ಉಡುಪಿ: ಮನೆಯವರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಯೊಳಗಿದ್ದ ಚಿನ್ನ ಕಳವು ಮಾಡಿದ ಆರೋಪಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಮಣೂರು ನಿವಾಸಿ ಪ್ರವೀಣ್ ಕುಮಾರ್ ಶೆಟ್ಟಿ (38) ಬಂಧಿತ ಆರೋಪಿ. ಈತನಿಂದ 25 ಗ್ರಾಂ ತೂಕದ ಸುಮಾರು 2.5 ಲಕ್ಷ ಮೌಲ್ಯದ ಕಳ್ಳತನವಾಗಿದ್ದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆ ವಿವರ: ಮಾ.20 ರಂದು ರಾತ್ರಿ ಮಣೂರು ಕೊಯ್ಕೂರು ನಿವಾಸಿ, ದಾರವಾಡದಲ್ಲಿ ವ್ಯವಹಾರ ಮಾಡಿಕೊಂಡಿರುವ ಶ್ರೀಧರ್ ಹಾಗೂ ಕುಟುಂಬಿಕರು ಮನೆ ಸಮೀಪದ ದೇವಸ್ಥಾನದ ಕಾರ್ಯಕ್ರಮಕ್ಕೆ ತೆರಳಿದ್ದು ಈ ವೇಳೆ ಅತ್ತೆಯಾದ 92 ವರ್ಷ ಪ್ರಾಯದ ವಯೋವೃದ್ಧೆ ಕೋಣೆಯಲ್ಲಿ ಮಲಗಿದ್ದರು. ಸ್ವಲ್ಪ ಸಮಯದ ಬಳಿಕ ಶ್ರೀಧರ್ ವಾಪಾಸ್ಸಾಗಿದ್ದು ಮನೆ ಬಾಗಿಲು ಮುರಿದಿರುವುದು ಗಮನಕ್ಕೆ ಬಂದಿದೆ. ರಾಡ್‌ನಿಂದ ಬಾಗಿಲನ್ನು ಮೀಟಿ, ಬಾಗಿಲು ಒಡೆದಿದ್ದು ಕಬ್ಬಿಣದ ರಾಡ್‌ವೊಂದು ಮೆಟ್ಟಿಲ ಬಳಿ ಬಿದ್ದಿತ್ತು. ಕೂಡಲೇ ಒಳಗೆ ಹೋಗಿ ನೋಡಿದಾಗ ಅತ್ತೆ ಮಲಗಿದಲ್ಲಿಯೇ ಇದ್ದು, ಹಿಂದಿನ ಬಾಗಿಲು ತೆಗೆದಿದ್ದು, ಅವರಲ್ಲಿ ವಿಚಾರಿಸಿದಾಗ ಯಾರೋ ಒಬ್ಬ ಹುಡುಗ ಬಂದು ಮಾತನಾಡಿರುವುದಾಗಿ ತಿಳಿಸಿದ್ದರು. ಅತ್ತೆ ಮಲಗುವಾಗ ಕಳಚಿಟ್ಟಿದ್ದ ಚಿನ್ನ ಕಳವಾಗಿತ್ತು. ಸುಮಾರು 2.50 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದೊಯ್ದ ಬಗ್ಗೆ ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ ಕೆ. ನಿರ್ದೇಶನದಲ್ಲಿ, ಹೆಚ್ಚುವರಿ ಎಸ್ಪಿಗಳಾದ ಎಸ್.ಟಿ. ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ ಮತ್ತು ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ, ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ ಪಿ.ಎಂ. ಮಾರ್ಗದರ್ಶನದಲ್ಲಿ ಕೋಟ ಪೊಲೀಸ್ ಠಾಣೆಯ ಕಾನೂನು & ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ. ತನಿಖಾ ಪಿಎಸ್ಐ ಸುಧಾಪ್ರಭು ಪ್ರಕರಣದವಖಚಿತ ಮಾಹಿತಿಯನ್ನು ಪಡೆದು ಚಿನ್ನ ಕಳ್ಳವು ಆರೋಪಿಯನ್ನು ತೆಕ್ಕಟ್ಟೆ ಬಳಿಯಲ್ಲಿ ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಹಾಯಕ ಉಪನಿರೀಕ್ಷಕ ಜಯಪ್ರಕಾಶ್, ಹೆಡ್ ಕಾನ್ಸ‌್‌ಟೇಬಲ್ ರೇವತಿ, ಕೃಷ್ಣ ಶೇರೆಗಾರ, ಶ್ರೀಧರ್, ಸಿಬ್ಬಂದಿಗಳಾದ ರಾಘವೇಂದ್ರ, ವಿಜಯೇಂದ್ರ ಇದ್ದರು.
Comments are closed.