ಕರ್ನಾಟಕ

ರಾಜ್ಯ ಕಂಡ ದಕ್ಷ ಪೊಲೀಸ್ ಅಧಿಕಾರಿ, ಬೆಂಗಳೂರಿನ ‘ಟ್ರಾಫಿಕ್ ಸಿಗ್ನಲ್’ ಹರಿಕಾರ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್ ಗರುಡಾಚಾರ್ ವಿಧಿವಶ

Pinterest LinkedIn Tumblr

ಬೆಂಗಳೂರು: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್(96) ಅವರು ಇಂದು (ಮಾ.28 ಶುಕ್ರವಾರ) ಮುಂಜಾನೆ 3 ಗಂಟೆಗೆ ಮುಂಜಾನೆ ನಿಧನರಾದರು.

ಬೆಂಗಳೂರಿನ ಮೊದಲ ಪೊಲೀಸ್ ಕಮಿಷನರ್ ಸಿ.ಚಾಂಡಿ ಅವರ ಕಾಲದಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಬಿ.ಎನ್ ಗರುಡಾಚಾರ್ ಅವರು, ಎನ್.ಆರ್ ಜಂಕ್ಷನ್ (ಎಲ್ಐಸಿ ಕಚೇರಿ ಬಳಿ)ನಲ್ಲಿ 1963ರಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸಿಗ್ನಲ್ ಅಳವಡಿಸಿದ್ದು ಇದು ಬೆಂಗಳೂರಿನ ಮೊದಲ ಟ್ರಾಫಿಕ್ ಸಿಗ್ನಲ್ ಎಂಬ ಖ್ಯಾತಿ ಹೊಂದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು, ಬಿಂಡಿಗೇನವಿಲೆ ಗ್ರಾಮ ಮೂಲದವರಾದ  ಬಿ.ಎನ್.ಗರುಡಾಚಾರ್ ರವರು ತಮ್ಮ ಶಿಕ್ಷಣವನ್ನು ಪೂರೈಸಿ, ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿ ನೇಮಕಗೊಂಡರು.

ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಬಿ. ಗರುಡಾಚಾರ್ ಅವರ ತಂದೆಯಾಗಿರುವ ಬಿ.ಎನ್.ಗರುಡಾಚಾರ್ ಅವರು ವಿವಿಧ ಜಿಲ್ಲೆಗಳಲ್ಲಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ಮಹಾನಗರ ಡಿಸಿಪಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಡಿಜಿ-ಐಜಿಪಿಯಾಗಿ ಸೇವೆ ಸಲ್ಲಿಸಿ ಇಲಾಖೆ ಸೇವೆಯಿಂದ ನಿವೃತ್ತಿ ಹೊಂದಿದ್ದರು.

ಈ ಬಗ್ಗೆ ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ್ ಟ್ವೀಟ್ ಮಾಡಿದ್ದು ‘ಹಿರಿಯರು, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್ ಅವರ ಅಗಲಿಕೆಯ ಸುದ್ದಿ ತಿಳಿದು ಅತೀವ ದುಖವಾಯಿತು. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತೇನೆ. ಭಗವಂತನು ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಐಪಿಎಸ್ ಅಧಿಕಾರಿಯಾಗಿ ಗರುಡಾಚಾರ್ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿ, ಹಲವು ಮಹತ್ತರ ಸುಧಾರಣೆಗಳನ್ನು ತರುವ ಮೂಲಕ ಛಾಪು ಮೂಡಿಸಿದ್ದರು. ಬೆಂಗಳೂರು ನಗರ ಡಿಸಿಪಿಯಾಗಿದ್ದ ವೇಳೆ ಸಂಚಾರ ದಟ್ಟಣೆ ನಿಯಂತ್ರಿಸಲು ಮೊದಲ ಬಾರಿಗೆ ಟ್ರಾಫಿಕ್ ಸಿಗ್ನಲ್ ಅಳವಡಿಸಿರುವುದು ಸೇರಿದಂತೆ ಪೊಲೀಸ್ ಇಲಾಖೆಗೆ ಸಲ್ಲಿಸಿದ ಅವಿಸ್ಮರಣೀಯ ಸೇವೆಯನ್ನು ನೆನೆಯುತ್ತೇನೆ.” ಎಂದು ಬರೆದುಕೊಂಡಿದ್ದಾರೆ.

Comments are closed.