ಕರಾವಳಿ

1940ರಲ್ಲಿ ನಿರ್ಮಾಣಗೊಂಡಿದ್ದ ಕುಂದಾಪುರದ ಪಿಡ್ಬ್ಲ್ಯೂಡಿ ಐಬಿ ಶಿಥಿಲ | ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ 3 ಕೋಟಿ ಮಂಜೂರು

Pinterest LinkedIn Tumblr

 (ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಸ್ವಾತಂತ್ರ್ಯ ಪೂರ್ವ ಅಂದರೆ ಸುಮಾರು 85 ವರ್ಷಗಳ ಹಿಂದೆ ಕುಂದಾಪುರದಲ್ಲಿ ವಿಶಿಷ್ಟ ಮಾದರಿಯಲ್ಲಿ ನಿರ್ಮಾಣಗೊಂಡಿದ್ದ ನಿರೀಕ್ಷಣಾ ಮಂದಿರ (ಐಬಿ) ಬಹುತೇಕ ಶಿಥೀಲಗೊಂಡಿದ್ದಲ್ಲದೆ ಬಹುಕಾಲದ ಬೇಡಿಕೆಯಂತೆ ಹೆಚ್ಚು ಕೊಠಡಿಗಳ ನೂತನ ಐಬಿ ನಿರ್ಮಾಣಕ್ಕೆ ಬಹುತೇಕ ಕಾಲ ಕೂಡಿಬಂದಿದೆ.

ಕುಂದಾಪುರ ತಾಲೂಕು ಕೇಂದ್ರದಲ್ಲಿ ಪಂಚಾಗಂಗಾವಳಿ ನದಿ ತೀರದ ಅನತಿ ದೂರದಲ್ಲಿ 1940ರಲ್ಲಿ ‌ನಿರ್ಮಿಸಿದ್ದ ಐಬಿಯನ್ನು ಕಳೆದ 20-25 ವರ್ಷಗಳ ಹಿಂದೆ ಮಾರ್ಪಾಟುಗೊಳಿಸಲಾಗಿತ್ತು. ಸದ್ಯ ಈ ಐಬಿಯಲ್ಲಿ ದೊಡ್ಡ 2 ಕೊಠಡಿಗಳು, ಸಾಧಾರಣ ಮೀಟಿಂಗ್ ಹಾಲ್‌ಗಳಿದೆ. ಐಬಿಯ ಹಿಂಭಾಗದಲ್ಲಿ 2 ಕೊಠಡಿಗಳ ಒಂದು ಚಿಕ್ಕ ಕಟ್ಟಡ, ಮತ್ತೊಂದು ಕೊಠಡಿಯಿದೆ. ತಾಲೂಕು ಕೇಂದ್ರವಾದ ಕಾರಣ  ಜನಪ್ರತಿನಿಧಿಗಳು, ಅಧಿಕಾರಿಗಳ ಭೇಟಿ ಅಧಿಕವಿದ್ದರೂ ಕೂಡ ಐಬಿಯಲ್ಲಿ ರೂಂ ಕೊರತೆಯಿರುವ ಕಾರಣ ಸಮಸ್ಯೆಯಾಗುತ್ತಿತ್ತು. ಸಭೆ ಇದ್ದರೆ, ಅಹವಾಲು ಸ್ವೀಕಾರ ಇದ್ದರೆ ಜನರ ಒತ್ತಡ ಹೆಚ್ಚಿರುತ್ತದೆ. ‌ಜನಪ್ರತಿನಿಧಿಗಳ ಭೇಟಿಗಾಗಿ ಬರುವ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಸಂಖ್ಯೆ ಹೆಚ್ಚಿರುತ್ತದೆ. ಇವರೆಲ್ಲರಿಗಾಗಿ ವಿಶಾಲವಾದ ಪ್ರವಾಸಿ ಬಂಗಲೆಯ ಅಗತ್ಯವಿದೆ. ಹೆಚ್ಚು ಕೊಠಡಿಗಳ ಅವಶ್ಯವೂ ಇದೆ. ಕುಂದಾಪುರದ ನ್ಯಾಯಾಲಯ ಸಂಕೀರ್ಣ, ಪೊಲೀಸ್ ಠಾಣೆ, ಉಪವಿಭಾಗದ ಕಚೇರಿ, ಕಂದಾಯ ಇಲಾಖೆ ಕಚೇರಿಗಳು ಐಬಿ ಸಮೀಪವಿದೆ.

ಬಹುಕಾಲದ ಬೇಡಿಕೆ:ಹೆಚ್ಚು ಕೊಠಡಿಯುಳ್ಳ ಸುಸಜ್ಜಿತ ಐಬಿ ನಿರ್ಮಿಸಬೇಕೆಂದು  ಬೈಂದೂರು- ಕುಂದಾಪುರದ ಮಾಜಿ ಹಾಗೂ ಹಾಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸರಕಾರ ಹಾಗೂ ಸಂಬಂದಪಟ್ಟ ಸಚಿವರಿಗೆ ಮನವಿ ಸಲ್ಲಿಸಿದ್ದರು. ಬಿಜೆಪಿ-ಕಾಂಗ್ರೆಸ್ ಪಕ್ಷದ ಪಕ್ಷಾತೀತ ಬೇಡಿಕೆಯೂ ಇದಾಗಿತ್ತು. ಕಳೆದ ವರ್ಷ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿಯವರು ಕುಂದಾಪುರ ಐಬಿ ವೀಕ್ಷಣೆ ಮಾಡಿ ಹೊಸ ಐಬಿ ನಿರ್ಮಾಣದ ಬಗ್ಗೆ ಭರವಸೆಯನ್ನೂ ನೀಡಿದ್ದರು. ಇದಾದ ಬಳಿಕ ನೂತನ ಕಟ್ಟಡ ಗ್ರಾಂಟ್ ಆಗಿ, ಸರ್ವೇ ಕೆಲಸ ಮುಗಿದು, ಅಂದಾಜುಪಟ್ಟಿ ಸಿದ್ದಪಡಿಸಿ, ಟೆಂಡರ್ ಕರೆದಿದ್ದು ಟೆಂಡರ್ ಪರಿಶೀಲನೆ ಹಂತದಲ್ಲಿದಲ್ಲಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ಹಳೆ ಐಬಿ ಪೂರ್ಣ ಮಣ್ಣು ಗೋಡೆಯಿಂದ ಕೂಡಿದ್ದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ಸೋರುತ್ತದೆ. ಹೆಂಚಿನ ಮೇಲ್ಮಾಡು ಕೂಡ ಸದೃಢವಾಗಿಲ್ಲ.

ಹಳೆ ಐಬಿ ಬೇಕು-ಬೇಡ ಜಿಜ್ಞಾಸೆ!:

85 ವರ್ಷಗಳ ಹಿಂದೆ ಐಬಿ ರಚಿಸಲಾಗಿತ್ತು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಇನ್ನೂ ಹಳೆಯ ಪ್ರವಾಸಿ ಬಂಗಲೆ ಉಳಿದಿರುವುದು ಕುಂದಾಪುರದಲ್ಲಿ ಮಾತ್ರ. ಬೇರೆಲ್ಲ ಕಡೆ ಹೊಸ ಪ್ರವಾಸಿ ಬಂಗಲೆಗಳು ನಿರ್ಮಾಣವಾಗಿವೆ. 40 ಸೆಂಟ್ಸ್ ಜಾಗದಲ್ಲಿ ಮಧ್ಯ ಭಾಗದಲ್ಲಿ ಹಳೆ ಐಬಿ ಕಟ್ಟಡವಿದ್ದು ಪ್ರಸ್ತುತ ಸಿದ್ದಪಡಿಸಿದ ನೂತನ ಕಟ್ಟಡದ ಯೋಜನೆಗೆ ಹಿಂಬದಿ ಜಾಗ ಸಾಕಾಗದು ಎನ್ನಲಾಗಿದೆ. ಅಲ್ಲದೆ ಶಿಥಿಲಾವಸ್ಥೆಯಳಿರುವುದರಿಂದ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕು ಎಂಬ ಮಾತುಗಳ ನಡುವೆ ವಿಶಿಷ್ಟ ಮಾದರಿ ಹಳೆ ಐಬಿ ಕಟ್ಟಡವನ್ನು ಉಳಿಸಬೇಕು ಎಂಬುದು ಒಂದಷ್ಟು ಜನರ ಅಭಿಪ್ರಾಯವಾಗಿದೆ.

ಕುಂದಾಪುರದಲ್ಲಿ ಹೊಸ ನಿರೀಕ್ಷಣಾ ಮಂದಿರ ನಿರ್ಮಾಣಕ್ಕೆ 3 ಕೋಟಿ ಅನುದಾನ ಮಂಜೂರಾಗಿದ್ದು ಮೊದಲ ಹಂತದಲ್ಲಿ ನೆಲ ಅಂತಸ್ತು (3 ಸಾಧಾರಣ ರೂಂ ಹಾಗೂ ಒಂದು ವಿಐಪಿ ರೂಮ್) ಪೂರ್ಣಗೊಳಿಸಿ, ಎರಡನೇ ಅಂತಸ್ತಿನ ಸ್ಟ್ರಕ್ಚರ್ (ರಚನೆ) ಸಿದ್ದಪಡಿಸಲಾಗುತ್ತದೆ. ಅದಕ್ಕೆ ಅಂದಾಜುಪಟ್ಟಿ ಸಿದ್ದಪಡಿಸಲಾಗಿದೆ. 2ನೇ ಅಂತಸ್ತಿನಲ್ಲಿ 1 ವಿಐಪಿ ಕೊಠಡಿ, 4 ರೂಂ ಇರಲಿದೆ. 

-ಎಂ. ರಾಮಣ್ಣ ಗೌಡ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕುಂದಾಪುರ

ಉಪವಿಭಾಗದ ಕೇಂದ್ರವಾಗಿರುವ ಕುಂದಾಪುರದಲ್ಲಿ ಹಳೆಯ ಕೇವಲ 2 ಕೊಠಡಿಯಿರುವ ಪ್ರವಾಸಿ ಮಂದಿರವಿದ್ದು ಬೇಡಿಕೆಯ ಹಿನ್ನೆಲೆ ಸುಸಜ್ಜಿತ ಹೊಸ ಪ್ರವಾಸಿ ಮಂದಿರ ನಿರ್ಮಿಸಲು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರ ಮೂಲಕ 2023ರಲ್ಲಿ ಸಚಿವ ಜಾರಕಿಹೊಳಿಯವರಿಗೆ ಮನವಿ ಸಲ್ಲಿಸಿದ್ದು ಈಗ ನೂತನ‌ ಪ್ರವಾಸಿಮಂದಿರ ನಿರ್ಮಾಣಕ್ಕೆ 3 ಕೋಟಿ ಅನುದಾನ ಮಂಜೂರಾಗಿದೆ. 

– ಹರಿಪ್ರಸಾದ ಶೆಟ್ಟಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

27 ವರ್ಷದಿಂದ ಪ್ರವಾಸಿ ಮಂದಿರ ನೋಡುತ್ತಿರುವೆ. ಬೆಳೆಯುತ್ತಿರುವ ಕುಂದಾಪುರ ನಗರಕ್ಕೆ ಸುವ್ಯವಸ್ಥಿತ, ಹೆಚ್ಚು ಕೊಠಡಿಗಳಿರುವ ಐಬಿ ಅಗತ್ಯವಿತ್ತು. ಬಹುಕಾಲದ ಮನವಿ ಬಳಿಕ ಇದೀಗಾ ನೂತನ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಕಾಲಕೂಡಿಬಂದಿದೆ. ಈ ಪರಿಸರದಲ್ಲಿರುವ ಮರಗಳನ್ನು ಉಳಿಸಿಕೊಂಡು ನೈಸರ್ಗಿಕತೆಗೆ ಒತ್ತು ನೀಡಿ ಸುಸಜ್ಜಿತ ಐಬಿ ನಿರ್ಮಾಣವಾಗಲಿ.

– ಸಳ್ವಾಡಿ ನಿರಂಜನ್ ಹೆಗ್ಡೆ (ಮಾಜಿ ಅಧ್ಯಕ್ಷರು, ವಕೀಲರ ಸಂಘ ಕುಂದಾಪುರ)

Comments are closed.