ಕರಾವಳಿ

ವಂಡ್ಸೆ ಹೋಬಳಿಯ 94ಸಿ  ಅರ್ಜಿದಾರರಿಗೆ ಏಪ್ರಿಲ್‌ ಅಂತ್ಯದೊಳಗೆ ಭೂಮಿ ಮಂಜೂರಾತಿಗೆ ಕ್ರಮ: ಶಾಸಕ ಗಂಟಿಹೊಳೆ ಭರವಸೆ

Pinterest LinkedIn Tumblr

ಉಡುಪಿ: ಬೈಂದೂರು ವಿಧಾನಸಭಾ ಕ್ಷೇತ್ರದ ವಂಡ್ಸೆ ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿದಂತೆ  ಬಾಕಿ ಇರುವ ಅರ್ಹ 94 ಸಿ ಅರ್ಜಿಗಳನ್ನು ಮುಂದಿನ ತಿಂಗಳು ಏಪ್ರಿಲ್ ಅಂತ್ಯದೊಳಗೆ ವಿಲೇವಾರಿ ಮಾಡಿ ಅರ್ಹರಿಗೆ ಹಕ್ಕು ಪತ್ರ ವಿತರಿಸಲು ಕ್ರಮಕೈಗೊಳ್ಳುವಂತೆ ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕುಂದಾಪುರ ತಾಲೂಕು ಕಚೇರಿಯಲ್ಲಿ  ವಂಡ್ಸೆ ಹೋಬಳಿಯ ಗ್ರಾಮಗಳಿಗೆ ಸಂಬಂಧಿಸಿದಂತೆ 94 ಸಿ ಅರ್ಜಿಗಳ ವಿಲೇವಾರಿ ಸಂಬಂಧ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು ಕುಂದಾಪುರ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳ ತಂಡ 94 ಸಿ ಹಾಗೂ ಅಕ್ರಮ ಸಕ್ರಮ ಕಡತ ಗಳ ವಿಲೇವಾರಿ ಗೊಳಿಸಲು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಹಾಗೂ ತಾಲೂಕು ಕಚೇರಿ ತಂಡವು ಕೂಡ ಶ್ಲಾಘನಿಯ ಕಾರ್ಯವನ್ನು ಮಾಡುತ್ತಿದೆ ಎಂದು ಅಭಿಪ್ರಾಯಿಸಿದ ಅವರು, ಕ್ಷೇತ್ರದ ಬಡ ಜನರ ಹಲವಾರು ವರ್ಷಗಳ ಭೂಮಿಯ ಹಕ್ಕು ಪತ್ರ ಪಡೆಯುವ ಬೇಡಿಕೆಗಳನ್ನು ಈಡೇರಿಸಿದ ಕುಂದಾಪುರ ತಾಲೂಕಿನ ಎಲ್ಲಾ ಹಂತದ ಕಂದಾಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ವಂಡ್ಸೆ  ಹೋಬಳಿ ವ್ಯಾಪ್ತಿಯ 10 ಗ್ರಾಮಗಳ ಸುಮಾರು 20 ಅರ್ಹ ಕುಟುಂಬಗಳಿಗೆ ಇದೇ ಸಂದರ್ಭದಲ್ಲಿ ಹಕ್ಕು ಪತ್ರ ವಿತರಿಸಿ, ಪಡೆದುಕೊಂಡ ಭೂಮಿಗಳನ್ನು ಕಾಪಾಡಿಕೊಂಡು ಬಂದು ಉತ್ತಮ ಜೀವನ ರೂಪಿಸಿಕೊಳ್ಳಲು ಶುಭ ಹಾರೈಸಿದರು.

ಸಭೆಯಲ್ಲಿ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಹಾಗೂ ವಂಡ್ಸೆ ಹೋಬಳಿಯ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.