ಕುಂದಾಪುರ: ಉಡುಪಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ ಇಲ್ಲಿನ ಬಾರ್ ಅಸೋಸಿಯೇಶನ್ ಉತ್ತಮ ಸಹಕಾರ, ಗೌರವ ನೀಡುತ್ತಿದೆ. ವಕೀಲರ ಸಂಘದ ಬಲವರ್ಧನೆ, ಸಂಘಟನೆ ದೃಷ್ಟಿಯಿಂದ ವರ್ಷವಿಡೀ ಉತ್ತಮ ಕಾರ್‍ಯಕ್ರಮಗಳನ್ನು ನಡೆಸಿದೆ. ಹೊಸ ಸಮಿತಿಯು ಅದೇ ರೀತಿ ಒಳ್ಳೆಯ ಕಾರ್‍ಯವನ್ನು ಮಾಡಲಿ. ಕುಂದಾಪುರದ ನ್ಯಾಯಾಲಯದ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯವನ್ನು ಮುಂದುವರಿಸಿ ಎಂದು ಹೈಕೋರ್ಟ್ ನ್ಯಾಯಾಧೀಶ ವೆಂಕಟೇಶ್ ನಾಯ್ಕ್ ಟಿ. ಹೇಳಿದರು.
ಅವರು ಶನಿವಾರ ಸಂಜೆ ಇಲ್ಲಿನ ನ್ಯಾಯಾಲಯದ ಆವರಣದ ಎದುರು ನಡೆದ ಕುಂದಾಪುರ ಬಾರ್ ಅಸೋಸಿಯೇಶನ್‌ನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ, ಮಾತನಾಡಿದರು.
ಕುಂದಾಪುರ ಎನ್ನುವುದು ಉಡುಪಿ ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧ. ಕುಂದಾಪುರ ವಕೀಲರ ಸಂಘಕ್ಕೂ ಕೂಡ ಬಹಳಷ್ಟು ವರ್ಷಗಳ ಇತಿಹಾಸವಿದೆ. ಇಲ್ಲಿನ ನ್ಯಾಯಾಲಯ ಈ ಹಿಂದೆ ಅವ್ಯವಸ್ಥೆಯಿಂದ ಕೂಡಿದ್ದು ಅಂದಿನ ಬಾರ್ ಅಸೋಸಿಯೇಶನ್ ಮನವಿಯಂತೆ ಹೆಚ್ಚುವರಿ ಕಟ್ಟಡ ಹಾಗೂ ವಕೀಲರ ಭವನಕ್ಕೆ ಪ್ರಸ್ತಾವನೆಯನ್ನು ಆ ಕಾಲದ ನ್ಯಾಯಾಧೀಶರಿಗೆ ಕಳಿಸಿದ್ದು ಅವರ ಮುತುವರ್ಜಿಯಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದೆ ಎಂದು ಸ್ಮರಿಸಿದರು.
ಕುಂದಾಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷ ಹಂದಟ್ಟು ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿದ್ದರು.
ಉಡುಪಿಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಗಂಗಣ್ಣನವರ್, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಮಾತನಾಡಿದರು.
ಬಾರ್ ಅಸೋಸಿಯೇಶನ್‌ನ ಪ್ರಧಾನ ಕಾರ್‍ಯದರ್ಶಿ ಗಿಳಿಯಾರು ಪ್ರಕಾಶ್ಚಂದ್ರ ಶೆಟ್ಟಿ, ಉಪಾಧ್ಯಕ್ಷ ಸಂದೇಶ್ ಕುಮಾರ್ ಶೆಟ್ಟಿ, ಜತೆ ಕಾರ್‍ಯದರ್ಶಿ ಜೆ. ಗೋವಿಂದ ನಾಯ್ಕ್, ಕೋಶಾಧಿಕಾರಿ ಐ. ನಾಗರಾಜ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಸಾಧಕ ವಕೀಲರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಕೀಲರನ್ನು ಸಮ್ಮಾನಿಸಲಾಯಿತು. ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನ್ಯಾಯಾಲಯದ ಸಿಬ್ಬಂದಿ ರವಿ ಅವರನ್ನು ಗೌರವಿಸಲಾಯಿತು.
ಸಭಾಕಾರ್‍ಯಕ್ರಮದ ಬಳಿಕ ವಕೀಲರು ಹಾಗೂ ಕುಟುಂಬದವರಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ಹಾಗೂ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.
ಹಿರಿಯ ವಕೀಲ ಟಿ.ಬಿ. ಶೆಟ್ಟಿ ಪ್ರಸ್ತಾವಿಸಿದರು. ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್ ಸ್ವಾಗತಿಸಿ, ವಕೀಲರಾದ ರಾಘವೇಂದ್ರ ಚರಣ್ ನಾವಡ ಕಾರ್‍ಯಕ್ರಮ ನಿರೂಪಿಸಿದರು. ಸಂತೋಷ್ ಕುಮಾರ್ ಶೆಟ್ಟಿ ಪರಿಚಯಿಸಿದರು.
Comments are closed.