ಕರಾವಳಿ

ಕೊಡ್ಲಾಡಿ: ಎಕ್ರೆಗಟ್ಟಲೆ ಸರಕಾರಿ ಜಮೀನಿಗೆ ತಂತಿ-ಬೇಲಿ ಹಾಕಿ ಭೂ ಕಬಳಿಕೆಗೆ ಖಾಸಗಿ ವ್ಯಕ್ತಿಗಳಿಂದ ಯತ್ನ | ಒತ್ತುವರಿ ತೆರವುಗೊಳಿಸಿದ ಕಂದಾಯ ಅಧಿಕಾರಿಗಳು!

Pinterest LinkedIn Tumblr

ಕುಂದಾಪುರ: ಸರಕಾರಿ ಶಾಲೆಯೊಂದರ ಬಳಿಯಿರುವ ಸುಮಾರು 10 ಎಕರೆ ಸರಕಾರಿ ಜಮೀನಿಗೆ ತಂತಿ-ಬೇಲಿ ಹಾಕಿ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು ಸಾರ್ವಜನಿಕ ದೂರಿನ ಹಿನ್ನೆಲೆ ಕಂದಾಯ ಅಧಿಕಾರಿ, ಸಿಬ್ಬಂದಿಗಳು ಒತ್ತುವರಿಯಾದ ಜಾಗದಲ್ಲಿ ಅಳವಡಿಸಿದ ಶಿಲೆಕಲ್ಲು ಕಂಬ ಹಾಗೂ ತಂತಿ ಬೇಲಿಯನ್ನು ತೆರವುಗೊಳಿಸಿ ಜಾಗವನ್ನು ಸರಕಾರದ ಸುಪರ್ದಿಗೆ ಪಡೆದುಕೊಂಡ ಘಟನೆ ಕುಂದಾಪುರ ತಾಲೂಕಿನ ಆಜ್ರಿ ಗ್ರಾ.ಪಂ ವ್ಯಾಪ್ತಿಯ ಕೊಡ್ಲಾಡಿ ಎಂಬಲ್ಲಿ ನಡೆದಿದೆ.

ಕೊಡ್ಲಾಡಿ ಗ್ರಾಮದ ಸರ್ವೇ ನಂಬರ್ 118/* ರಲ್ಲಿ ಸುಮಾರು 10 ಎಕರೆ ಸರಕಾರಿ ಭೂಮಿಯಿದ್ದು ಬೆಲೆಬಾಳುವ ಮರಮಟ್ಟುಗಳಿತ್ತು. ಇಲ್ಲಿಗೆ ಸಮೀಪದಲ್ಲಿ ಪಟ್ಟಾ ಜಾಗವನ್ನು ಹೊಂದಿದ ಒಂದೇ ಕುಟುಂಬದ ಖಾಸಗಿ ವ್ಯಕ್ತಿಗಳು ಈ ಭೂಮಿಯನ್ನು ಒತ್ತುವರಿ ಮಾಡುವ ಉದ್ದೇಶದಿಂದ ಜಾಗದ ಸುತ್ತಲೂ ಬೇಲಿ ಅಳವಡಿಸಿದ್ದಾರೆ. ಅಲ್ಲದೆ ಸರಕಾರಿ ಜಾಗದ ನಡುವೆಯೇ ಮರಗಳನ್ನು ಕಡಿದು ಕಚ್ಚಾ ರಸ್ತೆ ನಿರ್ಮಾಣ ಮಾಡಲಾಗಿದ್ದು ಈ ಬಗ್ಗೆ ಅರಣ್ಯ ಇಲಾಖೆಯಲ್ಲಿ ಸಂಬಂದಪಟ್ಟ ಆರೋಪಿಗಳ ಮೇಲೆ ಕರ್ನಾಟಕ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸರಕಾರಿ ಜಮೀನು ಒತ್ತುವರಿ ದೂರು ಬಂದ ಹಿನ್ನೆಲೆ ಕುಂದಾಪುರ ತಹಶಿಲ್ದಾರ್ ಪ್ರದೀಪ್ ಕುರ್ಡೇಕರ್ ಆದೇಶದಂತೆ ಗುರುವಾರದಂದು ವಂಡ್ಸೆ ಹೋಬಳಿಯ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಹೋಬಳಿ ವ್ಯಾಪ್ತಿಯ 15 ಮಂದಿ ಗ್ರಾಮ ಆಡಳಿತಾಧಿಕಾರಿಗಳು, 15 ಗ್ರಾಮಸಹಾಯಕರು ಸಹಿತ 35 ಕ್ಕೂ ಅಧಿಕ ಸಿಬ್ಬಂದಿಗಳು ಪೊಲೀಸರ ಬಂದೋಬಸ್ತ್‌ನಲ್ಲಿ ಅಳವಡಿಸಿದ್ದ ಬೇಲಿ ತೆರವುಗೊಳಿಸಿ ಸೂಚನಾ ಫಲಕವನ್ನು ಅಳವಡಿಸಿದ್ದಾರೆ.

ಶಾಲೆ ಕಟ್ಟಡ, ಮೈದಾನ, ಸಾರ್ವಜನಿಕ ಉದ್ದೇಶಕ್ಕೆ ಕಾದಿರಿಸಲಿ!

ಹಳ್ಳಿ ಭಾಗದ ಹಲವಾರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಕಟ್ಟಿಕೊಳ್ಳಲು ಕಾರಣವಾದ ಕೊಡ್ಲಾಡಿ ಬಾಂಡ್ಯ ಸ.ಹಿ.ಪ್ರಾ.ಶಾಲೆಯಲ್ಲಿ ಇದೀಗಾ 190 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿಗೊಂದು ವಿಸ್ತಾರವಾದ ಆಟದ ಮೈದಾನ‌ ಅಗತ್ಯವಿದ್ದು ಈಗಾಗಾಲೇ ಶಾಲೆ ಸಮೀಪದ ಸರಕಾರಿ ಜಾಗವನ್ನು ಕಾಯ್ದಿರಿಸಲು ಮನವಿಯನ್ನು ನೀಡಲಾಗಿದೆ. ಅಲ್ಲದೆ ಶಾಲಾ ಕಟ್ಟಡ, ಶೌಚಾಲಯ ಸಹಿತ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಳ ಮಂಜೂರು ಮಾಡಲು ಈಗಾಗಾಲೇ ಹಳೆ ವಿದ್ಯಾರ್ಥಿ ಸಂಘ ಸರಕಾರದ ಶಿಕ್ಷಣ ಸಚಿವರು ಸಹಿತ ತಹಶಿಲ್ದಾರ್ ಹಾಗೂ ಸಂಬಂಧಿತ ಇಲಾಖಾಧಿಕಾರಿಗಳಿಗೆ ಪತ್ರ ಮುಖೇನ ಮನವಿ ಸಲ್ಲಿಸಿದ್ದಾರೆ. ಹಾಗೆಯೇ ಸ್ಮಶಾನ ಜಾಗವಾಗಿ ಹಾಗೂ ಇತರ ಸಾರ್ವಜನಿಕ ಉದ್ದೇಶಕ್ಕಾಗಿ ಈ ಸರಕಾರಿ ಜಮೀನು ಮೀಸಲಿಡಬೇಕು ಎಂದು ಸ್ಥಳೀಯ ನಾಗರಿಕರು ಇಲಾಖೆಯನ್ನು ಕೋರಿದ್ದಾರೆ.

ಒತ್ತುವರಿ ತೆರವುಗೊಳಿಸಲಾಗಿದೆ: ತಹಶಿಲ್ದಾರ್: ಕೊಡ್ಲಾಡಿ ಗ್ರಾಮದ ಸರ್ವೇ ನಂಬರ್ 118/* ರ ಮೂಲತಃ ಸರಕಾರಿ ಜಮೀನಾಗಿದ್ದು ಖಾಸಗಿಯವರು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ದೂರು ಬಂದ ತಕ್ಷಣ ಮಾಹಿತಿ ಪಡೆದು ಒತ್ತುವರಿ ತೆರವುಗೊಳಿಸಲು ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿತ್ತು. ಈತನ್ಮದ್ಯೆ ಒತ್ತುವರಿ ಮಾಡಿದವರು ಜಾಗದ ಸುತ್ತ ಬೇಲಿ ಅಳವಡಿಸಿದ್ದು ಗುರುವಾರ ವಂಡ್ಸೆ ಹೋಬಳಿಯ ಸಿಬ್ಬಂದಿಗಳು ಒತ್ತುವರಿ ತೆರವುಗೊಳಿಸಿ ಸರಕಾರದ ಸುಪರ್ದಿಗೆ ಪಡೆದಿದ್ದಾರೆ. ಆ ಸ್ಥಳದಲ್ಲಿ ಸರಕಾರಿ ಜಮೀನು ಅತಿಕ್ರಮಿಸಬಾರದು ಎಂದು ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ಮುಂದಿನ ದಿನದಲ್ಲಿ ಈ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಕಾಯ್ದಿರಿಸಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುತ್ತದೆ. -ಪ್ರದೀಪ್ ಕುರ್ಡೇಕರ್ ಎಸ್. (ಕುಂದಾಪುರ ತಹಶಿಲ್ದಾರ್)

Comments are closed.