ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಜೀಪ್ ರಸ್ತೆ ಬದಿಗೆ ಉರುಳಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೆ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಇಹಲೋಕ ತ್ಯಜಿಸಿದ ದಾರುಣ ಘಟನೆ ತಾಲೂಕಿನ ಕಿತ್ತಾನೆಗಡಿ ಬಳಿ ಸಂಭವಿಸಿದೆ.
ಮೂಲತಃ ಬಿಹಾರ ಮೂಲದ ಹರ್ಷಬರ್ಧನ್ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದ ಐಇಟಿಯಲ್ಲಿ ಡಿಎವಿಇ ಎಂಜಿನಿಯರಿಂಗ್ ಪದವಿ ಮಾಡಿದ್ದರು. 2022-23 ರ ಐಪಿಎಸ್ ಬ್ಯಾಚ್‌ನಲ್ಲಿ ತೇರ್ಗಡೆ ಹೊಂದಿ ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು. ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಯಿಂದ ಹಾಸನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಬರುತ್ತಿದ್ದ ವೇಳೆ ಕಿತ್ತಾನೆ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದೆ.
ಹರ್ಷಬರ್ದನ್ ಅವರು ಹಾಸನ ಜಿಲ್ಲೆಗೆ ನಿಯೋಜನೆಗೊಂಡಿದ್ದರು. ವರದಿ ಮಾಡಿಕೊಳ್ಳಲು ಹೊಳೆನರಸೀಪುರ ಕಡೆಯಿಂದ ಜೀಪ್‌ನಲ್ಲಿ ಹಾಸನ ನಗರಕ್ಕೆ ಬರುತ್ತಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಎನ್ನುವಷ್ಟರಲ್ಲಿ ಕಿತ್ತಾನೆಗಡಿ ಬಳಿ ಜೀಪ್‌ನ ಟಯರ್ ಸ್ಫೋಟಗೊಂಡಿದೆ. ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದ್ದು, ಐಪಿಎಸ್ ಅಧಿಕಾರಿ ತಲೆಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವವಾಗಿತ್ತು. ಅಪಘಾತದಲ್ಲಿ ಚಾಲಕ ಮಂಜೇಗೌಡ ಎಂಬವರಿಗೂ ಗಾಯಗಳಾಗಿವೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಧಿಕಾರಿ ಮತ್ತು ಚಾಲಕನನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಐಪಿಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ.
ಹರ್ಷಬರ್ಧನ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ, ಹಾಸನ – ಮೈಸೂರು ಹೆದ್ದಾರಿಯ ಕಿತ್ತಾನೆ ಗಡಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಅವರು ನಿಧನರಾದ ವಿಷಯ ತಿಳಿದು ದುಃಖವಾಯಿತು. ಐಪಿಎಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ತೆರಳುತ್ತಿದ್ದ ವೇಳೆ ಇಂಥದ್ದೊಂದು ದುರ್ಘಟನೆ ಜರುಗಿದೆ ಎನ್ನುವುದು ಬಹಳಾ ಬೇಸರದ ಸಂಗತಿ. ವರ್ಷಗಳ ಕಠಿಣ ಪರಿಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು. ಹರ್ಷಬರ್ಧನ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮೃತನ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
Comments are closed.