ಕರಾವಳಿ

ಉಡುಪಿ ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಬ್ರಹ್ಮಾವರ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 

Pinterest LinkedIn Tumblr

ಉಡುಪಿ: ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ ಮೂರು ದಶಕಗಳ ಪ್ರಾಮಾಣಿಕ ಸೇವೆ ಸಲ್ಲಿಸಿ, 25 ವರ್ಷಗಳಿಂದ ಉಡುಪಿ ಮಿತ್ರ ಪತ್ರಿಕೆ ಸಂಪಾದಕರಾಗಿರುವ, ಬ್ರಹ್ಮಾವರ ವಲಯ ಪತ್ರಕರ್ತರ ಸಂಘ, ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯನ್ನು ಗಟ್ಟಿಯಾಗಿ ಕಟ್ಟಿಬೆಳೆಸಿದ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಹಾಗೂ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಪತ್ರಿಕಾ ಕ್ಷೇತ್ರದಲ್ಲಿ ಉಡುಪಿ ಜಿಲ್ಲಾಡಳಿತ 2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಭಾಕರ ಆಚಾರ್ಯ ಅವರು ಬ್ರಹ್ಮಾವರ ಪತ್ರಕರ್ತರ ಸಂಘದ ಮೂಲಕ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸ್ಥಾಪಿಸಿ ತಾಲೂಕು ಸಂಘದ ಸದಸ್ಯರ ನೆರವಿನೊಂದಿಗೆ ರಾಜ್ಯಕ್ಕೆ ಮಾದರಿಯಾಗುವ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ಹಾಗೂ ಉಡುಪಿಮಿತ್ರ ಪತ್ರಿಕೆಯ ಮೂಲಕ ನಿರಂತರವಾಗಿ ಜನಪರ ವರದಿಗಳನ್ನು ಪ್ರಕಟಿಸುತ್ತಿದ್ದಾರೆ ಹಾಗೂ ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನದ ಸೇವಾದಳ ಅಧ್ಯಕ್ಷರಾಗಿ, ಪ್ರಸ್ತುತ ಆಡಳಿತ ಮಂಡಳಿ ಎರಡನೇ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2024ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
25 ವರ್ಷಗಳನ್ನು ಪೂರೈಸಿ ರಜತ ಮಹೋತ್ಸವ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದೆ.

ದ.ಕ. ಜಿಲ್ಲೆಯಿಂದ ಪ್ರತ್ಯೇಕಗೊಂಡು 1997ರಲ್ಲಿ ನೂತನ ಉಡುಪಿ ಜಿಲ್ಲೆ ರಚನೆಯಾದ ಹಿನ್ನೆಲೆಯಲ್ಲಿ ಉಡುಪಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು 1998ರಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವಾಗಿ ಸ್ಥಾಪನೆಗೊಂಡಿತು. ಹಿರಿಯ ಪತ್ರಕರ್ತ ದಿವಂಗತ ದಾಮೋದರ್ ಐತಾಳ್ ಸ್ಥಾಪಕಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಅಲ್ಲಿಂದ ಹಲವು ಹಿರಿಯ ಪತ್ರಕರ್ತರ ಅಧ್ಯಕ್ಷತೆಯಲ್ಲಿ ಸಂಘವು ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಇದೀಗ 25ನೇ ವರ್ಷವನ್ನು ಪೂರೈಸಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ.

ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಇದರ ಅಧೀನದಲ್ಲಿರುವ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಸ್ತುತ 2023-24ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಒಟ್ಟು 185 ಮಂದಿ ಸದಸ್ಯರನ್ನು ಹೊಂದಿದೆ.

ಸಂಘದ ಅಧೀನದಲ್ಲಿ ಬೈಂದೂರು, ಕುಂದಾಪುರ, ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕಾಪು ತಾಲೂಕು ಸಂಘಗಳು ಮತ್ತು ಉಡುಪಿ ಪತ್ರಿಕಾ ಭವನ ಸಮಿತಿಯು ಕಾರ್ಯನಿರ್ವಹಿಸುತ್ತಿದೆ. ಸಂಘವು ಉಡುಪಿ ಬ್ರಹ್ಮಗಿರಿಯ ನಾಯರ್‌ಕೆರೆಯಲ್ಲಿರುವ ಪತ್ರಿಕಾ ಭವನದಲ್ಲಿ ಕೇಂದ್ರ ಕಚೇರಿಯೊಂದಿಗೆ ಕಾರ್ಯಚರಿಸುತ್ತಿವೆ. ಪ್ರತಿವರ್ಷ ಸಂಘದ ಸದಸ್ಯರಿಗೆ ಸದಸ್ಯತ್ವದ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದೆ.

ಸಂಘವು ಸಂಘದ ಸದಸ್ಯರುಗಳಿಗಾಗಿ ಹಲವು ಮಹತ್ತರ ಯೋಜನೆ, ಯೋಚನೆಗಳನ್ನು ಅನುಷ್ಟಾನಕ್ಕೆ ತಂದಿದ್ದು, ಸಾಮಾಜಿಕವಾಗಿಯೂ ತೊಡಗಿಸಿ ಕೊಂಡಿದೆ. ಪ್ರತಿವರ್ಷ ಜುಲೈ ಒಂದರಂದು ಪತ್ರಿಕಾ ದಿನವನ್ನು ಆಚರಿಸಿ ಪತ್ರಕರ್ತರಿಗೆ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪತ್ರಿಕೆಯ ಮಹತ್ವವನ್ನು ತಿಳಿಸುವ ಕಾರ್ಯ ಮಾಡಿಕೊಂಡು ಬರುತ್ತಿದೆ. ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮಕ್ಕೆ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತರನ್ನು ಗುರುತಿಸಿ ಪತ್ರಿಕಾ ದಿನದ ಗೌರವವನ್ನು ಸಲ್ಲಿಸುತ್ತಿದೆ.

ಅದೇ ರೀತಿ ಪತ್ರಿಕೋದ್ಯಮ ವಿದ್ಯಾರ್ಥಿ ವಿದ್ಯಾರ್ಥಿ ವೇತನ ಹಾಗೂ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸುತ್ತಿದೆ. ಪ್ರತಿವರ್ಷ ಕ್ರೀಡಾಕೂಟವನ್ನು ಹಮ್ಮಿಕೊಳ್ಳುವ ಮೂಲಕ ಸದಾ ಕಾರ್ಯ ಒತ್ತಡದಲ್ಲಿರುವ ಪತ್ರಕರ್ತರಲ್ಲಿ ಮಾನಸಿಕ ನೆಮ್ಮದಿ ಹಾಗೂ ಕ್ರೀಡಾಸ್ಪೂರ್ತಿಯನ್ನು ಮೂಡಿಸುವ ಕಾರ್ಯವನ್ನು ಕೂಡ ಸಂಘ ಮಾಡಿಕೊಂಡು ಬರುತ್ತಿದೆ. ಪ್ರತಿವರ್ಷ ಸಂಘದ ಸದಸ್ಯರಿಗೆ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಸಂಘ ಹಮ್ಮಿಕೊಳ್ಳಲಾಗುತ್ತಿದೆ. ಸಂಘದ ಸದಸ್ಯರಿಗೆ ಪ್ರತಿವರ್ಷ ವಾರ್ಷಿಕ ಪ್ರವಾಸವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ

ರಜತ ಮಹೋತ್ಸವದ ಹಿನ್ನೆಲೆಯಲ್ಲಿ ವರ್ಷ ಇಡೀ 25 ಕಾರ್ಯಕ್ರಮಗಳನ್ನು ಸಂಘ ಯಶಸ್ವಿಯಾಗಿ ನಡೆಸಿದೆ. ಮುಖ್ಯವಾಗಿ ರಜತ ಮಹೋತ್ಸವ ಪ್ರಯುಕ್ತ ಸಂಘದ ಸದಸ್ಯರುಗಳಿಗಾಗಿ ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ ಆ ಮೂಲಕ ಅನಾರೋಗ್ಯ ಪೀಡಿತ ಹಾಗೂ ಅಪಘಾತಕ್ಕೆ ಒಳಗಾದ ಸಂಘದ ಸದಸ್ಯರುಗಳಿಗೆ ನೆರವು ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ಹೊಸ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಸಂಘದ ಯೂಟ್ಯೂಬ್ ಚಾನೆಲ್ ಹಾಗೂ ಫೇಸ್‌ಬುಕ್ ಪೇಜ್ ಆರಂಭಿಸಿ, ತಮ್ಮ ಕಾರ್ಯಕ್ರಮಗಳ ದಾಖಲೀಕರಣ ಕಾರ್ಯ ಮಾಡಲಾಗುತ್ತಿದೆ.

ಸಂಘವು ಕೋವಿಡ್ ಸಂದರ್ಭದಲ್ಲಿ ಬಡಾ ಪತ್ರಿಕಾ ವಿತರಕರಿಗೆ ಹಾಗೂ ಸಂಘದ ಸದಸ್ಯರುಗಳಿಗೆ ಪಡಿತರ ಕಿಟ್‌ಗಳನ್ನು ವಿತರಿಸಿದೆ. ಸಂಘದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕೊರೋನಾ ಹಿನ್ನೆಲೆಯಲ್ಲಿ ಸಂಘದ ಸದಸ್ಯರುಗಳಿಗೆ ಕೋವಿಶೀಲ್ಡ್ ಡೋಸ್‌ಗಳನ್ನು ವಿತರಿಸಲಾಗಿದೆ.

ಸಂಘದ ವತಿಯಿಂದ ಮಾಧ್ಯಮ ಸಂವಾದ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದ್ದು, ಇದರಲ್ಲಿ ಸಚಿವರು, ವಿವಿಧ ಇಲಾಖೆಯ ಅಧಿಕಾರಿಗಳು, ಕಾನೂನು ತಜ್ಞರು, ವೈದ್ಯರು ಹಾಗೂ ಗಣ್ಯರು ಭಾಗವಹಿಸುತ್ತಿದ್ದಾರೆ. ಈ ಮೂಲಕ ವಿವಿಧ ಮಾಹಿತಿ, ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಕಾರ್ಯ ಮಾಡಲಾಗುತ್ತಿದೆ.

ಈ ಸಂವಾದ ಕಾರ್ಯಕ್ರಮದಲ್ಲಿ ಈವರೆಗೆ ಜಿಲ್ಲಾಧಿಕಾರಿ ಜಿ.ಜಗದೀಶ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಹಾಗೂ ವಕೀಲ ವಿವೇಕಾನಂದ ಪನಿಯಾಲ, ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ, ಉಡುಪಿ ಜಿಲ್ಲಾಧಿಕಾರಿ ಕುರ್ಮಾರಾವ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಮೊದಲಾದವರು ಭಾಗವಹಿಸಿದ್ದರು.

ಕಳೆದ ಹಡಿಲು ಭೂಮಿ ಕೃಷಿ ಆಂದೋಲನದಡಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ಹಡಿಲು ಭೂಮಿ ಕೃಷಿ ನಾಟಿ ಕಾರ್ಯದಲ್ಲಿ ಸಂಘದ ಸದಸ್ಯರು ಕೈಜೋಡಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ವರ್ಷ ವಿವಿಧ ಸಂಘಗಳ ಸಹಯೋಗದೊಂದಿಗೆ ಪತ್ರಕರ್ತರಿಗಾಗಿ ಆತ್ಮಹತ್ಯೆ ನಿಯಂತ್ರಣ: ಸಾಮಾಜಿಕ ಜವಾಬ್ದಾರಿ ಕುರಿತು ವಿಚಾರ ಸಂಕಿರಣವನ್ನು ಉಡುಪಿ ಪತ್ರಿಕಾ ಭವನದಲ್ಲಿ ಆಯೋಜನೆ ಮಾಡಲಾಗಿತ್ತು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ಬೇರೆ ಜಿಲ್ಲೆಗಳಿಗೆ ವರ್ಗಾವಣೆಗೊಳ್ಳುವ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಕೂಡ ಸಂಘ ಮಾಡುತ್ತಿದೆ. ಮಾಧ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳದಂತೆ ಸಂಘದ ವತಿಯಿಂದ ಸಂಘದ ಸದಸ್ಯರುಗಳ ವಾಹನಗಳಿಗೆ ಮಿಡಿಯಾ ಸ್ಟಿಕ್ಕರ್‌ಗಳನ್ನು ಪ್ರತಿವರ್ಷ ವಿತರಿಸಲಾಗುತ್ತಿದೆ. ಸಂಘದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಪತ್ರಕರ್ತರಿಗೆ ಜಿ.ಶಂಕರ್ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗಿತ್ತು.

ಉಡುಪಿ ಜಿಲ್ಲೆಯ ರಜತ ಮಹೋತ್ಸವದ ಪ್ರಯುಕ್ತ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಜಯ ಪ್ರಕಾಶ್ ಹೆಗ್ಡೆ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿ ಆ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ವರದಿ ಮಾಡಿರುವ ಪತ್ರಕರ್ತರಿಗೆ ಗೌರವ ಅರ್ಪಣೆ ಕೂಡ ಮಾಡಲಾಗಿತ್ತು.

ಅನಾರೋಗ್ಯ ಪೀಡಿತ ಸಂಘದ ಸದಸ್ಯ ಪತ್ರಕರ್ತರ ಚಿಕಿತ್ಸೆಗೆ ರಾಜ್ಯ ಸರಕಾರ ದಿಂದ ಪರಿಹಾರ ಹಣವನ್ನು ಮಂಜೂರು ಮಾಡುವ ಕಾರ್ಯವನ್ನು ಕೂಡ ಮಾಡಿದೆ. ಅಂಚೆ ಇಲಾಖೆಯ ಸಹಯೋಗದೊಂದಿಗೆ ಪತ್ರಕರ್ತರಿಗೆ ಅಪಘಾತ ವಿಮೆಯನ್ನು ನೋಂದಾಣಿ ಮಾಡಿಸಲಾಗಿದೆ. ಸಂಘದ ಸಹಯೋಗದೊಂದಿಗೆ ಉಡುಪಿ ಜಿಲ್ಲಾಡಳಿತದ ವತಿಯಿಂದ ಚುನಾವಣೆ ಸಂದರ್ಭ ಮಾದರಿ ನೀತಿ ಸಂಹಿತೆ, ಸಾಮಾಜಿಕ ಜಾಲತಾಣಗಳ ಬಳಕೆ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಜವಾಬ್ದಾರಿ ಮತ್ತಿತ್ತರ ವಿಷಯಗಳ ಕುರಿತು ಡಿಸಿ ಮತ್ತು ಎಸ್ಪಿಯವರಿಂದ ಕಾರ್ಯಾಗಾರವು ನಡೆಸಲಾಗಿದೆ.

ಎ.12ರ ಸಂಘದ ಸ್ಥಾಪನಾ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಿಗೆ ಸ್ಥಾಪನಾ ದಿನದ ಗೌರವ ಸಲ್ಲಿಸಲಾಗುತ್ತಿದೆ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಅವರೊಂದಿಗೆ ಸಂವಾದ,ವಜಿಲ್ಲೆಯ ಪತ್ರಕರ್ತರಿಗೆ ಪೊಕ್ಸೋಕಾಯ್ದೆ ಕುರಿತು ಕಾರ್ಯಾಗಾರ, ಅಪರಾಧ ಕೃತ್ಯಗಳಲ್ಲಿ ಫಾರೆನ್ಸಿಕ್ ಪರೀಕ್ಷೆಗಳ ಪಾತ್ರ ಕುರಿತ ವಿಚಾರ ಸಂಕಿರಣ, ಭೂಕುಸಿತ ನೆರೆಹಾವಳಿ ಹಾಗೂ ಬೆಂಕಿ ಅವಘಡಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಾ ಕಾರ್ಯಕ್ರಮವನ್ನು ಕೂಡ ಸಂಘ ನಡೆಸಿದೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ದಿನದ ಪ್ರಯುಕ್ತ ಉಡುಪಿ ಪತ್ರಿಕಾ ಭವನ ಪರಿಸರದಲ್ಲಿ ಪತ್ರಕರ್ತರು ಲಾರ್ವ ಸಮೀಕ್ಷೆ ನಡೆಸಿ, ಲಾರ್ವ ನಾಶ ಸಾರ್ವಜನಿಕರಿಗೆ ಕರಪತ್ರ ವಿತರಿಸಿ ಡೆಂಗ್ಯು ಕಾಯಿಲೆ ಕುರಿತು ಅರಿವು ಮೂಡಿಸಲಾಗಿದೆ. ಇದರಲ್ಲಿ ಹೆಚ್ಚಿನ ಪತ್ರಕರ್ತರು ಭಾಗವಹಿಸಿ ತಮ್ಮ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದರು.

ಸಂಘದ ಹಲವು ಮಹಾತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಪತ್ರಿಕಾ ಭವನದಲ್ಲಿ ಗ್ರಂಥಾಲಯ ಸ್ಥಾಪಿಸಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಸಾರ್ವಜನಿಕರು ಹಾಗೂ ಪತ್ರಕರ್ತರಿಗೆ ಅನುಕೂಲವಾಗುವ ಪುಸ್ತಕಗಳನ್ನು ಇಡಲಾಗಿದೆ.

ಹೀಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸಮಾಜ ಮುಖಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಹಾಗೂ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Comments are closed.