ಕರಾವಳಿ

ಕೊಲ್ಲೂರಿನ ಕೊರಗ ಮಹಿಳೆಯ ಮನೆ ದ್ವಂಸ ಪ್ರಕರಣ: ಸಂತ್ರಸ್ತೆಗೆ ಪರಿಹಾರ, ನ್ಯಾಯ ಒದಗಿಸಲು 3 ದಿನ ಗಡುವು ನೀಡಿದ ಬೈಂದೂರು ಶಾಸಕ ಗಂಟಿಹೊಳೆ

Pinterest LinkedIn Tumblr

ಕೊಲ್ಲೂರು: ಕೊಲ್ಲೂರಿನಲ್ಲಿ ನ್ಯಾಯಾಲಯದ ಆದೇಶ ನೆಪದಲ್ಲಿ ಮಾನವೀಯತೆ ಇಲ್ಲದೇ  ಕಳೆದ ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದ  ಸಮಾಜದಲ್ಲಿ ಅತೀ ನಿರ್ಲಕ್ಷಿತ ಹಾಗೂ ಸೂಕ್ಷ್ಮ ಸಮುದಾಯವಾದ ಕೊರಗ ಕುಟುಂಬದ ವಾಸ್ತವ್ಯದ ಮನೆಯನ್ನು ನಾಶ ಪಡಿಸಿರುವುದು ತೀರಾ ದುಃಖಕರ ಹಾಗೂ ದುರದೃಷ್ಟಕರ ಸಂಗತಿಯಾಗಿದೆ ಎಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ತಿಳಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆಯೂ ಸೇರಿದಂತೆ ಈ ಪ್ರಕರಣವು ಈ ಹಂತದವರೆಗೆ ಬರುವಲ್ಲಿ ಜಿಲ್ಲಾಡಳಿತ ನಡೆದುಕೊಂಡ ರೀತಿ ತೀರಾ ಖಂಡನೀಯ. ಹಲವು ವರ್ಷಗಳಿಂದ ಆ ಕುಟುಂಬವು ವಿವಾದಿತ ಎಂದು ಬಿಂಬಿತವಾಗಿರುವ ಜಾಗದಲ್ಲಿ ವಾಸ್ತವ್ಯವಿದ್ದರೂ ಸದ್ರಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ವಿಫಲವಾಗಿದ್ದು, ಮಾನವೀಯತೆಯಿಲ್ಲದ ಇಡೀ ಮಾನವ ಸಮಾಜ ತಲೆ ತಗ್ಗಿಸುವ ಈ ಕೃತ್ಯಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆ ಎಂದು ಗಂಟಿಹೊಳೆ ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೊರಗ ಸಮುದಾಯವು ಹಲವು ದಶಕಗಳಿಂದ ಅತ್ಯಂತ ನಿರ್ಲಕ್ಷಿತ ಹಾಗೂ ದಿನದಿಂದ ದಿನಕ್ಕೆ ನಶಿಸುತ್ತಿರುವ ಜನಾಂಗವಾಗಿದ್ದು ಪ್ರತಿ ಕುಟುಂಬದ ಪ್ರತಿಯೊಂದು ಹಂತದ ಕಾಳಜಿ ವಹಿಸಿ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯ ಒದಗಿಸುವ ಜವಾಬ್ದಾರಿ ಇಲಾಖೆಗೆ ಇದ್ದು ಎಲ್ಲರ ಕಣ್ಣೆದುರಿಗೆ ಇಂತಹ ಘಟನೆ ನಡೆಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ನೊಂದ ಕುಟುಂಬಕ್ಕೆ ಕೂಡಲೇ ಮೂರು ದಿನಗಳ ಒಳಗೆ ಪರಿಹಾರ ನೀಡಬೇಕು ಹಾಗೂ ಸೂಕ್ತವಾದ  ಜಾಗ ಮಂಜೂರು ಮಾಡಿ ಗೌರವಯುತವಾದ ಜೀವನ ಕಟ್ಟಿ ಕೊಳ್ಳಲು ಬೇಕಾದ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು.ಇಲ್ಲವಾದರೆ ಬೇಡಿಕೆ ಈಡೇರುವವರೆಗೆ ನೊಂದ ಕೊರಗ ಕುಟುಂಬದ ಬಂಧುಗಳೊಂದಿಗೆ ಕೂಡಿಕೊಂಡು ಧರಣಿ ಕೂರಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.

Comments are closed.