ಉಡುಪಿ: ಮತದಾನದ ಬಳಿಕ ಕ್ಷೇತ್ರದ ಜನತೆಗೆ ಸಿಗದ ಅಭ್ಯರ್ಥಿಗಳಿಗೆ ಇಂದು ಜನರು ತಕ್ಕ ಪಾಠ ಕಲಿಸಲಿದ್ದಾರೆ. ಕಳೆದ ಬಾರಿ ಅಭ್ಯರ್ಥಿಯಾಗಿದ್ದ ಸಹೋದರಿ ಗೀತಾ ಶಿವರಾಜಕುಮಾರ್ ತಾನು ಸೋತ ಬಳಿಕ ಪತ್ತೆಯಿರಲಿಲ್ಲ, ಉಪಚುನಾವಣೆಯಲ್ಲಿ ಸೋತ ಬಳಿಕ ಸೋದರ ಮಧು ಕೂಡ ಪ್ಯಾಕೇಜ್ ಮಾಡಿಸಿಕೊಂಡು ಪ್ರವಾಸ ಹೋಗಿದ್ದು ಇದೀಗಾ ಮತ್ತೆ ಬಂದಿದ್ದಾರೆ. ಸಿನೆಮಾ ‘ಕವಚ’ದ ಜೊತೆ ರಾಜಕೀಯ ಕವಚ ತೊಟ್ಟು ಬಾವ ಹಾಗೂ ನಟ ಶಿವರಾಜಕುಮಾರ್ ಬೆನ್ನಿಗೆ ನಿಂತಿದ್ದಾರೆಂದು ಶಾಸಕ ಕುಮಾರ್ ಬಂಗಾರಪ್ಪ ಗಂಭೀರ ಆರೋಪದ ವಾಗ್ದಾಳಿ ನಡೆಸಿದ್ದಾರೆ.
ಒಂದು ವೇಳೆ ಅವರಿಗೆ ರಾಜಕೀಯ ಮಾಡುವ ಆಸೆಯಿದ್ದರೆ ಧರಿಸಿರುವ ಕವಚ ತೆಗೆದಿಟ್ಟು ಬರಲಿ. ತನ್ನ ಚಿತ್ರದ ಪ್ರಚಾರ ಎನ್ನುವ ಕಾರಣ ಮುಂದಿಟ್ಟುಕೊಂಡು ರಾಜಕೀಯ ಪ್ರಚಾರ ಮಾಡುವುದು ಸರಿಯಲ್ಲ ಎಂದು ಟೀಕಿಸಿದ ಕುಮಾರ್ ಬಂಗಾರಪ್ಪ, ಮಂಡ್ಯ, ಬೆಂಗಳೂರು, ಹುಬ್ಬಳ್ಳಿ ದಾರವಾಡದಲ್ಲಿ ಕವಚ ಪ್ರಚಾರ ಮಾಡುವುದು ಬಿಟ್ಟು ಕೇವಲ ಶಿವಮೊಗ್ಗದಲ್ಲಿ ಪ್ರಚಾರ ಮಾಡುವ ಉದ್ದೇಶವೇನು? ಎಂದು ಪ್ರಶ್ನಿಸಿದರು. ನಾಳೆ ದಿನ ಸಿನೆಮಾ ರಿಲೀಸ್ ಎಂದು ಬೈಂದೂರಿಗೆ ಬಂದು ಪ್ರಚಾರ ಮಾಡಿದರೂ ಮಾಡಬಹುದು ಎಂದು ಕುಮಾರ್ ವ್ಯಂಗ್ಯವಾಡಿದರು.
ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲ, ಯಾರನ್ನೂ ಯಾರೂ ಬೈದು, ದ್ವೇಷ ಮಾಡಬಾರದು ಎಂದು ಶಿವರಾಜ್ ಕುಮಾರ್ ಹೇಳಿಕೆ ನೀಡಿದ್ದು ಒಮ್ಮೆ ಮಂಡ್ಯಕ್ಕೆ ಹೋಗಿ ಅಲ್ಲಿನ ರಾಜಕೀಯ ನೋಡಲಿ. ಆಗ ಯಾರು ದ್ವೇಷ ಮಾಡುತ್ತಿದ್ದಾರೆ ಎಂಬ ಅರಿವಾಗುತ್ತೆ. ದರ್ಶನ್ ಹಾಗೂ ಯಶ್ ಅವರನ್ನು ಬೈಯುತ್ತಿರುವ ಕುಮಾರಸ್ವಾಮಿ ಅವರಿಗೆ ಮೊದಲು ಬುದ್ದಿ ಹೇಳಲಿ. ಅಷ್ಟೆ ಅಲ್ಲ ಅವರ ಪಕ್ಷದ ನಾಯಕರಿಗೂ ಬುದ್ಧಿ ಹೇಳಲಿಎಂದರು.
ಚುನಾವಣೆ ಬಳಿಕ ತಲೆಮರೆಸಿಕೊಳ್ಳುವ ಅಭ್ಯರ್ಥಿಗಳನ್ನು ಗೆಲ್ಲಿಸಬಾರದು. ಅವರ ಪ್ರತಿನಿಧಿಸುವ ಕ್ಷೇತ್ರದಲ್ಲಿಯೂ ಜನರಿಗೆ ಅನ್ಯಾಯವಾಗುತ್ತದೆ. ಚುನಾವಣೆ ಬಂದಾಗ ಅವರಿವರ ಹೆಸರು ಹೇಳಿಕೊಂಡು ಗೊಂದಲದಲ್ಲಿರುವ ಮಧು ಬಂಗಾರಪ್ಪ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಇತ್ತ ತನ್ನ ತಂಗಿ ಗೋತಾ ಶಿವರಾಜ ಕುಮಾರ್ ಕಳೆದ ಬಾರಿ ಚುನಾವಣೆಯಲ್ಲಿ ನಿಂತಿದ್ರು. ರಾಜಕುಮಾರ್ ಸೊಸೆ, ಬಂಗಾರಪ್ಪರವರ ಮಗಳು ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ತನ್ನ ಆಳವನ್ನು ಪರೀಕ್ಷಿಸುವ ಸಿದ್ದತೆ ಮಾಡಿದ್ದರೂ ಕೂಡ ಜನರು ದೊಡ್ಡ ಅಂತರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕ್ಷೇತ್ರದ ಜನತೆ ಗೆಲ್ಲಿಸಿದ್ದರು ಎಂದರು.
ಕಾಂಗ್ರೆಸ್, ಜೆಡಿಎಸ್ ಮೆತ್ರಿ ಅಭ್ಯರ್ಥಿ ಶರಾವತಿ ಡೆಂಟಲ್ ಕಾಲೇಜ್, ಬಗರ್ ಹುಕುಂ ಹಾಗೂ ಕುಟುಂಬದ ಹೆಸರಿನಲ್ಲಿ ಸಾಕಷ್ಟು ಲೂಟಿ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಅವರನ್ನು ಮತದಾರರೇ ಗಡಿಪಾರು ಮಾಡುವ ಕೆಲಸ ಮಾಡುತ್ತಾರೆ. ಅವರಿಗೆ ಬೆಂಬಲವಾಗಿ ನಿಂತಿರುವವರೂ ಲೂಟಿ ಮಾಡಿದ್ದಾರೆ. ತಾವು ಸೋತರೂ ಜಿಲ್ಲೆಯ ಅಭಿವದ್ಧಿಗಾಗಿ ಸಾಕಷ್ಟು ಹಣವನ್ನು ಸರಕಾರದಿಂದ ಬಿಡುಗಡೆ ಮಾಡಿಸಿರುವುದಾಗಿ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಅವರು ಚುನಾವಣೆಯಲ್ಲಿ ಸೋತರೂ ಪ್ರಭಾವಿ ಎನ್ನುವುದಾದರೆ ಅವರನ್ನು ಮತದಾರರು ಪುನಃ ಪುನಃ ಸೋಲಿಸಬೇಕು, ಮತದಾರರು ಅವರನ್ನು ಸೋಲಿಸೋಣ ಎಂದು ಲೇವಡಿ ಮಾಡಿದರು.
(ವರದಿ- ಯೋಗೀಶ್ ಕುಂಭಾಸಿ )
Comments are closed.