೆ ಸಂಜೆ 4.40, ಮಂಗಳೂರು ರಾತ್ರಿ 8, ತಿರುಪತಿ ಬಳಿಯ ರೇಣಿಗುಂಟಕ್ಕೆ ಮರುದಿನ ಬೆಳಗ್ಗೆ 11.45 ಹಾಗೂ ಹೈದರಾಬಾದಿನ ಕಾಚಿಗುಡ ನಿಲ್ದಾಣಕ್ಕೆ ಸಂಜೆ 6ಕ್ಕೆ ತಲುಪಲಿದೆ. ಬಳಿಕ ಮರಳಿ ಕಾಚಿಗುಡದಿಂದ ಬೆಳಗ್ಗೆ 6ಕ್ಕೆ ಹೊರಡಲಿದ್ದು, ರೇಣಿಗುಂಟಕ್ಕೆ ಸಂಜೆ 5, ಮಂಗಳೂರಿಗೆ ಮರುದಿನ ಬೆಳಗ್ಗೆ 9.30, ಕುಂದಾಪುರಕ್ಕೆ 11.59 ಹಾಗೂ ಮುರ್ಡೇಶ್ವರಕ್ಕೆ ಮಧ್ಯಾಹ್ನ 2 ಗಂಟೆಗೆ ತಲುಪಲಿದೆ.

ಮುರ್ಡೇಶ್ವರದ ಮೂಲಕ ಬೈಂದೂರು,ಕುಂದಾ ಪುರ, ಉಡುಪಿ, ನಗರಗಳು ಕೊಯಮತ್ತೂರು, ತಿರುಪತಿ, ಮಂತ್ರಾಲಯ ಸಮೀಪದ ದೊನೆ ಜಂಕ್ಷನ್‌ ಸೇರಿದಂತೆ ಹೈದರಾಬಾದ್‌ವರೆಗೆ ರೈಲು ಸಂಪರ್ಕ ಪಡೆಯಲಿದೆ.

Comments are closed.