ಕರಾವಳಿ

ಫೆ.21 ರಿಂದ 23ರವರೆಗೆ ಕುಂದಾಪುರ ಭಂಡಾರ್ಕಾರ್ಸ್ ಆರ್ಟ್ಸ್ & ಸಾಯನ್ಸ್ ಕಾಲೇಜಿನಲ್ಲಿ ‘ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನ’

Pinterest LinkedIn Tumblr

ಕುಂದಾಪುರ: ಭಂಡಾರ್ಕಾರ್ಸ್ ಆರ್ಟ್ಸ್ ಆ್ಯಂಡ್ ಸಾಯನ್ಸ್ ಕಾಲೇಜು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಬೆಂಗಳೂರು ಹಾಗೂ ಧಾರವಾಡ ವಲಯ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಅಧ್ಯಾಪಕರ ಸಂಘ ಇವರ ಸಹಯೋಗದಲ್ಲಿ ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನ ಫೆ. 21, 22 ಮತ್ತು 23 ರಂದು ಕುಂದಾಪುರದ ಭಂಡಾರ್ಕಾರ್ಸ್ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶುಭಕರಾಚಾರಿ ತಿಳಿಸಿದರು.

ಕರ್ನಾಟಕ ಇತಿಹಾಸ ಪರಿಷತ್ತು 35ನೇ ವಾರ್ಷಿಕ ಮಹಾಅಧಿವೇಶನದ ಪರಿಷತ್ತಿನ ಸ್ಥಳೀಯ ಕಾರ್ಯದರ್ಶಿಗಳಾದ ಗೋಪಾಲ ಕೆ ಮಾತನಾಡಿ 1981 ರಿಂದ ಸತತವಾಗಿ ಪ್ರತಿವರ್ಷ ರಾಜ್ಯದ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳಲ್ಲಿ ನಡೆಸಲಾಗುತ್ತಿದೆ.

ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯ ಕುರಿತಂತೆ ಸಂಶೋಧನೆಗಳನ್ನು ಮಾಡಲು ಪ್ರೇರೇಪಿಸುವುದು. ಸಂಶೋಧನೆ, ಪ್ರಬಂಧಮಂಡನೆ, ಪುಸ್ತಕ ಪ್ರಕಟಣೆ ಮುಂತಾದ ಜ್ಞಾನವೃದ್ಧಿ ಪ್ರಕ್ರಿಯೆಯನ್ನು ಉತ್ತೇಜಿಸುವುದು. ಕರ್ನಾಟಕ ವಿವಿಧ ಭಾಗದ ಸಂಶೋಧಕರಿಗೆ, ವಿದ್ವಾಂಸರುಗಳಿಗೆ ಹೊಸ ಹೊಸ ವ್ಯಾಖ್ಯಾನ ವಿವರಣೆಯುಳ್ಳ ಕೃತಿಗಳನ್ನು ಪ್ರಕಟಿಸಲು ವೇದಿಕೆಯನ್ನು ಒದಗಿಸುವುದು. ಕರ್ನಾಟಕದ ಇತಿಹಾಸದ ವೈಶಿಷ್ಟತೆಯನ್ನು ಬೌದ್ಧಿಕ ವಲಯಕ್ಕೆ ತಲುಪಿಸುವುದು ಈ ಮಹಾ ಅಧೀವೇಶನದ ಉದ್ದೇಶ ಎಂದರು.

ಫೆ.21ರ ಬೆಳಗ್ಗೆ 10ಕ್ಕೆ ಮಾಹೆ ವಿವಿಯ ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಉದ್ಘಾಟಿಸಲಿದ್ದು, ಕಾಲೇಜಿನ ಹಿರಿಯ ವಿಶ್ವಸ್ಥ ಕೆ. ಶಾಂತರಾಮ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿವಿ, ದಿಲ್ಲಿ ವಿವಿಯ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ| ಕೇಶವನ್ ವೇಳುತಾಟ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಇತಿಹಾಸ ಪರಿಷತ್ ರಾಜ್ಯ ಅಧ್ಯಕ್ಷ ಡಾ| ರಾಜಣ್ಣ, ಹಂಪಿ ವಿವಿ ಕುಲಪತಿ ಡಾ| ಡಿ.ವಿ. ಪರಮಶಿವಮೂರ್ತಿ, ಬೆಂಗಳೂರು ವಿವಿ ಕುಲಪತಿ ಡಾ| ಎಂ.ಎಸ್. ಜಯಕರ ಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ವಿವಿಧ ಪುಸ್ತಕ ಬಿಡುಗಡೆ, ಸುಮಾರು 150 ಪ್ರಬಂಧ ಮಂಡನೆ, ದತ್ತಿನಿಧಿ ಉಪನ್ಯಾಸಗಳಲ್ಲಿ ತುಳುನಾಡಿನ ಬುಡಕಟ್ಟು ದೈವಗಳು, ಆಧುನಿಕ ಮುಖಾಮುಖಿ, ಉತ್ತರ ಕನ್ನಡ ಜಿಲ್ಲೆಯ ಶಾಸನಗಳು, ಫೆ.22 ರಂದು ಬೆಳಗ್ಗೆ 10ಕ್ಕೆ ಕುದ್ಮಲ್ ರಂಗರಾವ್, ಸ್ವಾತಂತ್ರ್ಯ ಹೋರಾಟಗಾರ್ತಿ ಉಮಾಬಾಯಿ ಕುಂದಾಪುರ ಕುರಿತು ಉಪನ್ಯಾಸ ನಡೆಯಲಿದೆ.

ಫೆ. 23 ರ ಬೆಳಗ್ಗೆ 10 ಕ್ಕೆ ಅವಿಭಜಿತ ದ.ಕ. ಜಿಲ್ಲೆಯ ಇತಿಹಾಸ – ಸಂಸ್ಕೃತಿ ಚಿಂತನಾ- ಮಂಥನದಲ್ಲಿ ಉಪನ್ಯಾಸವಿದೆ. ಮಂಗಳೂರು ವಿವಿ ಇತಿಹಾಸ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಕೆ.ಎಂ. ಲೋಕೇಶ್ ಸಮಾರೋಪ ನುಡಿಗಳನ್ನಾಡಲಿದ್ದು, ಕಾಲೇಜಿನ ಪ್ರಾಂಶುಪಾಲ ಡಾ| ಶುಭಕರಾಚಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಐತಿಹಾಸಿಕ ನೆಲೆಯನ್ನು ಪರಿಚಯಿಸುವ ಪುಸ್ತಕಗಳ ಬಿಡುಗಡೆ ನಡೆಯಲಿದೆ.  ಪ್ರಶಸ್ತಿ ಪ್ರದಾನ : ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿದ್ಯಾಂಸರುಗಳಿಗೆ ರಾಜರ್ಷಿ ಡಾ. ಡಿ. ವಿರೇಂದ್ರ ಹೆಗ್ಗಡೆ ಪ್ರಶಸ್ತಿ, ಡಾ. ಬಿ. ಶೇಕ್ ಅಲಿ ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಒನಕೆ ಓಬವ್ವ ಪ್ರಶಸ್ತಿ, ಕುಂದಣ ಪ್ರಶಸ್ತಿ ಹಾಗೂ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಗಳನ್ನು ನೀಡಲಾಗುವುದು‌ ಎಂದರು.

ಇತಿಹಾಸ ಪರಿಷತ್‌ನ ಪ್ರ.ಕಾರ್‍ಯದರ್ಶಿ ಪ್ರೊ| ಐ.ಕೆ. ಪತ್ತಾರ, ಹೊನ್ನೂರು ಸರಕಾರಿ ಪದವಿ ಕಾಲೇಜಿನ ಮುಖ್ಯಸ್ಥ ಡಾ| ಎನ್.ವಿ. ಅಸ್ಕಿ, ಭಂಡಾರ್‌ಕಾರ್‍ಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ| ಸತ್ಯನಾರಾಯಣ, ಕಚೇರಿ ಅಧೀಕ್ಷಕ ಗೋಪಾಲ್, ಉಪನ್ಯಾಸಕ ಶರಣ್ ಎಸ್.ಜೆ., ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಸುದ್ದಿಗೋಷ್ಠಿಯಲ್ಲಿದ್ದರು.

Comments are closed.