ಕರಾವಳಿ

ಹಾಲಕ್ಕಿ ಜಾನಪದ ಹಾಡುಗಳ ಮೂಲಕ ಖ್ಯಾತರಾಗಿದ್ದ ‘ಪದ್ಮಶ್ರೀ’ ಪುರಸ್ಕೃತ ಸುಕ್ರಿ ಬೊಮ್ಮಗೌಡ ವಿಧಿವಶ

Pinterest LinkedIn Tumblr

ಕಾರವಾರ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಲಕ್ಕಿ ಸಮುದಾಯದ ಸಾಕ್ಷಿ ಪ್ರಜ್ಞೆಯಂತಿದ್ದ ಜನಪದ ಹಾಡುಗಳನ್ನು ಹಾಡುವ ಜೊತೆಗೆ ಮದ್ಯಪಾನ ವಿರೋಧಿ ಹೋರಾಟದಿಂದ ಖ್ಯಾತಿಗಳಿಸಿದ್ದ ಅಂಕೋಲಾ ತಾಲ್ಲೂಕು ಬಡಗೇರಿಯ ಸುಕ್ರಿ ಬೊಮ್ಮ ಗೌಡ (88) ಗುರುವಾರ ನಸುಕಿನ ಜಾವ ನಿಧನರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿದ್ದ ಸುಕ್ರಿ ಬೊಮ್ಮಗೌಡ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನದ ಹಿಂದೆ ಉಸಿರಾಟ ಸಮಸ್ಯೆಯಿಂದ ಉಡುಪಿಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಇಂದು (ಗುರುವಾರ) ಮುಂಜಾನೆ 4 ಗಂಟೆ ವೇಳೆ ಅಂಕೋಲದ ಬಡಿಗೇರಿಯ ಅವರ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಸುಕ್ರಿ ಬೊಮ್ಮಗೌಡ ಅವರು ಇದೀಗ ಇಬ್ಬರು ಮೊಮ್ಮಕ್ಕಳು ಓರ್ವ ಸೊಸೆಯನ್ನು ಅಗಲಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಹಾಲಕ್ಕಿ ಒಕ್ಕಲಿಗ ಸಮುದಾಯದ ಸುಕ್ರಿ ಬೊಮ್ಮಗೌಡ ಅವರು ಸುಪ್ರಸಿದ್ಧ ಜಾನಪದ ಗಾಯಕಿಯಾಗಿದ್ದರು. ಸುಮಾರು 5 ಸಾವಿರ ಹಾಲಕ್ಕಿ ಹಾಡುಗಳು ಕಂಠಪಾಟವಾಗಿದ್ದವು. ಅವರು ಜಾನಪದ ಕಲೆಗೆ ನೀಡಿದ ಕೊಡುಗೆಗಳಿಗಾಗಿ ಮತ್ತು ಸಾಂಪ್ರದಾಯಿಕ ಬುಡಕಟ್ಟು ಸಂಗೀತವನ್ನು ಸಂರಕ್ಷಿಸುವ ಕಾರ್ಯಕ್ಕಾಗಿ ಹಲವು ಪ್ರಶಸ್ತಿಗಳನ್ನು ಸಂಪಾದಿಸಿದ್ದಾರೆ.

ಜನಪದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರಕ್ಕೆ ಸುಕ್ರಿ ಬೊಮ್ಮ ಗೌಡ ನೀಡಿರುವ ಕೊಡುಗೆ ಗುರುತಿಸಿ, 1999ರಲ್ಲಿ ಜನಪದಶ್ರೀ ಪ್ರಶಸ್ತಿ, 2006ರಲ್ಲಿ ನಾಡೋಜ ಪ್ರಶಸ್ತಿ, 2017ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ದೇಶ ಹಾಗೂ ರಾಜ್ಯದ ಹಲವು ಪ್ರತಿಷ್ಠಿತ ಪ್ರಶಸ್ತಿ ಸುಕ್ರಿ ಬೊಮ್ಮ ಗೌಡ ಅವರನ್ನು ಅರಸಿಕೊಂಡು ಬಂದಿವೆ.

ಸಿಎಂ ಸಂತಾಪ: ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ಧರಾಮಯ್ಯ ಅವರು, ಪ್ರಖ್ಯಾತ ಜಾನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ನಿಧನ‌ದಿಂದ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ. ಅವರೊಬ್ಬರು ಹುಟ್ಟು ಕಲಾವಿದೆ. ಹಾಲಕ್ಕಿ ಜಾನಪದ ಹಾಡುಗಳ ಮೂಲಕವೇ ಲೋಕಪ್ರಸಿದ್ಧರಾಗಿದ್ದ “ಸುಕ್ರಜ್ಜಿ” ಅವರಿಗೆ ಸಂಗೀತವೇ ಬದುಕಾಗಿತ್ತು. ಸಂಗೀತದ ಜೊತೆಯಲ್ಲಿ ಮಧ್ಯಪಾನ ವಿರೋಧಿ ಆಂದೋಲನದಲ್ಲಿಯೂ ಸಕ್ರಿಯರಾಗಿದ್ದ ಸುಕ್ರಿ ಬೊಮ್ಮಗೌಡ ಅವರ ಬದುಕು ಮತ್ತು ಸಾಧನೆ ಆದರ್ಶಪ್ರಾಯವಾದುದು. ಸಂಗೀತ ಕಲಾಸೇವೆಗಾಗಿ ಪದ್ಮಶ್ರೀ‌ ಪ್ರಶಸ್ತಿ ಗಳಿಸಿದ್ದ ಸುಕ್ರಜ್ಜಿ ಅವರು ಹಂಪಿ ವಿಶ್ವವಿದ್ಯಾಲಯ ನೀಡುವ ನಾಡೋಜ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು. ಸುಕ್ರಿ ಬೊಮ್ಮಗೌಡ ಅವರನ್ನು ಕಳೆದುಕೊಂಡಿರುವ ಬಂಧು ಮಿತ್ರರ ದು:ಖದಲ್ಲಿ ನಾನೂ‌ ಪಾಲ್ಗೊಂಡಿದ್ದೇನೆ’ ಎಂದಿದ್ದಾರೆ.

Comments are closed.