ಸ್ಯಾನ್ ಫ್ರಾನ್ಸಿಸ್ಕೋ: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅವರು ಹೃದಯ ಸಂಬಂಧಿ ತೊಂದರೆಗಳಿಂದ ಯುಎಸ್ನ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಕುಟುಂಬದವರು ಸೋಮವಾರ (ಡಿ.16) ಮುಂಜಾನೆ ತಿಳಿಸಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಹುಸೇನ್ ಅವರನ್ನು ಕಳೆದ ಎರಡು ವಾರಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರವಿವಾರ ರಾತ್ರಿ (ಭಾರತೀಯ ಕಾಲಮಾನ) ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಐಸಿಯುಗೆ ಕರೆದೊಯ್ಯಲಾಯಿತು. ರವಿವಾರ ರಾತ್ರಿಯೇ ಅವರ ಸಾವಿನ ಬಗ್ಗೆ ವರದಿಯಾಗಿತ್ತು. ಆದರೆ ಅವರ ಕುಟುಂಬವು ಅದನ್ನು ಅಲ್ಲಗಳೆದಿತ್ತು. ಅವರು ಜೀವಂತವಾಗಿದ್ದಾರೆ ಎಂದು ಖಚಿತಪಡಿಸಿತ್ತು.
ಸೋಮವಾರ ಬೆಳಿಗ್ಗೆ, ಅವರ ಕುಟುಂಬವು ಜಾಕೀರ್ ಹುಸೇನ್ ನಿಧನದ ಬಗ್ಗೆ ಖಚಿತಪಡಿಸಿದೆ. “ವಿಶ್ವದ ಪ್ರಸಿದ್ದ ಸಂಗೀತಗಾರರಲ್ಲಿ ಒಬ್ಬರಾದ ಜಾಕೀರ್ ಹುಸೇನ್, ಅವರು 73 ನೇ ವಯಸ್ಸಿನಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ನಿಂದ ನಿಧನರಾದರು” ಎಂದು ಕುಟುಂಬ ಪ್ರಕಟಣೆಯಲ್ಲಿ ತಿಳಿಸಿದೆ.
ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಜಾಕೀರ್ ಹುಸೇನ್, ಪ್ರಸಿದ್ಧ ತಬಲಾ ಮಾಂತ್ರಿಕ ಅಲ್ಲಾ ರಖಾ ಅವರ ಹಿರಿಯ ಮಗ. ಭಾರತದಲ್ಲಿ ಮತ್ತು ಜಾಗತಿಕವಾಗಿ ಹೆಸರುವಾಸಿಯಾಗಿರುವ ಹುಸೇನ್ ಅವರು ಈ ವರ್ಷದ ಆರಂಭದಲ್ಲಿ 66 ನೇ ಗ್ರ್ಯಾಮಿ ಪ್ರಶಸ್ತಿಗಳಲ್ಲಿ ಗಮನಾರ್ಹವಾದ ಮೂರು ಪುರಸ್ಕಾರಗಳನ್ನು ಒಳಗೊಂಡಂತೆ ತಮ್ಮ ವೃತ್ತಿಜೀವನದ ಅವಧಿಯಲ್ಲಿ ಐದು ಗ್ರ್ಯಾಮಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಹುಸೇನ್ ಅವರಿಗೆ 1988 ರಲ್ಲಿ ಪ್ರತಿಷ್ಠಿತ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
Comments are closed.