ಉಡುಪಿ: ಶಾಲೆ, ಕಾಲೇಜುಗಳಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರರಾಜ್ಯ ಕಳವು ಆರೋಪಿಯನ್ನು ಕಾರ್ಕಳ ಪೊಲೀಸರು ಮಾ.20ರಂದು ನಿಟ್ಟೆ ಗ್ರಾಮದ ಸಂತ ಲಾರೆನ್ಸ್ ಪ್ರೌಢ ಶಾಲೆಯ ಸಮೀಪ ಬಂಧಿಸಿದ್ದು, ಆತನಿಂದ ಕಾರು ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೈಂದೂರು ಯೋಜನಾ ನಗರಗದ ಅರ್ಷಿತ್ ಅವಿನಾಶ್ ದೋಡ್ರೆ (24) ಬಂಧಿತ ಆರೋಪಿ.
ಈತನಿಂದ ಕೃತ್ಯಕ್ಕೆ ಬಳಸಿದ್ದ ಸುಮಾರು 2,00,000ರೂ. ಮೌಲ್ಯದ ಕಾರು, 20,000ರೂ. ಮೌಲ್ಯದ ಮೊಬೈಲ್ ಫೋನ್, 84,500 ರೂ. ನಗದು ಮತ್ತು ಇತರೆ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫೆ.21ರಂದು ರಾತ್ರಿ ವೇಳೆ ಕಾರ್ಕಳ ತಾಲೂಕಿನ ಬೆಳ್ಳಣ್ ಗ್ರಾಮದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಕಚೇರಿಗೆ ನುಗ್ಗಿ 1,50,000ರೂ. ಮತ್ತು 3 ಡಿವಿಆರ್‌ಗಳನ್ನು ಕಳವು ಮಾಡಿಕೊಂಡು ಹೋಗಿ ರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ರೀತಿ ಮಾ.6ರಂದು ರಾತ್ರಿ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರ ಕೊಠಡಿಗೆ ನುಗ್ಗಿ ಸೊತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳವಿಗೆ ಯತ್ನಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಎಲ್ಲಾ ಪ್ರಕರಣಗಳಲ್ಲಿ ಆರೋಪಿ ಪತ್ತೆಗಾಗಿ ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ನೇತೃತ್ವದ ಕಾರ್ಕಳ ನಗರ ಎಸ್ಸೆ ಶಿವಕುಮಾರ್, ಸಿಬ್ಬಂದಿ ರಂಜಿತ್, ಶಿವಾನಂದ, ಕಾರ್ಕಳ ಗ್ರಾಮಾಂತರ ಠಾಣೆಯ ಚಂದ್ರಶೇಖರ, ಅಜೆಕಾರು ಠಾಣೆಯ ಸತೀಶ, ಪ್ರದೀಪ್ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ತನಿಖೆ ನಡೆಸಿದ ತಂಡ ನಿಟ್ಟೆ ಸಂತ ಲಾರೆನ್ಸ್ ಪ್ರೌಢ ಶಾಲೆಯ ಸಮೀಪ ಅನುಮಾನಾಸ್ಪದವಾಗಿ ಕಾರಿನಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿತು. ಈ ವೇಳೆ ಆತ ಈ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Comments are closed.