ಬೆಂಗಳೂರು: ಈಗಾಗಲೇ ಸಿನಿ ರಸಿಕರಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಹಿರಿಯ ನಟಿ ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ ‘ಯಾನ’ ಚಿತ್ರದ ಟ್ರೇಲರ್’ನ್ನು ಗುರುವಾರ ಸಂಜೆ ‘ರಾಕಿಂಗ್ ಸ್ಟಾರ್’ ಯಶ್ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.
ACME ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಹೆಸರಾಂತ ಉದ್ಯಮಿ, ನಿರ್ಮಾಪಕರಾಗಿರುವ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಹಾಗು ‘ಐ’ ಎಂಟರ್ಟೈನ್ಮೆಂಟ್’ನ ವೈಭವಿ, ವೈನಿಧಿ ಮತ್ತು ವೈಸಿರಿ ನಿರ್ಮಿಸಿರುವ ಯಾನ ಸಿನೆಮಾದಲ್ಲಿ ಹಿರಿಯ ನಟ ಜೈಜಗದೀಶ್ ಹಾಗು ವಿಜಯಲಕ್ಷ್ಮಿ ಸಿಂಗ್ ಅವರು ತಮ್ಮ ಮೂವರು ಪುತ್ರಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿಯನ್ನು ನಾಯಕಿಯರಾಗಿ ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸುತ್ತಿದ್ದಾರೆ.
‘ಯಾನ’ ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ನಟ ಜೈಜಗದೀಶ್, ನಿರ್ಮಾಪಕ ಹರೀಶ್ ಶೇರಿಗಾರ್ ಸಮ್ಮುಖದಲ್ಲಿ ಟ್ರೇಲರ್’ನ್ನು ಬಿಡುಗಡೆಗೊಳಿಸಿದ ‘ರಾಕಿಂಗ್ ಸ್ಟಾರ್’ ಯಶ್, ನನಗಿಂದು ಟ್ರೇಲರ್ ಬಿಡುಗಡೆ ಮಾಡಲು ಅತೀವ ಸಂತಸವಾಗುತ್ತಿದೆ. ಟ್ರೇಲರ್ ನೋಡುವಾಗಲೇ ಚಿತ್ರ ಒಳ್ಳೆಯದಾಗಿ ಮೂಡಿಬರಲಿದೆ ಎಂಬುದು ಖಾತ್ರಿಯಾಗುತ್ತಿದೆ ಎನ್ನುವ ಮೂಲಕ ‘ಯಾನ’ಕ್ಕೆ ಸಾಥ್ ನೀಡಿದ್ದಾರೆ.
ವಿಜಯಲಕ್ಷ್ಮಿ ಸಿಂಗ್ ತನ್ನ ಮೂವರು ಮಕ್ಕಳನ್ನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಮಾಡಿಸುವ ಮೂಲಕ ತನ್ನ ಕುಟುಂಬದ ಮೂರನೇ ತಲೆಮಾರನ್ನು ಪರಿಚಯಿಸುತ್ತಿದ್ದಾರೆ. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ನೋಡುವಂತೆ ಮಾಡಿದ ‘ಅಂತ’, ‘ಬಂಧನ’, ಮುತ್ತಿನಹಾರ’ದಂಥ ಚಿತ್ರ ಮಾಡಿದ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರ ಕುಟುಂಬದಿಂದಲೇ ಬಂದಿರುವ ವಿಜಯಲಕ್ಷ್ಮಿ ಸಿಂಗ್, ಯಾನ ಸಿನೆಮಾ ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕೊಡುಗೆ ನೀಡಿದ್ದಾರೆ ಎಂದು ಯಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಯಶ್ ಅವರೊಂದಿಗೆ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್, ನಟ ಜೈಜಗದೀಶ್, ನಿರ್ಮಾಪಕ ಹರೀಶ್ ಶೇರಿಗಾರ್, ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಹಿರಿಯ ನಟ ಸುಂದರ್ ರಾಜ್ ಹಾಗು ಅವರ ಧರ್ಮಪತ್ನಿ ಪ್ರಮೀಳಾ ಜೋಷಾಯಿ, ಸಿನೆಮಾ ನಾಯಕಿಯರಾದ ವೈಭವಿ, ವೈನಿಧಿ ಮತ್ತು ವೈಸಿರಿ, ನಾಯಕರಾದ ಸುಮುಖ, ಚಕ್ರವರ್ತಿ ಹಾಗೂ ಅಭಿಷೇಕ್ ಮತ್ತೈತರರು ಉಪಸ್ಥಿತರಿದ್ದರು.
ಸ್ವತಃ ವಿಜಯಲಕ್ಷ್ಮಿ ಸಿಂಗ್ ಅವರೇ ಚಿತ್ರ ಕಥೆ ಬರೆದು ನಿರ್ದೇಶಿಸಿರುವ ಈ ಸಿನೆಮಾ ಜುಲೈ 12 ರರಂದು ಕರ್ನಾಟಕ ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಸಿನೆಮಾದಲ್ಲಿ ಹಿರಿಯ ನಟ ಅನಂತ್ ನಾಗ್ -ಸುಹಾಸಿನಿ ಜೋಡಿ ಒಟ್ಟಿಗೆ ನಟಿಸುತ್ತಿರುವುದು ಈ ಸಿನೆಮಾದ ಇನ್ನೊಂದು ವಿಶೇಷ.
Comments are closed.