ಕರಾವಳಿ

ಪತ್ರಕರ್ತರಿಗೆ ಸಾಸ್ತಾನ ಟೋಲ್‌ನಲ್ಲಿ ಶುಲ್ಕ ವಿನಾಯಿತಿ ಮುಂದುವರಿಸಲು ಮನವಿ

Pinterest LinkedIn Tumblr

ಉಡುಪಿ: ಸಾಸ್ತಾನ ಟೋಲ್‌ಗೇಟ್‌ನಲ್ಲಿ ಈ ಹಿಂದೆ ಪತ್ರಕರ್ತರಿಗೆ ನೀಡಲಾಗುತ್ತಿದ್ದ ಶುಲ್ಕ ವಿನಾಯಿತಿಯಲ್ಲಿ  ವ್ಯತ್ಯಾಸವಾಗುತ್ತಿದೆ. ಇದರಿಂದ ಪತ್ರಕರ್ತರಿಗೆ ಸಮಸ್ಯೆಯಾಗುತ್ತಿದ್ದು ಶುಲ್ಕ ವಿನಾಯಿತಿ ಹಿಂದಿನಂತೆ ಮುಂದುವರಿಸಬೇಕು ಎಂದು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸಾಸ್ತಾನ ಟೋಲ್ ಮುಖ್ಯಸ್ಥರಿಗೆ ಮಾ.ರಂದು ಮನವಿ ನೀಡಲಾಯಿತು.

ಕರ್ನಾಟಕ ಸರಕಾರದಿಂದ ಅಧಿಕೃತ ಮಾನ್ಯತೆ ಪಡೆದ ರಾಜ್ಯ ಕಾರ್‍ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆಗಳಾದ ಉಡುಪಿ ಜಿಲ್ಲಾ ಕಾರ್‍ಯನಿರತ ಪತ್ರಕರ್ತರ ಸಂಘ ಹಾಗೂ ವಿವಿಧ ತಾಲೂಕು ಸಂಘಗಳ ಕಾರ್‍ಯನಿರ್ವಹಿಸುತ್ತಿರುವ ಸಂಘದ  ಸದಸ್ಯರು ಪ್ರತಿದಿನ ಸುದ್ದಿ ಸಂಪಾದನೆ, ಪತ್ರಿಕಾ ಕಚೇರಿಯಲ್ಲಿ ಕಾರ್‍ಯನಿರ್ವಹಿಸಲು ಜಿಲ್ಲೆಯ ಬೇರೆ-ಬೇರೆ ಭಾಗದಿಂದ ಸಾಸ್ತಾನ ಟೋಲ್‌ಗೇಟ್ ಮೂಲಕ ಉಡುಪಿ- ಕುಂದಾಪುರ ಹಾಗೂ ಕುಂದಾಪುರ -ಉಡುಪಿ ಮಾರ್ಗವಾಗಿ ಸಂಚರಿಸುತ್ತಾರೆ.  ಇವರೆಲ್ಲರಿಗೂ ಹಲವು ವರ್ಷದಿಂದ ಇಲ್ಲಿ ಶುಲ್ಕ ವಿನಾಯಿತಿ ನೀಡಲಾಗಿತ್ತು.  ಆದರೆ ಇದೀಗ ಎಕಾಎಕಿ ಈ ರಿಯಾಯಿತಿಯನ್ನು ರದ್ದುಪಡಿಸಲಾಗಿದೆ ಹಾಗೂ ಸ್ಥಳೀಯ ವರದಿಗಾರರಾದ ಬ್ರಹ್ಮಾವರ ಭಾಗದವರಿಗೂ ಶುಲ್ಕ ಕಡಿತಗೊಳಿಸಲಾಗುತ್ತಿದೆ.

ಕೆಲವೊಮ್ಮೆ  ಪತ್ರಕರ್ತರ ಸಂಘದ ಸದಸ್ಯರಾಗಿರುವ ಬಗ್ಗೆ ಗುರುತು ಚೀಟಿ ತೋರಿಸಿದಾಗ ಶುಲ್ಕರಹಿತ ಪ್ರಯಾಣಕ್ಕೆ ಅವಕಾಶ ನೀಡಿದರೂ ಒಂದೆರಡು ಕಿ.ಮೀ. ಪ್ರಯಾಣಿಸಿದ ಬಳಿಕ ಶುಲ್ಕ ಕಡಿತವಾದ ಸಂದೇಶ ತಲುಪುತ್ತಿದೆ.  ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಜಿಲ್ಲೆಯಲ್ಲಿ  ಕಾರು ಹೊಂದಿರುವ ಪತ್ರಕರ್ತರು ಕೆಲವೇ ಕೆಲವು ಮಂದಿ ಇದ್ದು ನಿತ್ಯ ಕಾರಿನಲ್ಲಿ ಪ್ರಯಾಣಿಸುವವರು ಬೆರಳೆಣಿಕೆಯವರು ಮಾತ್ರ. ಪತ್ರಕರ್ತರ ಸಂಘದ

ಸದಸ್ಯರಾಗಿರುವ ಅಧಿಕೃತ ಸದಸ್ಯರ ವಿವರದ ಪಟ್ಟಿಯನ್ನು  ನಿಮಗೆ ನೀಡಲು ಸಿದ್ಧರಿದ್ದು ಅಧಿಕೃತ ಸದಸ್ಯರಿಗೆ ಈ ಹಿಂದಿನಂತೆ ಶುಲ್ಕ ವಿನಾಯಿತಿ ನೀಡಬೇಕು ಎಂದು ವಿನಂತಿಸಿದರು ಹಾಗೂ ವಾರದೊಳಗೆ ಈ ಬಗ್ಗೆ ತಮ್ಮ ತೀರ್ಮಾನವನ್ನು ತಿಳಿಸಬೇಕು. ಶುಲ್ಕ ವಿನಾಯಿತಿ ನೀಡದಿದ್ದರೆ ಈ ಬಗ್ಗೆ ಮುಂದಿನ  ಹೋರಾಟ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭ ಸಾಸ್ತಾನ ಟೋಲ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಯೋಗೀಶ್ ನಾಯರಿಯವರಿಗೆ ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಮನವಿ ಹಸ್ತಾಂತರಿಸಿದರು.   ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ತೀರ್ಮಾನ ತಿಳಿಸುವುದಾಗಿ ಯೋಗೀಶ್ ಭರವಸೆ ನೀಡಿದರು. ಕೋಟ ಠಾಣಾಧಿಕಾರಿ ರಾಘವೇಂದ್ರ ಸಿ. ಉಪಸ್ಥಿತರಿದ್ದರು.

ಬ್ರಹ್ಮಾವರ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಹಾಗೂ ಉಪಾಧ್ಯಕ್ಷ ಮೋಹನ್ ಉಡುಪ, ಖಜಾಂಚಿ ಶೇಷಗಿರಿ ಭಟ್, ಪದಾಧಿಕಾರಿಗಳಾದ ಬಂಡೀಮಠ ಶಿವರಾಮ ಆಚಾರ್ಯ, ಪ್ರವೀಣ್ ಮುದ್ದೂರು, ರವೀಂದ್ರ ಕೋಟ, ಇಬ್ರಾಹಿಂ ಸಾಹೇಬ್, ಪ್ರವೀಣ್ ಬ್ರಹ್ಮಾವರ, ಕಾರ್ಯದರ್ಶಿ ಹರೀಶ್ ತುಂಗ, ಚಂದ್ರಶೇಖರ ಬೀಜಾಡಿ, ನಾಗರಾಜ್ ಅಲ್ತಾರು, ಕೆ.ಜಿ.ವೈದ್ಯ, ಗಣೇಶ್ ಸಾಹೇಬ್ರಕಟ್ಟೆ  ಇನ್ನಿತರ ಸದಸ್ಯರು ಇದ್ದರು.

Comments are closed.