ಮಂಗಳೂರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ತಮಿಳು ನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಮೂವರು ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡ ನಂತರ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳ ಬಳಿ ಮಹಾರಾಷ್ಟ್ರದ ನೋಂದಣಿ ಸಂಖ್ಯೆಯ ಕಾರು, ಶಸ್ತ್ರಾಸ್ತ್ರಗಳು, 2 ತಲವಾರು, 2 ಪಿಸ್ತೂಲುಗಳು ಮತ್ತು ಚಿನ್ನ ಮತ್ತು ಹಣ ತುಂಬಿದ ಗೋಣಿಚೀಲಗಳನ್ನು ಕೂಡ ವಶ ಪಡಿಸಿಕೊಂಡಿರುವ ಬಗ್ಗೆ ಅನುಪಮ್ ಅಗರ್ವಾಲ್ ತಿಳಿಸಿದ್ದು ಕೃತ್ಯನಡೆಸಲು ಸ್ಥಳೀಯರು ಸಹಕಾರ ನೀಡಿದ್ದಾರೆಯೇ ಎಂಬ ಬಗ್ಗೆ ಮುಂದಿನ ತನಿಖೆಯಲ್ಲಿ ತಿಳಿಯಬೇಕಾಗಿದೆ ಎಂದರು.
ದರೋಡೆ ಕೃತ್ಯಕ್ಕೆ ಬಳಸಿದ್ದ ಕಾರು ಸಹಿತ ವಿವಿಧ ಆಯಾಮಗಳಲ್ಲಿ ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿದ್ದು ದರೋಡೆ ನಡೆಸಿದ ಬಳಿಕ ತಲಪಾಡಿ ಟೋಲ್ ಮೂಲಕ ಕೇರಳ ಮೂಲಕ ತಮಿಳುನಾಡಿಗೆ ಈ ತಂಡ ಪರಾರಿಯಾಗಿದ್ದರು.
ಪ್ರಕರಣದಲ್ಲಿ ಪ್ರಮುಖರಾದ ತಿರುಲವೇಲಿ ಮೂಲದ ಮುರುಗನ್ ಡಿ, ಮಣಿವಣ್ಣನ್ ಮತ್ತು ಪ್ರಕಾಶ್ ಅಲಿಯಾಸ್ ಜೋಶ್ವಾ ಬಂಧಿತ ಆರೋಪಿಗಳು ಎಂದು ತಿಳಿಸಿದ್ದಾರೆ.
Comments are closed.