ಕರಾವಳಿ

ಕೇಂದ್ರ ಪುರಸ್ಕೃತ ಯೋಜನೆಗಳನ್ನು ನಿಗಧಿತ ಅವಧಿಯೊಳಗೆ ಪ್ರತಿಶತಃ ನೂರರಷ್ಟು ಅನುಷ್ಠಾನ ಮಾಡಬೇಕು: ಸಂಸದ ಬಿ.ವೈ ರಾಘವೇಂದ್ರ

Pinterest LinkedIn Tumblr

ಉಡುಪಿ: ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಪ್ರತಿಶತಃ ನೂರರಷ್ಟು ನಿಗಧಿತ ಕಾಲಾವಧಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಶಿವಮೊಗ್ಗ-ಉಡುಪಿ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರ್ಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇವುಗಳ ಅನುಷ್ಠಾನ ಮಾಡುವ ಕಾರ್ಯವು ಅಧಿಕಾರಿಗಳದ್ದಾಗಿದ್ದು, ಯೋಜನೆಗಳಿಗೆ ಬಿಡುಗಡೆಯಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಸರಕಾರ ನಿಗಧಿಪಡಿಸಿರುವ ಕಾಲಮಿತಿಯೊಳಗೆ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.

ಮಹತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಶಾಶ್ವತ ಕಾಮಗಾರಿಗಳನ್ನು ಸೃಜನಿಸಲು ಅವಕಾಶವಿದ್ದು, ಜಿಲ್ಲೆಯಲ್ಲಿ ಇದರ ಪ್ರಗತಿ ನಿಗಧಿತ ಗುರಿಗಿಂತ ಹೆಚ್ಚಬೇಕು ಎಂದ ಅವರು, ಈ ಯೋಜನೆಯಡಿ ಕಾಲಸಂಕ ನಿರ್ಮಿಸಲು ಸಹ ಅವಕಾಶವಿದ್ದು, ಇದರ ಸದುಪಯೋಗ ಪಡಿಸಿಕೊಂಡು ಮಲೆನಾಡು ಭಾಗಗಳಲ್ಲಿ ಕಾಲಸಂಕ ನಿರ್ಮಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.

ಕಾಡಿನಂಚಿನಲ್ಲಿ ಇರುವ ಕೊರಗ ಸಮಾಜದವರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಈ ಸಮುದಾಯದವರು ಸರಕಾರದ ಯಾವುದೇ ಯೋಜನೆಗಳನ್ನು ಪಡೆಯಲು ಸ್ವಯಂ ಪ್ರೇರಿತವಾಗಿ ಮುಂದೆ ಬರುವುದಿಲ್ಲ. ಹೀಗಾಗಿ ಸಮಾಜದ ಕಟ್ಟಕಡೆಯ ಸಮುದಾಯದವರಾದ ಇವರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಭಾಗ್ಯ ಯೋಜನೆ ಸೇರಿದಂತೆ ಮತ್ತಿತರ ಯೋಜನೆಗಳನ್ನು ಅವರು ಇದ್ದಲ್ಲಿಯೇ ಹೋಗಿ ಅಧಿಕಾರಿಗಳು ತಲುಪಿಸಲು ಮುಂದಾಗಬೇಕು. ಪ್ರಧಾನಮಂತ್ರಿ ಜನಮನ್ ಯೋಜನೆಯಡಿ ಕೊರಗ ಸಮುದಾಯದವರಿಗೆ ಗೃಹ ನಿರ್ಮಾಣಕ್ಕೆ 4.05 ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಇದು ಪ್ರತಿಯೊಬ್ಬ ಅರ್ಹರಿಗೂ ತಲುಪಬೇಕು. ಈ ಸಮುದಾಯಗಳ ಅನುಕೂಲಕ್ಕಾಗಿ  ಜಿಲ್ಲೆಗೆ ಮಂಜೂರಾಗಿರುವ 60 ಲಕ್ಷ ರೂ. ವೆಚ್ಚದ 16 ಮಲ್ಟಿಪರ್ಪಸ್ ಸೆಂಟರ್‌ಗಳ ನಿರ್ಮಾಣ ಕಾರ್ಯವನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಉಡುಪಿ ಜಿಲ್ಲೆಯು ವಿಶ್ವಕರ್ಮ ಯೋಜನೆಯ ಅರ್ಜಿ ವಿಲೇವಾರಿಯಲ್ಲಿ ರಾಜ್ಯದಲ್ಲಿಯೇ ಮೂರನೇ ಸ್ಥಾನದಲ್ಲಿದ್ದು, ಉತ್ತಮ ಪ್ರಗತಿಯಾಗಿದೆ ಇದು ಶ್ಲಾಘನೀಯ. ಪ್ರಸ್ತುತ ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗಳಿಗೂ ಈ ಯೋಜನೆಯು ತಲುಪಬೇಕು ಎಂದರು.

ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಅರಣ್ಯ ಇಲಾಖೆಯವರು ನಿಯಮಾನುಸಾರ ಆದಷ್ಟು ಶೀಘ್ರದಲ್ಲಿಯೇ ಒದಗಿಸಬೇಕು. ಈಗಾಗಲೇ ಬೈಂದೂರು ವಿಧಾನಸಭಾ ಕ್ಷೇತ್ರದ 784 ಕೋಟಿ ರೂ. ವೆಚ್ಚದಲ್ಲಿ ಹಾಗೂ ಜಿಲ್ಲೆಯ ಉಳಿದ ತಾಲೂಕಿಗಳಿಗೆ ಮಂಜೂರಾಗಿರುವ 1600 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಅತೀ ಜರೂರಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಗೆ 1412 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಈಗಾಗಲೇ ಕೈಗೊಂಡಿರುವ ಹೆಬ್ರಿ, ಪರ್ಕಳ, ಕರಾವಳಿ ಜಂಕ್ಷನ್‌ನಿಂದ ಮಲ್ಪೆ ವರೆಗೆ ಹೆದಾರಿ ಕಾಮಗಾರಿಗಳನ್ನು ಕೈಗೊಳ್ಳಲು ಅವಶ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಬೇಗ ಮುಗಿಸಿ, ಕಾಮಗಾರಿಯನ್ನು ವೇಗವಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಬಂದರು ಹಾಗೂ ಮೀನುಗಾರಿಕಾ ಕೋಸ್ಟಲ್ ಬರ್ತ್ ಹಾಗೂ ಮೀನುಗಾರಿಕಾ ಬಂದರುಗಳ ಅಭಿವೃದ್ಧಿ ಕಾಮಗಾರಿಗೆ ಸಾಕಷ್ಟು ಅನುದಾನ ಈಗಾಗಲೇ ಮಂಜೂರಾಗಿದೆ. ಸಿ.ಆರ್.ಝಡ್‌ನ ಅನುಮತಿಯನ್ನು ಪಡೆದು ಕಾಮಗಾರಿಗಳನ್ನು ಮುಗಿಸಲು ಸೂಚನೆ ನೀಡಿದರು.

ಜನಸಾಮಾನ್ಯರ ಆರೋಗ್ಯ ಸುಧಾರಣೆಗೆ ಪೂರಕವಾಗುವಂತಹ ಪ್ರಧಾನಮಂತ್ರಿಗಳ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ್ ಮಿಶನ್ ಯೋಜನೆಯ ಅನುಷ್ಠಾನವನ್ನು ಅತ್ಯಂತ ಜವಾಬ್ದಾರಿಯುತವಾಗಿ ಕೈಗೊಳ್ಳಬೇಕು. ಕೆಲವು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇವುಗಳ ಅನುಷ್ಠಾನ ಸಮರ್ಪಕವಾಗಿ ಆಗಿಲ್ಲ ಇದಕ್ಕೆ ಒತ್ತು ನೀಡಬೇಕು ಎಂದರು.

ಪ್ರಧಾನಮಂತ್ರಿ ಮತ್ತು ವಂದನಾ ಯೋಜನೆಯ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆದ್ಯತೆಯ ಮೇಲೆ ಆಗಬೇಕು. ಕಳೆದ ಸಾಲಿನಲ್ಲಿ ಕೇಂದ್ರ ಸರಕಾರದಿಂದ ಬಂದ 65 ಕೋಟಿ ರಾಜ್ಯದಲ್ಲಿ ಅನುಷ್ಠಾನ ಗೊಳ್ಳ್ಳದೆ ವಾಪಸು ಹೋಗಿರುತ್ತದೆ ಎಂದರು.

ಜಿಲ್ಲೆಯಲ್ಲಿ ಕೈಗೊಂಡಿರುವ ಜಲ್ ಜೀವನ್ ಮಿಶನ್ ಯೋಜನೆಯಡಿ ಗ್ರಾಮಾಂತರ ಭಾಗದ ಜನರಿಗೆ ನಳ ನೀರನ್ನು ಸಂಪರ್ಕಿಸುವ ಕಾಮಗಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳಬೇಕು. ಕೆಲವು ಗ್ರಾಮೀಣ ಭಾಗದಲ್ಲಿ ನಿಗದಿತ ಪ್ರಮಾಣದ ಗೇಜ್ ಗಾಳನ್ನು ಒಳಗೊಂಡ ಪೈಪ್ ಗಳನು ಅಳವಡಿಸದೇ ಕಳಪೆ ಕಾಮಗಾರಿ ಕೈಗೊಂಡಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಸಿ.ಇ .ಒ ಸ್ಥಳ ಪರಿಶೀಲನೆ ಮಾಡಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ತರಬೇತಿಗಳನ್ನು ನೀಡುವುದರೊಂದಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸುವ ಕಾರ್ಯಗಳು ಆಗಬೇಕು. ರುಡ್ಸೆಟ್ ನಲ್ಲಿಯೂ ಸಹ ತರಬೇತಿಗೆ ಅವಕಾಶ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ಪ್ರಮುಖವಾಗಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಯುವ ಜನರಿಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಮೂಲಕ ಸೌಲಭ್ಯ ಕಲ್ಪಿಸಿ ಸ್ವಯಂ ಉದ್ಯೋಗ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಬೇಕು ಎಂದ ಅವರು, ಜಿಲ್ಲೆಯ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ಈ ಸಂಬಂಧ ಕೈಗಾರಿಕೋದ್ಯಮಿಗಳ ಸಭೆ ನಡೆಸಬೇಕು ಎಂದು ಸೂಚನೆ ನೀಡಿದರು.

ವಿಧಾನ ಪರಿಷತ್‌ನ ಶಾಸಕರಾದ ಡಾ.ಧನಂಜಯ್ ಸರ್ಜಿ ಮಾತನಾಡಿ, ರೈತರು ತಮ್ಮ ಜಮೀನುಗಳಲ್ಲಿ ಹೆಚ್ಚು ಇಳುವರಿ ಪಡೆಯುವ ಉದ್ದೇಶದಿಂದ ರಸಗೊಬ್ಬರಗಳನ್ನು ಅವೈಜ್ಞಾನಿಕವಾಗಿ ಬಳಕೆ ಮಾಡುತ್ತಾರೆ. ಇದರಿಂದಾಗಿ ಅಲ್ಯೂಮಿನಿಯಂ ಸೇರಿದಂತೆ ಮತ್ತಿತರ ರಾಸಾಯನಿಕಗಳು ನದಿಗಳನ್ನು ಸೇರಿ ಜಲ ಮಾಲಿನ್ಯವನ್ನು ಉಂಟಾಗುತ್ತಿದೆ. ರೈತರ ಭೂಮಿಯ ಮಣ್ಣಿನ ಪರೀಕ್ಷೆಯನ್ನು ಮಾಡುವುದರೊಂದಿಗೆ ಮಣ್ಣಿನ ಆರೋಗ್ಯ ಕಾರ್ಡ್ ಅನ್ನು ವಿತರಿಸಿ,  ಮಣ್ಣಿನ ಪೋಷಕಾಂಶಗಳ ಅನುಗುಣವಾಗಿ ಬಳಸಬಹುದಾದ ರಾಸಾಯನಿಕ ಗೊಬ್ಬರಗಳ ಸಲಹೆ ಸೂಚನೆಗಳನ್ನು ಹಾಗೂ ಸೂಕ್ತ ಬೆಳೆಗಳನ್ನು ಬೆಳೆಯಲು ಮಾರ್ಗದರ್ಶನ ನೀಡುವುದು ಒಳಿತು ಎಂದರು.

ಸಭೆಯಲ್ಲಿ ಶಾಸಕರುಗಳಾದ ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.