ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಂತ್ರಿ, ಅರ್ಚಕ ಮಂಜುನಾಥ ಅಡಿಗ (66) ಅವರು ಜ. 1ರಂದು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ದೇಗುಲದ ಅರ್ಚಕ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯ ನಿತ್ಯಾನಂದ ಅಡಿಗ ಸಹಿತ ಪುತ್ರಿಯನ್ನು ಅಗಲಿದ್ದಾರೆ. ಕೊಲ್ಲೂರಿನ ತಾಂತ್ರಿಕ ಗೆಸ್ಟ್ ಹೌಸ್ ಮಾಲಕರಾಗಿರುವ ಮಂಜುನಾಥ ಅಡಿಗ ಅವರು ಎಲ್ಲಾ ವರ್ಗದ ಭಕ್ತರೊಡನೆ ಅನ್ಯೋನ್ಯವಾಗಿದ್ದು, ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಧಾರ್ಮಿಕ ಕಾರ್ಯ ನಡೆಸುವಲ್ಲಿ ಪೂಜಾ ವಿಧಾನದ ಕ್ರಮವನ್ನು ತಿಳಿಹೇಳುತ್ತಿದ್ದರು. ಬಹಳಷ್ಟು ವರುಷಗಳಿಂದ ದೇಗುಲದ ಪ್ರಧಾನ ತಂತ್ರಿಯಾಗಿ ಸೇವೆ ಸಲ್ಲಿಸಿದ ಮೃತರು ಅನಾರೋಗ್ಯದ ನಿಮಿತ್ತ ದೇಗುಲದ ಪೂಜಾ ಕೈಂಕರ್ಯ ನೆರವೇರಿಸಲು ತನ್ನ ಸ್ಥಾನವನ್ನು ಪುತ್ರ ನಿತ್ಯಾನಂದ ಅಡಿಗ ಅವರಿಗೆ ನೀಡಿದ್ದರು. ಕೊಲ್ಲೂರು ಪರಿಸರದಲ್ಲಿ ಅಡಿಗರೆಂದೇ ಪರಿಚಿತರಾಗಿರುವ ಅವರ ಸರಳ ಸಜ್ಜನಿಕೆ ಸ್ವಭಾವವೂ ಭಕ್ತ ವೃಂದದೊಡನೆ ಒಡನಾಟ ಹೆಚ್ಚಿಸಿತ್ತು.
ಗಣ್ಯರ ಸಂತಾಪ: ಸಂಸದ ಬಿ.ವೈ.ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಕೆ.ಗೋಪಾಲಪೂಜಾರಿ, ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉದ್ಯಮಿ ವಾಸುದೇವ ಶೆಟ್ಟಿ ಕಾಪು, ತಾ.ಪಂ. ಮಾಜಿ ಸದಸ್ಯ ರಮೇಶ ಗಾಣಿಗ ಕೊಲ್ಲೂರು, ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾ ಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬುಶೆಟ್ಟಿ, ಸದಸ್ಯರು, ಸಿಬಂದಿಗಳು, ಅರ್ಚಕವೃಂದದವರು ಕಂಬನಿ ಮಿಡಿದಿದ್ದಾರೆ.
Comments are closed.