ಮಂಗಳೂರು : ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನ ಉದ್ಘಾಟನೆ ಸಂದರ್ಭ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಗಳೂರು ಮೇಯರ್ ಕವಿತಾ ಸನಿಲ್ ಅವರಿಗೆ ಪಂಚ್ ಮಾಡಿದ್ದ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಇದೀಗ ಈ ಕರಾಟೆ ಪಂಚ್ ಬಗ್ಗೆ ಅವಹೇಳನೆಕಾರಿ ಸಂದೇಶ ರವಾನಿಸಿದ ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಮಂಗಳೂರಿನಲ್ಲಿ ಕರಾಟೆ ಸ್ಪರ್ಧೆ ಉದ್ಘಾಟನೆ ಸಂದರ್ಭ ಸ್ಪರ್ಧೆಯನ್ನು ಮೊದಲು ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಆದರೆ, ಕರಾಟೆ ಚಾಂಪಿಯನ್‌ಶಿಪ್ ಉದ್ಘಾಟನೆ ಅಷ್ಟರಲ್ಲೇ ಆದ್ರೆ ಹೆಂಗೆ.. ಸಭಿಕರು ಸಿಎಂ ಅವರಿಗೆ ಒಂದು ಕರಾಟೆ ಪೋಸ್ ಕೊಡಿ ಎಂದು ಕೇಳಿದರು.
ತಕ್ಷಣ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟುವೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರು ಸಿಎಂ ಅವರಿಗೆ ಪಂಚ್ ಮಾಡಿದ್ರು. ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗು ನಗುತ್ತಲೇ ಮೇಯರ್ ಹೊಟ್ಟೆಗೆ ಸಖತ್ ಪಂಚ್ ಕೊಟ್ಟರು .ಈ ದೃಶ್ಯಾವಳಿ ಎಲ್ಲಾ ಕಡೆ ವೈರಲ್ ಆಗಿತ್ತು.
ಆದರೆ ಇದೀಗ ಈ ಕರಾಟೆ ಪಂಚ್ ಬಗ್ಗೆ ಅವಹೇಳನೆಕಾರಿ ಸಂದೇಶ ರವಾನಿಸಿದ ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೇಯರ್ ಕವಿತಾ ಸನಿಲ್ ಅವರಿಗೆ ಪಂಚ್ ಮಾಡಿದ್ದ ಬಗ್ಗೆ ಅವಹೇಳನೆಕಾರಿ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ಅಲೆಕ್ಕಾಡಿಯ ನೂಜಾಡಿ ನಿವಾಸಿ ಅನುರಾಜ್ ಮತ್ತು ರಕ್ಷಿತ್ ಹುದೇರಿ ಎಂಬವರ ವಿರುದ್ಧ ಮಾಜಿ ಜಿ.ಪಂ ಸದಸ್ಯ ಚಂದ್ರಶೇಖರ್ ಕಾಮಾತ್ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಈ ಇಬ್ಬರ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ನ ಸಾಮಾಜಿಕ ಜಲತಾಣದ ಸಂಚಾಲಕ ಹರಿಪ್ರಸಾದ್ ಎಂಬವರು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದಾರೆ. ಆರೋಪಿಗಳು ಮುಖ್ಯಮಂತ್ರಿಯವರ ಪಂಚ್ ಫೋಟೊವನ್ನು ಬಳಸಿ ಅವಹೇಳನಕಾರಿ ಸಂದೇಶಗಳ ಮೂಲಕ ವಾಟ್ಸಪ್ ಗ್ರೂಪ್ ನಲ್ಲಿ ರವಾನಿಸಿ ಮಾನಹಾನಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Comments are closed.