ಪ್ರಮುಖ ವರದಿಗಳು

ಪ್ರಯಾಗರಾಜ್‌‌ಗೆ ಕುಂಭಮೇಳಕ್ಕೆ ಹೊರಟಿದ್ದಾಗ ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ದುರ್ಮರಣ

Pinterest LinkedIn Tumblr

ನವದೆಹಲಿ: ದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಮಹಿಳೆಯರು ಮತ್ತು 4 ಮಕ್ಕಳು ಸೇರಿ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ 14 ಮತ್ತು 15ರಿಂದ ಪ್ರಯಾಗರಾಜ್‌ಗೆ ತೆರಳಬೇಕಿದ್ದ ರೈಲುಗಳನ್ನು ರದ್ದುಗೊಳಿಸಿದ್ದರಿಂದ ಏಕಾಏಕಿ ನೂಕುನುಗ್ಗಲು ಉಂಟಾಗಿದ್ದು ಕಾಲ್ತುಳಿತಕ್ಕೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ 11 ಮಹಿಳೆಯರು ಮತ್ತು 4 ಮಕ್ಕಳು ಸೇರಿ ಒಟ್ಟು 18 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ದೃಢಪಡಿಸಿವೆ. ‘ರೈಲ್ವೆ ಪೊಲೀಸರು ಮತ್ತು ದೆಹಲಿ ಪೊಲೀಸರು ನಿಲ್ದಾಣ ತಲುಪಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ಭಾರತೀಯ ರೈಲ್ವೆಯು ತಿಳಿಸಿದೆ.

ಇನ್ನು ದೆಹಲಿ ರೈಲು ನಿಲ್ದಾಣದಿಂದ ಪ್ರಯಾಗ್​ರಾಜ್​ ಮಹಾ ಕುಂಭಮೇಳಕ್ಕೆ ರೈಲ್ವೆ ಇಲಾಖೆ ಎರಡು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಗ್​ರಾಜ್​ಗೆ ತೆರಳಲು ವಿವಿಧ ರಾಜ್ಯಗಳಿಂದ ಬಂದಿದ್ದ ನೂರಾರು ಪ್ರಯಾಣಿಕರು ನವದೆಹಲಿ ರೈಲು ನಿಲ್ದಾಣದೊಳಗೆ ನುಗ್ಗಿದ್ದಾರೆ.

ಪ್ಲಾಟ್​ಫಾರ್ಮ್​ ನಂಬರ್ 14 ಮತ್ತು 15ರಲ್ಲಿ ನಿಂತಿದ್ದ ಪ್ರಯಾಗ್​​​ರಾಜ್​ಗೆ ಹೊರಡುವ​ ವಿಶೇಷ ರೈಲಿನ ಜನರಲ್ ಬೋಗಿಗೆ ಹತ್ತುವಾಗ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತವಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಎನ್​ಡಿಆರ್​ಎಫ್​ ಸಿಬ್ಬಂದಿ, ರೈಲ್ವೆ, ದೆಹಲಿ ಪೊಲೀಸ್​ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದರು. ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಂಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಎನ್​ಡಿಆರ್​ಎಫ್​ ಮಾಹಿತಿ ನೀಡಿದೆ.

Comments are closed.