ಕರಾವಳಿ

ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ಮಲ್ಪೆ ಬಂದರಿನಲ್ಲಿ ಶನಿವಾರ ಮಲ್ಪೆ ಮೀನುಗಾರರ ಸಂಘ ಮತ್ತು ಇತರ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೀನು ಕದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಲ್ಪೆ ಮೀನುಗಾರರ ಸಂಘ ಮತ್ತು ಇತರ ಪ್ರಮುಖ ಮೀನುಗಾರರ ಸಂಘಗಳು ಪ್ರತಿಭಟನೆ ಆಯೋಜಿಸಿದ್ದವು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು, ಮಹಿಳೆಯನ್ನು ಕಟ್ಟಿಹಾಕಿ ಎರಡು ಏಟು ಕೊಟ್ಟದ್ದನ್ನು ಸಮರ್ಥಿಸಿಕೊಂಡಿದ್ದರು. ಕಳ್ಳರು ನಮ್ಮ ಮನೆಗೆ ಪ್ರವೇಶಿಸಿದರೆ, ನಾವು ಏನು ಮಾಡಬೇಕು? ಪೊಲೀಸರು ಬರಲು 5-6 ಗಂಟೆ ತೆಗೆದುಕೊಂಡರೆ, ನಾವು ಏನು ಮಾಡಬೇಕು? ನಾವು ಕಳ್ಳರನ್ನು ಕಟ್ಟಿ ಹಾಕದೆ ಇನ್ನೇನು ಮಾಡಲು ಸಾಧ್ಯ? ಅವರ ಮೇಲೆ ಮಚ್ಚು, ಕತ್ತಿ ಅಥವಾ ಮಾರಕ ಆಯುಧಗಳಿಂದ ದಾಳಿ ಮಾಡಿದ್ದೇವಾ? ಕೇವಲ ಕಪಾಳಮೋಕ್ಷ, ಮಹಿಳೆಯೇ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ ಎಂದು ಹೇಳಿದ್ದರು.

ಈ ಹೇಳಿಕೆ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸರು ಸುಮೋಟೋ ಕೇಸು ದಾಖಲಿಸಿದ್ದಾರೆ. ದ್ವೇಷ ಭಾವನೆಯಿಂದ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು, ಬಿಎನ್ ಎಸ್ 57, 191 (1)192 ನಂತೆ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕವಾಗಿ ಕಟ್ಟಿಹಾಕಿದ್ದು ಸರಿ ಎಂಬುದನ್ನು ಮಧ್ವರಾಜ್ ಸಮರ್ಥಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ಕೇಸ್ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

Comments are closed.