ಶಿವಮೊಗ್ಗ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪಿ.ಯು.ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿ.ಇ.ಟಿ ಪರೀಕ್ಷೆಯನ್ನು ಏಪ್ರಿಲ್ 16 & 17 ರಂದು ನಡೆಸಿದ್ದು, ಶಿವಮೊಗ್ಗ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯು ಕೈಗೆ ಕಟ್ಟಿಕೊಂಡಿದ್ದ ಕಾಶಿದಾರ ಮತ್ತು ಮೈಮೇಲೆ ಧರಿಸಿದ್ದ ಜನಿವಾರ, ವಿದ್ಯಾರ್ಥಿಗಳ ಕೊರಳಲ್ಲಿ ಇದ್ದ ಶಿವದಾರ ಹಾಗೂ ರುದ್ರಾಕ್ಷಿಸರವನ್ನು ಭದ್ರತಾ ಸಿಬ್ಬಂದಿ ತೆಗೆಸಿದ್ದಾರೆ ಎಂದು ಪೋಷಕರುಗಳು ಆರೋಪಿಸಿದ್ದು ಇದನ್ನು ಖಂಡಿಸುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ಹಿಂದೂಗಳ ಧಾರ್ಮಿಕ ಭಾವನೆಗೆ ತೀವ್ರತರವಾದ ಧಕ್ಕೆ ಉಂಟಾಗಿದ್ದಲ್ಲದೆ ಇದರಿಂದ ವಿದ್ಯಾರ್ಥಿಗಳ ಪರೀಕ್ಷೆಯ ಕಾರ್ಯಕ್ಷಮತೆಯ ಮೇಲೆ ತೀವ್ರತರವಾದ ಪರಿಣಾಮ ಬೀರಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ವಿವಿಧ ನೇಮಕಾತಿ ಪರೀಕ್ಷೆ, ಸ್ಪಧಾತ್ಮಕ ಪರೀಕ್ಷೆ ಹಾಗೂ ಪ್ರವೇಶ ಪರೀಕ್ಷೆಗೆ ವಸ್ತ್ರ ಸಂಹಿತೆ ಬಗ್ಗೆ ಸ್ಪಷ್ಟವಾದ ಸೂಚನೆಯನ್ನು ನೀಡಿದ್ದಾಗ್ಯೂ ಕೂಡ ಅದನ್ನು ಉಲ್ಲಂಘಸಿ ಸಿ.ಇ.ಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಧರಿಸಿದ್ದ ಶಿವದಾರ, ಜನಿವಾರ, ರುದ್ರಾಕ್ಷಿ ಸರಗಳನ್ನು ತೆಗೆಸಿರುವ ಕ್ರಮ ಖಂಡನೀಯವಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇನೆ. ಹಾಗೂ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸರ್ಕಾರವು ಸೂಕ್ತವಾದ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಸಂಸದ ಬಿ.ವೈ ರಾಘವೇಂದ್ರ ಒತ್ತಾಯಿಸಿದ್ದಾರೆ.
Comments are closed.