ಕುಂದಾಪುರ: ಸರಕಾರಿ ಹಾಡಿಯಲ್ಲಿ ಮಣ್ಣಿನ ಮಡಿಕೆಯೊಂದರಲ್ಲಿ ಸಿಕ್ಕ ಹಳೆಯ ಕಾಲದ ಚಿನ್ನಾಭರಣಗಳನ್ನು ತನ್ನ ಸ್ವಂತಕ್ಕೆ ಬಳಸಿದ ಸಾಧು (45) ಎಂಬುವರ ವಿರುದ್ಧದ ಆರೋಪ ಸಾಭೀತಾಗಿದ್ದು, ತಪ್ಪಿತಸ್ಥಳೆಂದು ಕುಂದಾಪುರದ 2ನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಮಾನಿಸಿದೆ. ಆದರೆ ಕಳೆದ 13 ವರ್ಷಗಳಿಂದ ಈ ಪ್ರಕರಣದಲ್ಲಿ ಆರೋಪಿತೆ ತೋರಿದ ಸನ್ನಡತೆ ಆಧಾರದಲ್ಲಿ ಅವರಿಗೆ ನ್ಯಾಯಾಧೀಶರು ಕಾರಾಗೃಹ ವಾಸದ ಶಿಕ್ಷೆ ನೀಡದೇ ವಿನಾಯಿತಿ ನೀಡಿದ್ದಾರೆ.
ಅಮಾಸೆಬೈಲು ಠಾಣಾ ವ್ಯಾಪ್ತಿಯ ಮಚ್ಚಟ್ಟು ಎನ್ನುವಲ್ಲಿ ಸರಕಾರಿ ಹಾಡಿಯಲ್ಲಿ ದರಲೆ ಗುಡಿಸುವಾಗ 2012ರ ಡಿ.15 ರಂದು ಸಾಧು ಅವರಿಗೆ ಮಣ್ಣಿನ ಮಡಿಕೆಯಲ್ಲಿ 16-17 ನೇ ಶತಮಾನದ ಕೃಷ್ಣ ದೇವರಾಯ ಕಾಲದ ಚಿನ್ನಾಭರಣ ಸಿಕ್ಕಿತ್ತು. ಈಗಿನ ಮೌಲ್ಯದ ಪ್ರಕಾರ 50-60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದಾಗಿತ್ತು ಎಂದು ಅಂದಾಜಿಸಲಾಗಿದೆ. ಇದನ್ನು ಆರೋಪಿ ಸರಕಾರ ಅಥವಾ ಪೊಲೀಸರ ಗಮನಕ್ಕೆ ತಾರದೇ, ತನ್ನ ಸ್ವಂತಕ್ಕೆ ಬಳಸಿದ ಆರೋಪ ಎದುರಿಸುತ್ತಿದ್ದರು.
ಪ್ರಕರಣದ ಹಿನ್ನೆಲೆ: ಈ ಚಿನ್ನಾಭರಣ ಸಿಕ್ಕ ವೇಳೆ ಇವರೊಂದಿಗೆ ಇದ್ದ ವ್ಯಕ್ತಿ ಪಾಲು ಕೇಳಿದ್ದು, ಇವರು ಮತ್ತೆ ಕೊಡಲು ಒಪ್ಪದಾಗ ಆ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದ. ಅಂದಿನ ಡಿವೈಎಸ್‌ಪಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅದರಂತೆ ಸಾಧು ಪೂಜಾರ್ತಿ ವಿರುದ್ಧ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಆಗಿನ ಎಸ್‌ಐ ನಾಸೀರ್ ಹುಸೇನ್ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮೊದಲಿಗೆ ಈ ಪ್ರಕರಣ ಕುಂದಾಪುರದ ಒಂದನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಬಳಿಕ ಕುಂದಾಪುರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಸಾಧು ತಪ್ಪಿತಸ್ಥರೆಂದು ತೀರ್ಮಾನಿಸಿ, ಅವರ ಬಳಿಯಿದ್ದ ಹಳೆಯ ಕಾಲದ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಲು ಆದೇಶಿಸಿದೆ. ಅಂದು ಸಿಕ್ಕಂತಹ ಚಿನ್ನಾಭರಣಗಳಲ್ಲಿ ಕೆಲವನ್ನು ಕರಗಿಸಿ, ವೈಯಕ್ತಿಕ ಚಿನ್ನಾಭರಣ ಮಾಡಿಸಿದ್ದರು. ಕೆಲವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಈಗ ಅದೆಲ್ಲವನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಪ್ರಾಚ್ಯ ವಸ್ತು ಸಂಗ್ರಾಲಯ ಇಲಾಖೆಯಿಂದ ನೀಡಿದ ವರದಿ ಮಹತ್ವದ ಪಾತ್ರ ವಹಿಸಿತ್ತು.
ಸನ್ನಡತೆಗೆ ಸಿಕ್ಕ ವಿನಾಯಿತಿ: ಇನ್ನು ಈ ಪ್ರಕರಣದಲ್ಲಿ ಗರಿಷ್ಠ 2 ವರ್ಷದವರೆಗೆ ಶಿಕ್ಷೆ ನೀಡಲು ಅವಕಾಶವಿದ್ದರೂ, ಕಳೆದ 13 ವರ್ಷದಲ್ಲಿ ಅವರು ವಿಚಾರಣೆಗೆ ತಪ್ಪದೇ ಹಾಜರಾಗುತ್ತಿದ್ದು, ಈ ವೇಳೆ ತೋರಿದ ಸನ್ನಡತೆಯನ್ನು ಪರಿಗಣಿಸಿ ಅಪರಾಧಿಗಳ ಪರಿವೀಕ್ಷಣಾ ಅಧಿನಿಯಮ 1958ರ ಕಲಂ 3 ರಂತೆ ನ್ಯಾಯಾಧೀಶರಾದ ರೋಹಿಣಿ ಡಿ. ಅವರು ಸಾಧು ಅವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕ ಉದಯ ಕುಮಾರ್ ಬಿ.ಎ. ಅವರು ವಾದ ಮಂಡಿಸಿದ್ದರು.
ಸಿಕ್ಕ ಹಳೆಯ ಕಾಲದ ಚಿನ್ನಾಭರಣಗಳ ವಿವರ: 64.60 ಗ್ರಾಂ ತೂಕದ 38 ಚಿನ್ನದ ಸಣ್ಣ ನಾಣ್ಯಗಳು, 3 ಸಣ್ಣ ಚಿನ್ನದ ತುಂಡುಗಳು, 19.70 ಗ್ರಾಂ ತೂಕದ 2 ಕೂರ್ಗಿಸ್ ಬಳೆ, 25.70 ಗ್ರಾಂ ತೂಕದ 1 ಗಣಪತಿ ಪೆಂಡೆಂಟ್ ಇರುವ ಸರ, 30.40 ಗ್ರಾಂ ತೂಕದ 1 ಕಂಟಿ ಸರ, 30.09 ಗ್ರಾಂ ತೂಕದ ಕೆಂಪು ಹವಳದ 1 ಲಕ್ಷ್ಮೀ ಪೆಂಡೆಂಟ್ ಇರುವ ಸರ, 12.80 ಗ್ರಾಂ ತೂಕದ 2 ಪಾತ್ರಿ ಬಳೆ, 22.40 ಗ್ರಾಂ ತೂಕದ 4 ಉಂಗುರ, ಗ್ಲಾಸ್ ಕಟ್ಟಿಂಗ್ ಸರ 1, ಲೋಲಾಕು 2 ಜತೆ, 74.600 ಗ್ರಾಂ ತೂಕದ 1 ಚಿನ್ನದ ಗಟ್ಟಿ, 1.700 ಗ್ರಾಂ ತೂಕದ 2 ಲಕ್ಷ್ಮೀ ತಾಳಿ, 18.870 ಗ್ರಾಂ ತೂಕದ 1 ಗ್ಲಾಸ್ ಕಟ್ಟಿಂಗ್ ತಾಳಿ ಹಾಗೂ 37,885 ರೂ. ನಗದು ಹಣ ಸೇರಿದಂತೆ ಅಂದಾಜು 50 ಲಕ್ಷ ರೂ.ಗೂ ಮಿಕ್ಕಿ ಮೌಲ್ಯದ ಚಿನ್ನಾಭರಣ ಸಿಕ್ಕಿತ್ತು. ಇದು ಹಳೆಯ ಕಾಲದ ಪರಿಶುದ್ಧವಾದ ಚಿನ್ನಾಭಣವಾಗಿರುವುದರಿಂದ ಈಗ ಇದರ ಮೌಲ್ಯ ದುಪ್ಪಟ್ಟು ಆಗಿರಬಹುದು. ನಿಧಿ ನಿಕ್ಷೇಪ ಕಾಯ್ದೆಯಡಿ ಅನುಸಾರ ಈ ರೀತಿ ಸಿಕ್ಕ ಪ್ರಾಚ್ಯ ವಸ್ತುಗಳನ್ನು ಸರಕಾರದ ಆಸ್ತಿಯೆಂದು ಪರಿಗಣಿಸಲಾಗುತ್ತದೆ. ಈ ಚಿನ್ನಾಭರಣಗಳಿಂದ ಸರಕಾರಕ್ಕೆ 50-60 ಲಕ್ಷ ರೂ. ಮೌಲ್ಯದ ಪ್ರಾಚ್ಯ ವಸ್ತುಗಳು ಸಿಕ್ಕಂತಾಗಿದೆ.ಲಾ
Comments are closed.