ಕರಾವಳಿ

ಕುಂದಾಪುರ | ಶಂಕರನಾರಾಯಣದಲ್ಲಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಕ್ಕೆ ಸಂಬಂಧಿಸಿದ ಅಪ್ರಕಟಿತ ಶಿಲಾಶಾಸನ ಪತ್ತೆ

Pinterest LinkedIn Tumblr

ಕುಂದಾಪುರ: ತಾಲ್ಲೂಕಿನ ಶಂಕರನಾರಾಯಣ ಗ್ರಾಮದ ಹೆರವಳ್ಳಿಯ ಪ್ರಶಾಂತ್ ಹೆಗ್ಡೆ ಅವರ ಮನೆಯ ಅಂಗಳದಲ್ಲಿ ಶ್ರೀ ಮಠ ಶೃಂಗೇರಿ ಶ್ರೀ ಶಾರದಾ ಪೀಠದ 14ನೇ ಪೀಠಾಧಿಪತಿಗಳಾದ ಹಾಲಾಡಿ ಒಡೆಯರೆಂದೆ ಖ್ಯಾತರಾಗಿದ್ದ ಜಗದ್ಗುರು ನರಸಿಂಹ ಭಾರತಿ ಮಹಾಸ್ವಾಮಿಗಳು (ಕ್ರಿ. ಶ. 1389-1418) ತೀರ್ಥಮುತ್ತೂರು ಮಠದ ಜ್ಞಾನೇಂದ್ರ ಭಾರತಿ ಗುರುಗಳವರಿಗೆ ಭೂ ದಾನ ನೀಡಿರುವ ಶಿಲಾಶಾಸನ ಪತ್ತೆಯಾಗಿದೆ.

ಕ್ರಿ. ಶ 1399 ಮೇ 01 ಬುಧವಾರದ ಕಾಲಘಟ್ಟಕ್ಕೆ ಸರಿಹೊಂದುವ ಶಾಸನ ಇದಾಗಿದೆ. ಶಾಸನದ ಮೇಲ್ಬಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ, ಬಲಭಾಗದಲ್ಲಿ ಭಕ್ತನ ಚಿತ್ರದ ಕೆತ್ತನೆ, ದೀಪದ ಕಂಬ, ಮಧ್ಯಭಾಗದಲ್ಲಿ ಶಿವಲಿಂಗ ಹಾಗೂ ಎಡಭಾಗದಲ್ಲಿ ಕರುವಿಗೆ ಹಾಲುಣಿಸುವ ಗೋವಿನ ಚಿತ್ರದ ಕೆತ್ತನೆ ಇದೆ. ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಶಾಸನವಿದ್ದು, 5 ಅಡಿಗಿಂತ ಹೆಚ್ಚು ಎತ್ತರವಿದೆ. ವಿಜಯನಗರದ ಅರಸ ಇಮ್ಮಡಿ ಹರಿಹರರಾಯನ ಕಾಲಘಟ್ಟದ ಶಾಸನವಾಗಿದ್ದು, ಇದರಲ್ಲಿ ಹಾರದವಳ್ಳಿ ಎಂದು ಉಲ್ಲೇಖಿಸಲಾಗಿದ್ದು, ಪ್ರಸ್ತುತ ಈ ಊರನ್ನು ಹೆರವಳ್ಳಿ ಎಂದು ಕರೆಯಲಾಗುತ್ತಿದೆ.

ಈ ಶಾಸನದಲ್ಲಿ 35 ಸಾಲುಗಳು ಮೇಲ್ಭಾಗದಲ್ಲಿ ಕಂಡು ಬಂದಿದೆ. ಬೊಮ್ಮಣ್ಣ, ಸಿಂಗಸೆಟ್ಟಿ, ಗೋವಿಂದ ಭಟ್ಟ, ಕೃಷ್ಣ ಸೇನಾಭೊವ ಹಾಗೂ ಶಂಕರನಾರಾಯಣ ಎಂಬ ಸ್ಥಳದ ಹೆಸರುಗಳ ಉಲ್ಲೇಖವಿದೆ ಎಂದು ಶಾಸನತಜ್ಞ ಬೆಂಗಳೂರಿನ ಎಸ್ ಕಾರ್ತಿಕ್ ಅವರು ತಿಳಿಸಿದ್ದಾರೆ.

ಮೋಕ್ಷದಾಯಕ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಕ್ರೋಢ ಶ್ರೀ ಶಂಕರನಾರಾಯಣ ದೇವಸ್ಥಾನದ ಅರ್ಚಕರಾದ ಶಿವಪ್ರಸಾದ್ ಅಡಿಗರಿಗೆ ಸ್ಥಳೀಯರಿಂದ ಈ ಶಾಸನವಿರುವ ಕುರಿತು ಮಾಹಿತಿ ತಿಳಿದುಬಂದಿದ್ದು, ಅವರಿಂದ ಮಾಹಿತಿ ಪಡೆದುಕೊಂಡ ಪಂಚಗ್ರಾಮ ಸಮುದಾಯದ ಕುರಿತು ಪಿಹೆಚ್ಡಿ ಅಧ್ಯಯನ ಮಾಡುತ್ತಿರುವ ತುಮಕೂರು ವಿಶ್ವವಿದ್ಯಾಲಯದ ಸಂಶೋಧನ ವಿದ್ಯಾರ್ಥಿನಿ, ಪ್ರಸ್ತುತ ಭಟ್ಕಳದ ಸರ್ಕಾರಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿರುವ ವೈಶಾಲಿ ಜಿ.ಆರ್ ಅವರು ಶಾಸನವನ್ನು ಸ್ವಚ್ಚಗೊಳಿಸಿ, ಸಂಶೋಧನ ವಿದ್ಯಾರ್ಥಿ ಶಶಿಕುಮಾರ ನಾಯ್ಕ್ ಅವರೊಂದಿಗೆ ಪ್ರತಿ ತೆಗೆದಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಪುರಾತತ್ವ ಮತ್ತು ಇತಿಹಾಸ ವಿಭಾಗದ ಅಧ್ಯಕ್ಷ ಪ್ರೊ.ಎಂ ಕೊಟ್ರೇಶ್ ಇವರ ಮಾರ್ಗ ದರ್ಶನದಲ್ಲಿ ಅಧ್ಯಯನ ನಡೆಸಿ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ.

ಕುಂದಾಪುರ ಸಮೀಪದ ಕುಂಭಾಸಿಯಲ್ಲಿ ಶ್ರಂಗೇರಿ ಪೀಠದ ಕುಂದಾಪುರ ಪ್ರಾಂತ್ಯದ ಮೊದಲ ಶೃಂಗೇರಿ ಶಂಕರ ಮಠದ ಲೋಕಾರ್ಪಣೆಯ ಸಂದರ್ಭದಲ್ಲಿಯೇ ಸುಮಾರು 700 ವರ್ಷದ ಹಿಂದಿನ ಇತಿಹಾಸವನ್ನು ಹೇಳುವ ಶ್ರಂಗೇರಿ ಮಠಕ್ಕೆ ಸಂಬಂಧಿಸಿದ ಶಾಸನ ಪತ್ತೆಯಾಗುತ್ತಿರುವುದು ಹೊಸ ಚಿಂತನೆಗಳನ್ನು ಹುಟ್ಟು ಹಾಕಿದೆ. ಈ ಭಾಗದ ಪ್ರಸಿದ್ಧ ಪಂಚಾಗಕರ್ತರು ಹಾಗೂ ಜ್ಯೋತಿಷಿಗಳಾಗಿರುವ ತಟ್ಟವಟ್ಟು ವಾಸುದೇವ ಜೋಯಿಸರು, ಈ ಹಿಂದೆಯೇ ಈ ಶಾಸನ ಶೃಂಗೇರಿ ಮಠಕ್ಕೆ ಸಂಬಂಧಿಸಿರುವುದು ಎನ್ನುವುದು ತಮ್ಮ ಪ್ರಶ್ನಾ ಚಿಂತನೆಯಲ್ಲಿ ಬಂದಿದೆ ಎನ್ನುವುದನ್ನು ತಿಳಿಸಿದ್ದರು ಎನ್ನುವ ಮಾತುಗಳು ಇದೆ.

ತೀರ್ಥಮುತ್ತೂರು ಮಠದ ಮೂಲ ಮಠವಾಗಿರುವ ಹಾಗೂ ಪಂಚಗ್ರಾಮ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿರುವ ಶಂಕರನಾರಾಯಣ ಕೆಳಮಠದಲ್ಲಿ ಈಗ ದೊರೆತಿರುವ ಅಮೂಲ್ಯ ಶಾಸನವನ್ನು ಸಂಗ್ರಹಿಸಿ ಇಟ್ಟಲ್ಲಿ, ಭವಿಷ್ಯದ ಅಧ್ಯಯನ ಹಾಗೂ ಪೂರ್ವ ಇತಿಹಾಸಗಳ ಮೇಲೆ ಬೆಳಕು ಚಲ್ಲಲು ಅನೂಕೂಲವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವೈಶಾಲಿಯವರು, ಈ ಶಾಸನದ ಕುರಿತು ಹೆಚ್ಚಿನ ಅಧ್ಯಯನಕ್ಕಾಗಿ ಮೈಸೂರಿನ ಪ್ರಾಚ್ಯ ಇಲಾಖೆಯ ಸಂಶೋಧಕರು ಸದ್ಯದಲ್ಲಿಯೇ ಶಂಕರನಾರಾಯಣಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ. ಮಣ್ಣಿನ ಒಳಗೆ ಹೂತಿರುವ ಹಾಗೂ ಅಕ್ಕ-ಪಕ್ಕದಲ್ಲಿ ಬಳ್ಳಿಗಳಿಂದ ಸುತ್ತವರೆದಿರುವ ಶಾಸನವನ್ನು ಪ್ರಾಚ್ಯ ಇಲಾಖೆಯ ಸಂಶೋಧಕರು ಪರಿಶೀಲಿಸಿ, ಅಧ್ಯಯನ ನಡೆಸುವುದರಿಂದ ಇನ್ನೊಂದಷ್ಟು ವಿಚಾರಗಳು ಬೆಳಕಿಗೆ ಬರುವ ನಿರೀಕ್ಷೆ ಇದೆ.

ಹಲವು ವರ್ಷಗಳ ಹಿಂದೆ ನಿಧಿಗಳ್ಳರು ನಿಧಿಯ ಆಸೆಗಾಗಿ ಈ ಶಾಸನವನ್ನು ಅಗೆಯುವ ಸಂದರ್ಭದಲ್ಲಿ ಶಾಸನದ ಸ್ವಲ್ಪ ಭಾಗ ತುಂಡಾಗಿತ್ತು. ಅದನ್ನು ಪುನರ್ ಜೋಡಿಸಿರುವ ಪ್ರಶಾಂತ್ ಹೆಗ್ಡೆ ಅವರ ಮನೆಯವರು ಶಾಸನವನ್ನು ಸಂರಕ್ಷಣೆ ಮಾಡಿದ್ದು, ಪ್ರತಿ ವರ್ಷ ಹೆಗ್ಡೆ ಕುಟುಂಬದವರು ಶಾಸನಕ್ಕೆ ಪೂಜೆ ಸಲ್ಲಿಸುವುದನ್ನು ರೂಢಿಯಾಗಿರಿಸಿಕೊಂಡಿದ್ದಾರೆ.

ಕಳೆದ 2-3 ದಿನಗಳಿಂದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ವಿಧುಶೇಖರ ಭಾರತೀ ಸ್ವಾಮೀಜಿಯವರು ಕುಂದಾಪುರ ಪರಿಸರದಲ್ಲಿಯೇ ಮೊಕ್ಕಾಂ ಇದ್ದು, ಈ ಸಂದರ್ಭದಲ್ಲಿಯೇ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಕ್ಕೆ ಸಂಬಂಧಿಸಿದ ಅಪ್ರಕಟಿತ ಶಿಲಾಶಾಸನ ಪತ್ತೆಯಾಗಿರುವುದು ಶ್ರೀಮಠದ ಭಕ್ತರ ಸಂತಸವನ್ನು ಹೆಚ್ಚಿಸಿದೆ.

Comments are closed.