ಕರಾವಳಿ

ಬ್ರಹ್ಮಾವರ | ಚಿನ್ನ ಸರಗಳ್ಳತನ ಪ್ರಕರಣದಲ್ಲಿ ಓರ್ವನ ಬಂಧನ; ದ್ವಿಚಕ್ರ ವಾಹನ ಸಹಿತ 1 ಲಕ್ಷ 60 ಸಾವಿರ ಮೌಲ್ಯದ  ಚಿನ್ನಾಭರಣ ವಶಕ್ಕೆ

Pinterest LinkedIn Tumblr

ಬ್ರಹ್ಮಾವರ: ಇಲ್ಲಿನ ಹೊಸಾಳ-ಬಾರಕೂರು ಹಾಗೂ ಯಡ್ತಾಡಿ-ಮಂದಾರ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೃದ್ದ ಮಹಿಳೆಯವರನ್ನೇ ಗುರಿ ಮಾಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಹಾಗೂ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿದ್ದ ಬ್ರಹ್ಮಾವರ ಠಾಣೆಯ 2 ಪ್ರಕರಣವನ್ನು ಭೇಧಿಸಿದ ಬ್ರಹ್ಮಾವರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ‌ ಸಾಲಿಗ್ರಾಮದ ಕಾರ್ಕಡ ಮೂಲದ ಮಂಜುನಾಥ ಮಯ್ಯ (45) ಬಂಧಿತ ಆರೋಪಿ. ಈತನಿಂದ ದರೋಡೆ ಮಾಡಿದ ಚಿನ್ನದ ಕರಿಮಣಿ ಸರವನ್ನು ವಶಪಡಿಸಕೊಳ್ಳಲಾಗಿದೆ. ಅಂದಾಜು ಮೌಲ್ಯ 1 ಲಕ್ಷದ 60 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

 

ಘಟನೆ ವಿವರ: ಮಾ.20 ರಂದು ಯಡ್ತಾಡಿ ಗ್ರಾಮದ 57 ವರ್ಷದ ಮಹಿಳೆ ಮನೆಯ ಪಕ್ಕದ ಮನೆಗೆ‌ ಕಾರ್ಯಕ್ರಮದ ನಿಮಿತ್ತ ತೆರಳುವಾಗ ಸಂಜೆ ದ್ವಿಚಕ್ರ ವಾಹನದಲ್ಲಿ‌ ಬಂದ ಆರೋಪಿ ಮಹಿಳೆ ಕುತ್ತಿಗೆಯಲ್ಲಿದ್ದ 28 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಮಂದಾರ್ತಿ ಕಡೆಗೆ ವಾಹನದಲ್ಲಿ ತೆರಳಿದ್ದ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ನಡೆದ ಒಂದೇ ದಿನದೊಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಇನ್ನೊಂದು ಪ್ರಕರಣದ ತನಿಖೆಗಾಗಿ ಮುಂದಿನದಲ್ಲಿ ಕಸ್ಟಡಿಗೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

 

ಉಡುಪಿ ಎಸ್ಪಿ ಡಾ.ಅರುಣ್ ಕೆ., ಹೆಚ್ಚುವರಿ ಎಸ್ಪಿಯವರಾದ ಎಸ್.ಟಿ. ಸಿದ್ಧಲಿಂಗಪ್ಪ, ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಪ್ರಭು ಡಿ.ಟಿ ನಿರ್ದೇಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ., ಕಾನೂನು&ಸುವ್ಯವಸ್ಥೆ  ಪಿಎಸ್ಐ ಸುದರ್ಶನ್ ದೊಡ್ಡಮನಿ, ತನಿಖಾ ಪಿಎಸ್ಐ ಮಾಹಾಂತೇಶ ಜಾಬಗೌಡ, ಠಾಣೆಯ ಅಪರಾಧ ಪತ್ತೆ ಸಿಬ್ಬಂದಿಗಳಾದ ಇಮ್ರಾನ್, ಮಹಮ್ಮದ್ ಅಜ್ಮಲ್ ಹೈಕಾಡಿ, ಕಿರಣ್ ಕುಮಾರ್, ಸಿದ್ದಪ್ಪ, ಸಿಪಿಐ ಕಛೇರಿ ಸಿಬ್ಬಂದಿ ವಿಶ್ವನಾಥ ಶೆಟ್ಟಿ, ಜಿಲ್ಲಾ ಸಿಡಿಆರ್ ವಿಭಾಗದ ದಿನೇಶ ಇದ್ದರು.

Comments are closed.