(ವರದಿ: ಯೋಗೀಶ್ ಕುಂಭಾಸಿ)
ಕುಂದಾಪುರ: ಕರಾವಳಿಯ ಪ್ರಮುಖ ನಗರಗಳು ಹಾಗೂ ಮಲೆನಾಡು ಸಂಪರ್ಕ ಕೊಂಡಿ ಮಾತ್ರವಲ್ಲದೆ ಹತ್ತಾರು ಊರುಗಳ ಸಂಪರ್ಕದ ಪ್ರಮುಖ ಮಾರ್ಗವಾದ ಹಾಲಾಡಿ- ಶಂಕರನಾರಾಯಣ ರಸ್ತೆ ಅಗಲೀಕರಣ, ಮರು ಡಾಂಬರೀಕರಣ ಕಾಮಗಾರಿ ಸಂಪೂರ್ಣಗೊಂಡಿದ್ದು ಸಂಚಾರಕ್ಕೆ ಮುಕ್ತಗೊಂಡಿದೆ.
ಪ್ರಮುಖ ರಾಜ್ಯ ಹೆದ್ದಾರಿ: ಬೈಂದೂರು-ವಿರಾಜಪೇಟೆ ರಾಜ್ಯ ಹೆದ್ದಾರಿಯ ಶಂಕರನಾರಾಯಣ-ಹಾಲಾಡಿ ರಸ್ತೆಯು ಪ್ರಮುಖ ರಸ್ತೆಗಳಲ್ಲಿ ಒಂದಾಗಿದ್ದು ನಿತ್ಯ ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕೊಲ್ಲೂರು, ಶೃಂಗೇರಿ, ಧರ್ಮಸ್ಥಳ, ಕಮಲಶಿಲೆ, ಮಂದಾರ್ತಿ ಮತ್ತಿತರ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ತೆರಳಲು ಸಹಸ್ರಾರು ಭಕ್ತರು ಈ ರಾಜ್ಯ ಹೆದ್ದಾರಿಯನ್ನು ಅವಲಂಭಿಸಿದ್ದಾರೆ. ಹಾಗೆಯೇ ಕುಂದಾಪುರದಿಂದ ಹೆಬ್ರಿ, ಆಗುಂಬೆಗೆ ತೆರಳಲು, ಕಾರ್ಕಳದಿಂದ ಕುಂದಾಪುರ, ಹಾಲಾಡಿ, ಸಿದ್ದಾಪುರ, ಕೊಲ್ಲೂರಿಗೆ, ಕೊಲ್ಲೂರಿನಿಂದ ಉಡುಪಿಗೆ ತೆರಳಲು ಇದೇ ಮಾರ್ಗವು ಸಂಪರ್ಕ ಕೊಂಡಿಯಾಗಿದೆ. ಶಾಲಾ ವಾಹನಗಳು, ರೂಟ್ ಬಸ್ಸುಗಳು ಸಹಿತ, ಖಾಸಗಿ ವಾಹನಗಳ ದಟ್ಟಣೆ ಈ ರಸ್ತೆಯಲ್ಲಿ ಜಾಸ್ಥಿಯಿರುತ್ತದೆ.
ಸುಸಜ್ಜಿತ ರಸ್ತೆ ನಿರ್ಮಾಣ: ಶಂಕರನಾರಾಯಣ-ಹಾಲಾಡಿ ರಾಜ್ಯ ಹೆದ್ದಾರಿ ಹದಗೆಟ್ಟು ಹಲವು ವರ್ಷಗಳು ಕಳೆದಿತ್ತು. ಅಪಾಯಕಾರಿ ತಿರುವು, ಹೊಂಡ-ಗುಂಡಿ ರಸ್ತೆಯಲ್ಲಿ ವಾಹನ ಸವಾರರು ಜೀವಭಯದ ನಡುವೆ ಸಂಚರಿಸಬೇಕಾಗಿತ್ತು. ರಸ್ತೆ ನಿರ್ಮಾಣ ಮಾಡಿಕೊಡಲು ಸಾರ್ವಜನಿಕರು ಬಹುಕಾಲದಿಂದ ಬೇಡಿಕೆಯಿಡುತ್ತಲೇ ಬಂದಿದ್ದರು. ಜಿಲ್ಲೆಯ ಜನಪ್ರತಿನಿಧಿಗಳ ಮನವಿಯಂತೆ ಪ್ರಸ್ತುತ ಸರಕಾರದ ಲೋಕೋಪಯೋಗಿ ಇಲಾಖೆಯಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿಯಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಸುಮಾರು 4 ಕಿ.ಮೀ ಉದ್ದದ ರಸ್ತೆ ಕಾಮಗಾರಿ ನಡೆದಿದೆ. ಮೊದಲಿಗೆ 5.5 ಮೀಟರ್ ಅಗಲವಿದ್ದು ಅಲ್ಲಲ್ಲಿ ತಿರುವು ಹೊಂದಿದ್ದ ರಸ್ತೆಯನ್ನು ಪ್ರಸ್ತುತ 7 ಮೀಟರ್ ಅಗಲೀಕರಣಗೊಳಿಸಿದ್ದು, ತಿರುವುಗಳನ್ನು ಕಾಮಗಾರಿ ವೇಳೆ ಸಾಕಷ್ಟು ಸರಿಪಡಿಸಲಾಗಿದೆ.
ಭಾಗಶಃ ಕಾಮಗಾರಿ ಪೂರ್ಣ: ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಉಳಿದಂತೆ ರಸ್ತೆಗೆ ಮಾರ್ಕಿಂಗ್, ಕಿಲೋಮೀಟರ್-ಹೆಕ್ಟೋಮೀಟರ್ ಕಲ್ಲುಗಳ ವ್ಯವಸ್ಥೆ, ಸೂಚನಾ ಫಲಕ ಹಾಗೂ ಒಂದೆರಡು ಕಡೆ ಮೆಟಲ್ ಭೀಮ್ (ಲೋಹದ ಪಟ್ಟಿ ತಡೆಗೋಡೆ) ಅಳವಡಿಕೆ ಶೀಘ್ರ ಮಾಡಲಾಗುತ್ತದೆ.– ಎಂ. ರಾಮಣ್ಣ ಗೌಡ, ಲೋಕೋಪಯೋಗಿ ಇಲಾಖೆ ಎ.ಇ.ಇ ಕುಂದಾಪುರ)
ಈ ರಾಜ್ಯ ಹೆದ್ದಾರಿ ಸುವ್ಯವಸ್ಥೆಗೊಳಿಸಬೇಕೆಂಬುದು ವಾಹನ ಸವಾರರ ಬಹಳಷ್ಟು ಸಮಯದ ಬೇಡಿಕೆಯಾಗಿತ್ತು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆಯವರು ಮುತುವರ್ಜಿ ವಹಿಸಿದ್ದು ಸರ್ಕಾರ ಅನುದಾನ ನೀಡಿ ಕಳೆದ ವರ್ಷಾಂತ್ಯದಲ್ಲಿ ಶಾಸಕರು ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿದ್ದರು. ಸದ್ಯ ರಸ್ತೆ ಕೆಲಸ ಸಂಪೂರ್ಣವಾಗಿದ್ದು ಸಾರ್ವಜನಿಕರ ಬೇಡಿಕೆ ಈಡೇರಿದೆ.– ಉಮೇಶ್ ಶೆಟ್ಟಿ ಕಲ್ಗದ್ದೆ (ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ)
ಸ್ಥಳೀಯನಾಗಿ ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುತ್ತೇನೆ. ಉಭಯ ಜಿಲ್ಲೆಯ ಪ್ರಮುಖ ಘಾಟಿಗಳು ಮುಚ್ಚಿದಾಗ ಮತ್ತು ಬೇರೆಬೇರೆ ಕಾರಣಕ್ಕೆ ಅಗತ್ಯಕ್ಕೂ ಜಾಸ್ಥಿ ಸಾಮರ್ಥ್ಯದ ಲೋಡ್ ಹಾಕಿದ ಘನ ವಾಹನಗಳು ಈ ರಸ್ತೆಯಲ್ಲಿ ತಿರುಗಿ ಕೆಲವು ವರ್ಷಗಳಿಂದ ರಸ್ತೆ ದುರವಸ್ಥೆಯಲ್ಲಿತ್ತು. ಬಹಳಷ್ಟು ವರ್ಷಗಳ ಬೇಡಿಕೆ, ಮನವಿಗೆ ಸ್ಪಂದನೆ ಸಿಕ್ಕಿದ್ದು ಇದೀಗಾ ಸುಸಜ್ಜಿತ ಕಾಮಗಾರಿ ನಡೆದು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ.– ಶಾಡಿಗುಂಡಿ ರಾಜೀವ ಶೆಟ್ಟಿ (ಉಡುಪಿ ಜಿಲ್ಲಾ ರೈತಸಂಘದ ಪ್ರಮುಖರು)
Comments are closed.