ನವದೆಹಲಿ: 76ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2025ನೇ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಇಂದು ಪ್ರಕಟಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿಯನ್ನು ಘೋಷಿಸಿದರು.
2025ನೇ ಸಾಲಿನಲ್ಲಿ ರಾಜ್ಯದ 9 ಸಾಧಕರು ಈ ಬಾರಿ ಪದ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 1 ಪದ್ಮ ವಿಭೂಷಣ, 2 ಪದ್ಮಭೂಷಣ ಹಾಗೂ 6 ಪದ್ಮಶ್ರೀ ಪ್ರಶಸ್ತಿ ಸೇರಿದಂತೆ 9 ಪದ್ಮ ಪ್ರಶಸ್ತಿ ಕರ್ನಾಟಕದ ಸಾಧಕರಿಗೆ ಲಭಿಸಿದೆ. ಪದ್ಮ ವಿಭೂಷಣ ಪ್ರಶಸ್ತಿಯನ್ನು ವಯೋಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಮಣಿಯಂ ಅವರಿಗೆ ಲಭಿಸಿದ್ದರೆ, ನಟ ಅನಂತನಾಗ್, ಶಿಕ್ಷಣ ತಜ್ಞ ಎ. ಸೂರ್ಯಪ್ರಕಾಶ್ ಅವರಿಗೆ ಪದ್ಮ ಭೂಷಣ ಸಿಕ್ಕಿದೆ. ಇನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್, ಜಾನಪದ ಕಲಾವಿದ ವೆಂಕಪ್ಪ ಅಂಬಾಜಿ, ವೈದ್ಯಕೀಯ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ದೇಶಮಾನೆ, ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ, ಹಾಸನ ರಘು ಮತ್ತು ಪ್ರಶಾಂತ್ ಪ್ರಕಾಶ್ ಅವರು ಪದ್ಮಶ್ರೀ ಗೌರವಕ್ಕೆ ಭಾಜನರಾಗಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಪಡೆದ ಇತರರಲ್ಲಿ ದುವ್ವೂರ್
ನಾಗೇಶ್ವರ ರೆಡ್ಡಿ (ವೈದ್ಯಕೀಯ), ಕುಮುದಿನಿ ರಜನಿಕಾಂತ್ ಲಖಿಯಾ ಮತ್ತು ಲಕ್ಷ್ಮಿನಾರಾಯಣನ್ ಸುಬ್ರಮಣಿಯಂ (ಕಲೆ), ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ) (ಸಾಹಿತ್ಯ-ಶಿಕ್ಷಣ) ಸೇರಿದ್ದಾರೆ. ಇವರಲ್ಲದೆ, ಎ ಸೂರ್ಯ ಪ್ರಕಾಶ್, ರಾಮ್ ಬಹದ್ದೂರ್ ರೈ (ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ), ಅನಂತ್ ನಾಗ್ ಮತ್ತು ಜತಿನ್ ಗೋಸ್ವಾಮಿ, ನಂದಮೂರಿ ಬಾಲಕೃಷ್ಣ, ಪಂಕಜ್ ಉದಾಸ್ (ಮರಣೋತ್ತರ), ನಟ ಅಜಿತ್ ಕುಮಾರ್, ಶೇಖರ್ ಕಪೂರ್, ಶೋಭನಾ ಚಂದ್ರಕುಮಾರ್ (ಕಲೆ), ಜೋಸ್ ಚಾಕೊ ಪೆರಿಯಪ್ಪುರಂ (ವೈದ್ಯಕೀಯ), ಕೈಲಾಶ್ ನಾಥ್ ದೀಕ್ಷಿತ್ (ಪುರಾತತ್ವ), ನಲ್ಲಿ ಕುಪ್ಪುಸ್ವಾಮಿ ಚೆಟ್ಟಿಯಾರ್, ಪಂಕಜ್ ಪಟೇಲ್ (ವ್ಯವಹಾರ ಮತ್ತು ಕೈಗಾರಿಕೆ), ಪಿ.ಆರ್. ಶ್ರೀಜೇಶ್ (ಕ್ರೀಡೆ), ಸಾಧ್ವಿ ಋತಂಭರ (ಸಮಾಜ ಕಾರ್ಯ), ವಿನೋದ್ ಧಾಮ್ (ವಿಜ್ಞಾನ ಮತ್ತು ಎಂಜಿನಿಯರಿಂಗ್) ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ.
13 ಮರಣೋತ್ತರ ಪ್ರಶಸ್ತಿಗಳನ್ನು ಸಹ ಘೋಷಿಸಲಾಗಿದೆ. ಇದರಲ್ಲಿ ಭೋಜ್‌ಪುರಿ ಗಾಯಕಿ ಶಾರದಾ ಸಿನ್ಹಾ (ಮರಣೋತ್ತರ), ನ್ಯಾಯಮೂರ್ತಿ (ನಿವೃತ್ತ) ಜಗದೀಶ್ ಸಿಂಗ್ ಖೇಹರ್ ಮತ್ತು ಸುಜುಕಿ ಕಂಪನಿಯ ಒಸಾಮು ಸುಜುಕಿ (ಮರಣೋತ್ತರ), ಬಿಬೇಕ್ ಡೆಬ್ರಾಯ್, ಸುಶೀಲ್ ಮೋದಿ ಮತ್ತು ಮನೋಹರ್ ಜೋಶಿ (ಮರಣೋತ್ತರ) ಅವರ ಹೆಸರುಗಳು ಸೇರಿವೆ.
Comments are closed.