ಬಂಟ್ವಾಳ: ಕೆದಿಲ ಗ್ರಾಮದಲ್ಲಿ ರವಿವಾರ ಮಿಂಚು-ಸಿಡಿಲಿನ ತೀವ್ರತೆಯ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಮನೆಯ ಸಿಟೌಟ್‌ನಲ್ಲಿದ್ದ ಬಾಲಕನಿಗೆ ಏಕಾಏಕಿ ಸಿಡಿಲು ಬಡಿದಿದ್ದು ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಕೆದಿಲ ಗ್ರಾಮದ ಪೇರಮೊಗ್ರು ಸಮೀಪದ ಮುರಿಯಾಜೆ ನಿವಾಸಿ ಚಂದ್ರಹಾಸ ಅವರ ಪುತ್ರ ಸುಬೋಧ್ ಸಿ. (14) ಮೃತಪಟ್ಟ ಬಾಲಕ. ಆತ ರವಿವಾರ ಸಂಜೆ 5ರ ಸುಮಾರಿಗೆ ಮನೆಯ ಸಿಟೌಟ್‌ನಲ್ಲಿ ಕುಳಿತಿದ್ದ ವೇಳೆ ಏಕಾಏಕಿ ಮಿಂಚು- ಸಿಡಿಲು ಬಡಿದ ತೀವ್ರತೆಗೆ ಬಾಲಕ ಎರಡು ಬಾರಿ ಎದ್ದು ಬಿದ್ದಿದ್ದಾನೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಬಾಲಕನನ್ನು ತತ್‌ಕ್ಷಣ ಮಾಣಿ ಆರೋಗ್ಯ ಕೇಂದ್ರಕ್ಕೆ ತಂದು ಬಳಿಕ ಪುತ್ತೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಾಲಕನ ದೇಹದ ಮೇಲೆ ಯಾವುದೇ ಗಾಯಗಳು ಕಂಡುಬಂದಿಲ್ಲ ಒಳಭಾಗಕ್ಕೆ ಹಾನಿಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಾಲಕನ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಕೊಂಡು ಹೋಗಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
Comments are closed.