https://youtu.be/JfRIjvqJ5O4
ಬೀಜಿಂಗ್: ಹಣ ಉಳಿಸುವ ಭರದಲ್ಲಿ ವ್ಯಕ್ತಿಯೊಬ್ಬ ಹುಲಿ ಬಾತಯಿಗೆ ಆಹಾರವಾಗಿ ಪ್ರಾಣವನ್ನೇ ಕಳೆದುಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಸದ್ಯ ಹುಲಿಗಳು ನಡೆಸಿದ ಈ ದಾಳಿಯ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರದಂದು ಮಧ್ಯಾಹ್ನ ಸುಮಾರು 2.30ಕ್ಕೆ ಚೀನಾದ ನಿಂಗ್ಬೊ ಯಂಗರ್ ಝೂನಲ್ಲಿ ಈ ಭಯಾನಕ ಘಟನೆ ನಡೆದಿದೆ. ಭಾನುವಾರ ರಜಾದಿನವಾಗಿದ್ದರಿಂದ ಝಾಂಗ್ ಹಾಗೂ ಆತನ ಗೆಳೆಯ ಲೀ ತನ್ನ ಕುಟುಂಬದೊಂದಿಗೆ ಝೂ ನೋಡಲು ಆಗಮಿಸಿದ್ದರು. ಮೃಗಾಲಯದ ಪ್ರವೇಶ ಟಿಕೆಟ್ ದರ 130 ಯಾನ್(ಅಂದಾಜು 1300 ರೂ.) ಆಗಿತ್ತು. ಹೀಗಾಗಿ ಝಾಂಗ್ ಹಾಗೂ ಲೀ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮಾತ್ರ ಮೃಗಾಲಯ ಪ್ರವೇಶಿಸಲು ಟಿಕೇಟ್ ಖರೀದಿಸಿ, ಆದರೆ ಹಣ ಉಳಿಸುವ ದುರಾಸೆಯಿಂದ ತಾವು ಟಿಕೇಟ್ ಖರೀದಿಸದೆ ಮೃಗಾಲಯದ ಗೋಡೆ ಹಾರಿ ಒಳ ಪ್ರಚವೇಶಿಸಲು ಪ್ಲಾನ್ ಮಾಡಿದ್ದಾರೆ.
ಈ ಪ್ರದೇಶದಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿದ್ದರೂ, ಅದನ್ನು ನಿರ್ಲಕ್ಷಿಸಿದ ಝಾಂಗ್ ಮೂರು ಮೀಟರ್ ಉದ್ದದ ಗೋಡೆಯನ್ನು ಏರಿದ್ದ. ಆದರೆ ಆ ವೇಳೆ ಆಯತಪ್ಪಿದ ಝಾಂಗ್ ನೇರವಾಗಿ ಹುಲಿಗಳಿದ್ದ ಸ್ಥಳದಲ್ಲಿ ಬಿದ್ದಿದ್ದಾನೆ. ಆತ ಕೆಳ ಬಿದ್ದಿದ್ದೇ ತಡ ಅಲ್ಲಿದ್ದ ಹುಲಿಗಳು ದಾಳಿ ನಡೆಸಿವೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಪಟಾಕಿ ಸಿಡಿಸಿ ಹುಲಿಗಳನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಹೆದರದ ಒಂದು ಹುಲಿ ಮಾತ್ರ ಝಾಂಗ್’ನನ್ನು ಎಳೆದುಕೊಂಡು ಹೋಗಿದೆ. ಹೀಗಾಗಿ ಬೇರೆ ವಿಧಿ ಇಲ್ಲದೆ ಸಿಬ್ಬಂದಿಗಳು ಹುಲಿಯನ್ನು ಕೊಂದು ಝಾಂಗ್’ನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದಾಗಿ ಝಾಂಗ್ ಮೃತಪಟ್ಟಿದ್ದಾನೆ. ಗೋಡೆ ಹಾರುವ ವೇಳೆ ತನ್ನ ಗೆಳೆಯನನ್ನು ಹಿಂಬಾಲಿಸದ ಕಾರಣ ಲೀ ಪ್ರಾಣ ಉಳಿದಿದೆ.
ಹುಲಿ ದಾಳಿಯ ವೀಡಿಯೋ ಚೀನಾದ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ಹಣ ಉಳಿಸುವ ಭರದಲ್ಲಿ ಪ್ರವಾಸಿಗ ತನ್ನ ಮೂರ್ಖತನದಿಂದ ಹುಲಿ ಬಾಯಿಗೆ ಆಹಾರವಾದ ಅಂತ ಇಲ್ಲಿನ ಜನ ಮರುಕ ವ್ಯಕ್ತಪಡಿಸಿದ್ದಾರೆ.
Comments are closed.