ಕುಂದಾಪುರ: ಮಾ.15 ರಂದು ಗಣಪತಿ ಪ್ರಾರ್ಥನೆಯೊಂದಿಗೆ ವಾರ್ಷಿಕ ಜಾತ್ರೆಯ ಧಾರ್ಮಿಕ ವಿಧಿಗಳು ಆರಂಭಗೊಳ್ಳುತ್ತದೆ. ಧ್ವಜಾರೋಹಣ, ಯಾಗ ಶಾಲೆ ಪ್ರವೇಶ, ಭೇರಿ ತಾಡನ, ಕೌತುಕ ಬಂಧನ ಹಾಗೂ ನಗರೋತ್ಸವ ನಡೆಯಲಿದೆ. ಮಾ.16 ರಿಂದ 21 ರವರೆಗೆ ಪ್ರತಿ ದಿನ ರಾತ್ರಿ ಮಯೂರ, ಡೋಲಾ, ಪುಷ್ಪಮಂಟಪ, ವೃಷಭ, ಗಜ, ಸಿಂಹ ವಾಹನೋತ್ಸವದ ಪುರಮೆರವಣಿಗೆ ಓಲಗ ಮಂಟಪದವರೆಗೂ ನಡೆಯಲಿದೆ. ಪ್ರತಿ ದಿನ ಸಂಜೆ ಕಟ್ಟೆ ಉತ್ಸವ, ಸ್ವರ್ಣಮುಖಿ ರಂಗ ಮಂದಿರದಲ್ಲಿ ದೇಶದ ವಿವಿಧ ಭಾಗದ ಕಲಾವಿದರುಗಳಿಂದ ಸೇವಾ ರೂಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ ಹೇಳಿದ್ದಾರೆ.
ದೇಗುಲದ ವಾರ್ಷಿಕ ಜಾತ್ರೆ ಹಾಗೂ ಶ್ರೀ ಮನ್ಮಹಾರಥೋತ್ಸವದ ಬಗ್ಗೆ ಭಾನುವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.22 ರಂದು ಬೆಳಿಗ್ಗೆ 11.15 ಕ್ಕೆ ರಥಾರೋಹಣ ಹಾಗೂ ಸಂಜೆ 4 ಕ್ಕೆ ರಥ ಅವರೋಹಣ ನಡೆಯಲಿದೆ. ಮಾ.23 ಕ್ಕೆ ಓಕುಳಿ ಉತ್ಸವ, ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ ನಡೆಯಲಿದೆ. ಮಾ.24 ರಂದು ಬೆಳಿಗ್ಗೆ 7 ಕ್ಕೆ ಅಶ್ವಾರೋಹಣೋತ್ಸವದಲ್ಲಿ ಶ್ರೀದೇವಿಯನ್ನು ಕರೆತಂದು ಸರಸ್ವತಿ ಮಂಟಪದಲ್ಲಿ ಕುಳ್ಳಿರಿಸಿ, ಯಾಗ ಶಾಲೆಯಲ್ಲಿ ಶಾಂತಿ ತತ್ವ ಕಲಾಭಿವೃದ್ಧಿ ಹೋಮದ ಪೂರ್ಣಾಹುತಿ ನಡೆಸಲಾಗುವುದು. ಉತ್ಸವದ ಅವಧಿಯಲ್ಲಿ ದೇವಸ್ಥಾನ ಹಾಗೂ ನಗರವನ್ನು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗುವುದು. ಭಕ್ತರ ಮಾರ್ಗಾಯಸಕ್ಕಾಗಿ ವಿವಿಧ ಸಂಘ-ಸಂಸ್ಥೆಗಳು ಹಾಗೂ ಭಕ್ತರ ಸಹಕಾರದಿಂದ ಪಾನಕ ಹಾಗೂ ಮಜ್ಜಿಗೆ ವಿತರಣೆ ನಡೆಯಲಿದೆ. ನೆರಳಿಗಾಗಿ ಶಾಮಿಯಾನ ವ್ಯವಸ್ಥೆ ಕಲ್ಪಿಸಲಾಗುವುದು. ನೂಕು ನುಗ್ಗಲು ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆಯ ನಿರ್ವಹಣೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಪೊಲೀಸ್ ಹಾಗೂ ಗ್ರಹ ರಕ್ಷಕದಳ ಸಿಬ್ಬಂದಿಗಳ ಸೇವೆ ಪಡೆದುಕೊಳ್ಳಲಾಗುವುದು. ಆರೋಗ್ಯ, ವಸತಿ, ನೈರ್ಮಲ್ಯ, ಉಟೋಪಚಾರ, ನೀರು ಸೇರಿದಂತೆ ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲು ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ತಂತ್ರಿ ಕೆ.ನಿತ್ಯಾನಂದ ಅಡಿಗ, ಮಹಾಲಿಂಗ ವೆಂಕ ನಾಯ್ಕ್, ಧನಾಕ್ಷಿ, ಸುಧಾ ಕೆ, ಸುರೇಂದ್ರ ಶೆಟ್ಟಿ, ಅಭಿಲಾಷ್ ಪಿ.ವಿ, ಯು.ರಾಜೇಶ್ ಕಾರಂತ್, ರಘುರಾಮ ದೇವಾಡಿಗ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಅರ್ಚಕರು, ಸಿಬ್ಬಂದಿಗಳು, ಭಕ್ತರು ಹಾಗೂ ಸ್ಥಳೀಯರ ಸಹಕಾರದಲ್ಲಿ ಪೂರ್ವ ಸಿದ್ದತೆಗಳು ನಡೆಯುತ್ತಿದೆ ಎಂದು ಅಧ್ಯಕ್ಷ ಕೆ.ಬಾಬು ಶೆಟ್ಟಿ ತಿಳಿಸಿದರು.
ಸುದ್ಧಿ ಗೋಷ್ಠಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ರಘರಾಮ ದೇವಾಡಿಗ ಆಲೂರು, ಧನಾಕ್ಷಿ ವಿಶ್ವನಾಥ ಪೂಜಾರಿ, ಸುರೇಂದ್ರ ಶೆಟ್ಟಿ ಇದ್ದರು. ಸಿಬ್ಬಂದಿ ಸಂತೋಷ್ ಕೊಠಾರಿ ಸ್ವಾಗತಿಸಿದರು.
Comments are closed.