ಕರಾವಳಿ

ಉಡುಪಿ ಜಿಲ್ಲೆಯಲ್ಲಿ 196 BSNL ಟವರ್‌ಗಳ ಪೈಕಿ 73 ರಲ್ಲಿ ಬ್ಯಾಟರಿ ಬ್ಯಾಕಪ್ ಇಲ್ಲ!

Pinterest LinkedIn Tumblr

ಕುಂದಾಪುರ: ಕೆಲವು ಕಡೆ ಬಿಎಸ್ಎನ್ಎಲ್ ಸಂಸ್ಥೆಯಿಂದ ಹೊಸ ಟವರ್ ಮಾಡಿದರೂ ಕೂಡ ಸಮರ್ಪಕ ನೆಟ್‌ವರ್ಕ್ ಇಲ್ಲ ಎನ್ನುವ ದೂರುಗಳು ಗ್ರಾಹಕರಿಂದ ಬರುತ್ತಿದೆ. ಕೇವಲ ಉತ್ತಮ ನೆಟ್‌ವರ್ಕ್ ನೀಡುತ್ತೇವೆ ಎಂದು ಪ್ರಚಾರ ಗಿಟ್ಟಿಸಿಕೊಂಡು ಏನು ಪ್ರಯೋಜನವಿಲ್ಲ. ಉತ್ತಮ ಸೇವೆ ನೀಡುವ ಮೂಲಕ ಇರುವ ಗ್ರಾಹಕರನ್ನು ಉಳಿಸಿಕೊಂಡು, ಸಂಸ್ಥೆ ಬೆಳೆಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು  ಉಡುಪಿ ಚಿಕ್ಕಮಗಳೂರು ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಬಿ.ಎಸ್.ಎನ್.ಎಲ್. ಸಂಬಂದಪಟ್ಟ ಅಧಿಕಾರಿಗಳಿಗೆ ಹೇಳಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಎಸ್ಎನ್ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟವನ್ನು ಉತ್ತಮಗೊಳಿಸುವಿಕೆ ಹಾಗೂ ಸಲಹೆ ಸೂಚನೆಗಳ ಬಗ್ಗೆ ಗುರುವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬಿಎಸ್ಎನ್ಎಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಚರ್ಚಿಸಿದರು.

ಸಭೆಯಲ್ಲಿ ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯವಾದರೆ ಬಿ.ಎಸ್.ಎನ್.ಎಲ್ ಸಂಪರ್ಕ ಕಡಿತಗೊಳ್ಳುತ್ತದೆ. ಬ್ಯಾಟರಿ, ಜನರೇಟರ್ ಮೊದಲಾದ ಮೂಲಸೌಕರ್ಯ ಒದಗಿಸಿ ಸಮಸ್ಯೆಯಾಗದಂತೆ ಕ್ರಮವಹಿಸಿ. ಮಡಾಮಕ್ಕಿ, ಅಮಾಸೆಬೈಲು ಬೊಳ್ಮೆನೆ ಮೊದಲಾದೆಡೆ ಹೊಸದಾಗಿ ಟವರ್ ನಿರ್ಮಿಸಿದ್ದು ಸರಿಯಾದ ನೆಟ್‌ವರ್ಕ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಟವರ್ ಮಾಡುವುದರಿಂದ ಪ್ರಹೋಜನವಿಲ್ಲ. ಜನರಿಗೆ ಅನುಕೂಲವಾಗಬೇಕು. ಕುಂದಾಪುರದ ಬಿಎಸ್ಎನ್ಎಲ್ ಕಚೇರಿಗೆ ಯಾವ ದೂರು ನೀಡಿದರೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪವಿದೆ. ಅಧಿಕಾರಿ-ಸಿಬ್ಬಂದಿಗಳು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ಸಂಸದ ಕೋಟ ಮಾತನಾಡಿ, ಬಿ.ಎಸ್.ಎನ್.ಎಲ್.ಗೆ ಶಕ್ತಿ ತುಂಬುವ ಕೆಲಸ ಮಾಡಿ. ಖಾಸಗಿಯವರಿಗಿಂತ ಉತ್ತಮ ಸೇವೆ ಕೊಟ್ಟರೆ ಗ್ರಾಹಕರನ್ನು ಉಳಿಸಿಕೊಳ್ಳುವುದಲ್ಲದೆ ಹೊಸ ಗ್ರಾಹಕರನ್ನು ಸೆಳೆಯಬಹುದು. ಟವರ್ ನಿರ್ಮಿಸಿ‌ ಸಂಪರ್ಕ ಸಾಧಿಸಲು ಸಾಧ್ಯವಾಗದೆ ಇದ್ದು ಸುಮ್ಮನೆ ಕಾಟಾಚಾರದ ಕೆಲಸ ಮಾಡಿದರೆ ಸಂಬಂದಪಟ್ಟವರ ಮೇಲೆ ಕ್ರಿಮಿನಿಲ್ ಕೇಸು ದಾಖಲಿಸಲು ಪತ್ರ ಬರೆಯಲಾಗುತ್ತದೆ. ಆಯಾಯ ಗ್ರಾಮಪಂಚಾಯತ್‌ಗಳ ಗ್ರಾಮಸಭೆ, ಸಾಮಾನ್ಯಸಭೆಗಳಿಗೆ ಖುದ್ದು ಬಿಎಸ್ಎನ್ಎಲ್ ಅಧಿಕಾರಿಗಳು ಹೋಗಬೇಕು. ಆ ಗ್ರಾಮದ ಜನರ ಸಮಸ್ಯೆ ಅರಿತು ಅಲ್ಲಿನ ನೆಟ್‌ವರ್ಕ್ ಸಮಸ್ಯೆಗಳಿಗೆ ಶೀಘ್ರ ಮುಕ್ತಿ ನೀಡಿ ಎಂದು ತಿಳಿಸಿದರು.

ಗೋಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಸ್ಥಳೀಯವಾಗಿ‌ ಇರುವ ಬಿ.ಎಸ್.ಎನ್.ಎಲ್ ನೆಟ್‌ವರ್ಕ್ ಸಮಸ್ಯೆ ಬಗ್ಗೆ ಸಭೆ ಗಮನಕ್ಕೆ ತಂದರು.

ಈ ಸಂದರ್ಭ ಕುಂದಾಪುರ ಪುರಸಭೆ ಅಧ್ಯಕ್ಷ ಕೆ. ಮೋಹನದಾಸ್ ಶೆಣೈ, ಬಿಎಸ್ಎನ್ಎಲ್ ಪಿ.ಜಿ.ಎಮ್ ನವೀನ್ ಗುಪ್ತಾ, ಮುಖ್ಯಸ್ಥ ಜನಾರ್ಧ‌ನ್, ಬಿಎಸ್ಎನ್ಎಲ್ ನಾಮನಿರ್ದೇಶಿತ ಸದಸ್ಯರಾದ ಪ್ರದೀಪ್ ಕೊಠಾರಿ, ಶೈಲೇಂದ್ರ ಶೆಟ್ಟಿ, ಗೋಪಾಲಕೃಷ್ಣ, ಸಂಸ್ಥೆಯ ವಿವಿಧ ವಿಭಾಗದ ಅಧಿಕಾರಿಗಳು, ಮೆಸ್ಕಾಂ ಸಂಬಂದಪಟ್ಟವರು ಇದ್ದರು.

ಬ್ಯಾಟರಿ, ಜನರೇಟರ್ ನಿರ್ವಹಿಸಲು ಕ್ರಮಕ್ಕೆ ಸೂಚನೆ: ಉಡುಪಿ ಜಿಲ್ಲೆಯಲ್ಲಿ 196 ಟವರ್‌ಗಳ ಪೈಕಿ 73 ರಲ್ಲಿ ಬ್ಯಾಟರಿ ಬ್ಯಾಕಪ್ ಇಲ್ಲ. ಗುಡುಗು-ಮಿಂಚು ಬಂದಾಗ ಬ್ಯಾಟರಿ ದುಸ್ಥಿತಿಗೆ ತಲುಪುತ್ತದೆ. ಈಗಾಗಾಲೇ 10 ಬ್ಯಾಟರಿ ಬ್ಯಾಕಪ್ ಕೇಂದ್ರ ಸರಕಾರದ ಅನುದಾನದಿಂದ ಬಂದಿದ್ದು ಉಳಿದಿದ್ದಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ವಿದ್ಯುತ್ ಸಂಪರ್ಕ ಕಡಿತವಾದಾಗ ಬ್ಯಾಟರಿ, ಜನರೇಟರ್ ಸಂಪರ್ಕಗೊಳಿಸಲು ಗ್ರಾ.ಪಂ ಸಿಬ್ಬಂದಿ (ಪಂಪು ಚಾಲಕ) ನೇಮಕ ಸೂಕ್ತ ಎಂದು ಸಂಸದರು ಮತ್ತು ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಇದಕ್ಕೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿ ತುರ್ತು ಸಮಯಕ್ಕೆ ಅನುಕೂಲವಾಗುವಂತೆ ಪ್ರತಿ ಟವರ್ ಇರುವಲ್ಲಿ ಡಿ.ಜಿ. ಬ್ಯಾಟರಿ ನೀಡಲು ಹಾಗೂ ಗ್ರಾ‌ಪಂ ಒಂದಕ್ಕೆ ನಿರ್ವಹಣೆಗೆ ತಿಂಗಳಿಗೆ 3 ಸಾವಿರ ಹಣ ನೀಡಲು ನಿರ್ಧರಿಸಲಾಯಿತು.

Comments are closed.