ಕರ್ನಾಟಕ

ವಿದೇಶಕ್ಕೆ ತೆರಳುವ ಮುನ್ನ ಶಿವಣ್ಣ ರಿಯಾಕ್ಷನ್: ಮಿಯಾಮಿ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಸರ್ಜರಿ; ತಿಂಗಳ ಬಳಿಕ ಮರಳಿ ಭಾರತಕ್ಕೆ!

Pinterest LinkedIn Tumblr

ಬೆಂಗಳೂರು: ನಟ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆ ಪ್ರಸ್ತುತ ಆರೋಗ್ಯದ ಕುರಿತು ಮಾತನಾಡಿದ್ದಾರೆ. ಹೆಲ್ತ್ ಚೆಕಪ್ ಮಾಡಿಸಿದ್ದೀನಿ. ಎಲ್ಲವೂ ಸರಿಯಾಗಿದೆ. ಎಲ್ಲಾ ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿದೆ ಎಂದು ಶಿವಣ್ಣ ಹೇಳಿದ್ದಾರೆ.

ಮನೆ ಹತ್ತಿರ ನನ್ನ ಆಪ್ತರು, ಅಭಿಮಾನಿಗಳು ಬರುತ್ತಿದ್ದಾರೆ. ಇದನ್ನು ನೋಡಿದಾಗ ನನಗೆ ಎಮೋಷನಲ್ ಆಗುತ್ತಿದೆ. ಹೆಲ್ತ್ ಚೆಕಪ್ ಮಾಡಿಸಿದ್ದೀನಿ ಎಲ್ಲವೂ ಸರಿಯಾಗಿದೆ. ನನ್ನ ತಂಗಿ ಮತ್ತು ಸಂಬಂಧಿಕರನ್ನು ನೋಡುವಾಗ ಬೇಜಾರು ಆಯ್ತು. ಅಭಿಮಾನಿಗಳನ್ನು ನೋಡಿದಾಗ ದುಃಖ ಆಗುತ್ತದೆ. ಅದು ಬಿಟ್ಟರೆ ನಾನು ಧೈರ್ಯವಾಗಿದ್ದೀನಿ. ಡಿ.24ರಂದು ನನಗೆ ಸರ್ಜರಿ ನಡೆಯುತ್ತಿದೆ. ಅದರ ಬಗ್ಗೆ ಪಾಸಿಟಿವ್ ಆಗಿದ್ದೀನಿ. ಈ ಬಗ್ಗೆ ನನಗೇನು ಯೋಚನೆ ಇಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಈಗಾಗಲೇ ಚಿಕಿತ್ಸೆ ಆರಂಭವಾಗಿದೆ. 4 ಹಂತಗಳ ಚಿಕಿತ್ಸೆ ಬಳಿಕ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತದೆ ಎಂದಿದ್ದರು. ಚಿಕಿತ್ಸೆಗಾಗಿ ಕೆಲವು ದಿನಗಳ ಕಾಲ ಮನೆಯಿಂದ ಆಚೆ ಇರುತ್ತೇವೆ. ಒಂದು ತಿಂಗಳಿಗೂ ಹೆಚ್ಚು ದಿನ ಮನೆ ಬಿಟ್ಟು ಇರುತ್ತಿರೋದು ಇದೇ ಮೊದಲ ಬಾರಿ. ಇನ್ನೂ ಎಲ್ಲಾ ಅಭಿಮಾನಿಗಳ ಆಶೀರ್ವಾದ ನನ್ನ ಮೇಲಿದೆ. ಇದರಿಂದ ನನಗೆ ಖುಷಿ ಆಗುತ್ತಿದೆ. ಜ.26ಕ್ಕೆ ನಾನು ಬೆಂಗಳೂರಿಗೆ ಹಿಂದಿರುಗುತ್ತಿದ್ದೇನೆ ಎಂದರು.

ಇದೇ ವೇಳೆ ಸುದೀಪ್ ಭೇಟಿಯ ಬಗ್ಗೆ ಶಿವಣ್ಣ ಮಾತನಾಡಿ, ಅವರು ಬಂದಿದ್ದು ಖುಷಿಯಾಯ್ತು. ಯಾರು ಯೋಚನೆ ಮಾಡುವಂತಹದ್ದು ಏನು ಇಲ್ಲ. ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದರು. ನಂತರ ‘ಯುಐ’ ಮತ್ತು ‘ಮ್ಯಾಕ್ಸ್’ ಎರಡು ಸಿನಿಮಾಗಳು ರಿಲೀಸ್ ಆಗುತ್ತಿದೆ. ಎರಡು ಚಿತ್ರಕ್ಕೂ ಒಳ್ಳೆಯದಾಗಲಿ ಎಂದು ಶಿವಣ್ಣ ಶುಭಕೋರಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಅಮೆರಿಕಗೆ ಪ್ರಯಾಣ ಬೆಳೆಸಿದ್ದ ಶಿವರಾಜ್‌ಕುಮಾರ್‌ಗೆ, ಪತ್ನಿ ಗೀತಾ ಶಿವರಾಜ್‌ಕುಮಾರ್, ಪುತ್ರಿ ನಿವೇದಿತಾ ಸಾಥ್ ನೀಡಿದರು. ಡಿಸೆಂಬರ್ 24ರಂದು ಫ್ಲೋರಿಡಾ ರಾಜ್ಯದ ಮಿಯಾಮಿಯಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ (ಎಂಸಿಐ) ಆಸ್ಪತ್ರೆಯಲ್ಲಿ ಶಿವರಾಜ್‌ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ. ಡಾಕ್ಟರ್ ಮುರುಗೇಶ್ ನೇತೃತ್ವದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಲಿದೆ.

 

Comments are closed.