ಕರಾವಳಿ

ಮಂಗಳೂರು ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಮೂವರು ಯುವತಿಯರು ಸಾವು

Pinterest LinkedIn Tumblr

ಮಂಗಳೂರು: ಮಂಗಳೂರಿನ ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್‌ ನ ಸ್ವಿಮ್ಮಿಂಗ್‌ ಪೂಲ್‌ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಘಟನೆ ನ.17 ರವಿವಾರ ನಡೆದಿದೆ.

ಮೈಸೂರು ಮೂಲದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಕೀರ್ತನಾ ಎನ್ (21), ನಿಶಿತಾ ಎಂ ಡಿ (21) ಮತ್ತು ಪಾರ್ವತಿ ಎಸ್ (20) ಎಂದು ಗುರುತಿಸಲಾಗಿದೆ.

ಈ ಮೂವರು ಯುವತಿಯರು ಶನಿವಾರ ಮುಂಜಾನೆ ರೆಸಾರ್ಟ್‌ ಗೆ ಬಂದಿದ್ದರು. ರವಿವಾರ ಬೆಳಗ್ಗೆ 10.30 ಸಮಯಕ್ಕೆ ಈಜುಕೊಳದಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಓರ್ವ ಯುವತಿ ನೀರಿನಲ್ಲಿ ಮುಳುಗಿದ್ದು, ರಕ್ಷಣೆಗೆ ಮುಂದಾಗಿದ ಮತ್ತೊಬ್ಬಾಕೆಯೂ ಮುಳುಗಿದ್ದ ಕಾರಣ ಮೂರನೇ ಯುವತಿಯೂ ರಕ್ಷಣೆಗೆ ಮುಂದಾಗಿದ್ದಾಳೆ. ಕೆಲವೇ ನಿಮಿಷದ ಅಂತರದಲ್ಲಿ ಈ ಘಟನೆ ನಡೆದಿದೆ.

ರೆಸಾರ್ಟ್ ಸಿಬ್ಬಂದಿಗಳು ಈಜುಕೊಳದ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಯುವತಿಯರು ನೀರಿನಲ್ಲಿ ಮುಳುಗುತ್ತಿರುವ ದೃಶ್ಯ ರೆಸಾರ್ಟ್ ಸಿಸಿಟಿವಿಯಲ್ಲಿ ದಾಖಲಾಗಿದೆ. ಉಳ್ಳಾಲ ಪೊಲೀಸ್ ಇನ್ಸ್‌ಪೆಕ್ಟರ್ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.