ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ತಿಳಿದು ಮಾಹಿತಿ ನೀಡಿ ಎಂದು ವಿಡಿಯೋ ಸಂದೇಶ ಕಳುಹಿಸಿದ್ದ ನಟ ಕಿಚ್ಚ ಸುದೀಪ್ಗೆ ಅಭಿಮಾನಿಯೊಬ್ಬ ಟ್ವೀಟ್ ಮೂಲಕ ತಮ್ಮ ಊರಿನ ಸ್ಥಿತಿಯನ್ನು ತಿಳಿಸಿದ ಬೆನ್ನಲ್ಲೇ ಸುದೀಪ್ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಸಂತ್ರಸ್ತರಿಗೆ ಧೈರ್ಯ ತುಂಬಿದ್ದಾರೆ.
ನನ್ನ ಸ್ನೇಹಿತರ ಬಳಗಕ್ಕೆ ನನ್ನ ಚಿಕ್ಕ ಕೋರಿಕೆ.
🙏🏼🙏🏼 pic.twitter.com/15fQA5ksZo— Kichcha Sudeepa (@KicchaSudeep) August 8, 2019
ಪ್ರವಾಹಕ್ಕೆ ತುತ್ತಾಗಿರುವ ತಮ್ಮ ಊರಿನ ಸ್ಥಿತಿಯನ್ನು ವಿಡಿಯೋ ರೆಕಾರ್ಡ್ ಮಾಡಿ ಅಭಿಮಾನಿಗಳು ತಮ್ಮ ಟ್ವಿಟರ್ ಮೂಲಕ ಸುದೀಪ್ ಅವರಿಗೆ ಟ್ವೀಟ್ ಮಾಡುತ್ತಿದ್ದಾರೆ. ಬಾಸ್ ನಮ್ಮೂರಿನ ಸ್ಥಿತಿ ಹೀಗಿದೆ… ಅಣ್ಣಾ ನಮ್ಮೂರಿಗೆ ಯಾವುದೇ ಬಸ್ಸುಗಳು ಹೋಗುತ್ತಿಲ್ಲ ಮತ್ತು ಬರುತ್ತಿಲ್ಲ ಎಂದು ವಾಸ್ತವತೆಯನ್ನು ಸುದೀಪ್ ಮುಂದೆ ತೆರೆದಿಟ್ಟಿದ್ದಾರೆ. ಇದಕ್ಕೆ ಟ್ವೀಟ್ ಮೂಲಕವೇ ಸ್ಪಂದಿಸಿರುವ ಕಿಚ್ಚ ನನ್ನ ಕೈಲಾಗುವುದನ್ನು ನಾನು ಖಂಡಿತ ಮಾಡುವೆನು ಗೆಳೆಯ. ಬೆಂಗಳೂರಿನಿಂದ ನನ್ನ ಸ್ನೇಹಿತರೆಲ್ಲಾ ಹೊರಟಿದ್ದಾರೆ ಎಂದು ಹೇಳುವ ಮೂಲಕ ಸಂತ್ರಸ್ತರ ಬೆನ್ನಿಗೆ ನಿಂತಿದ್ದಾರೆ.
ಇದಕ್ಕೂ ಮುನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿ, ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಫೋಟೊ ಮತ್ತು ವಿಡಿಯೋಗಳನ್ನು ಮಾತ್ರ ನೋಡುತ್ತಿದ್ದೇವೆ. ಅಲ್ಲಿ ಏನಾಗಿದೆ ಎಂದು ಗೊತ್ತಾಗುತ್ತಿಲ್ಲ. ನಮ್ಮ ಜನರು ಎಲ್ಲಿದ್ದಾರೆ? ಹೇಗಿದ್ದಾರೆ? ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಸರ್ಕಾರ ತನ್ನದೇ ಆದ ಕೆಲಸ ಮಾಡುತ್ತಿದೆ. ಆದರೂ ಕೂಡ ನಾವು ಏನಾದರೂ ಸಹಾಯ ಮಾಡಬೇಕಿದೆ. ಹೀಗಾಗಿ ನನ್ನ ಸ್ನೇಹ ಬಳಗಕ್ಕೆ ಒಂದು ವಿನಂತಿ ಮಾಡಿಕೊಳ್ಳುತ್ತೇನೆ. ನೀವು ತಪ್ಪು ತಿಳಿದುಕೊಳ್ಳಬೇಡಿ, ಬೇಗ ತಲುಪಬಹುದಾದಂತಹ ಪಕ್ಕದಲ್ಲಿರುವ ಪ್ರವಾಹ ಪೀಡಿತ ಸ್ಥಳಗಳಿಗೆ ಭೀಟಿ ನೀಡಿ, ಅಲ್ಲಿ ಏನು ಬೇಕು? ಯಾವ ಸಹಕಾರ ಬೇಕು? ತಕ್ಷಣ ಏನು ಮಾಡಬಹುದು ಎಂಬುದನ್ನು ತಿಳಿದು ನನಗೂ ಮಾಹಿತಿ ನೀಡಿ ಒಟ್ಟಿಗೆ ಸೇರಿ ನೆರವು ನೀಡೋಣ ಎಂದು ಮನವಿ ಮಾಡಿಕೊಂಡಿದ್ದರು.
ಸುದೀಪ್ ಅವರ ಸ್ಪಂದನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ದರ್ಶನ್ ಕೂಡ ಟ್ವೀಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಹಾಗೇ ಮತ್ತಷ್ಟು ನಟರು ನೆರವಿಗೆ ಧಾವಿಸಿ ಬರಲಿ ಎಂದು ಎಲ್ಲರೂ ಮನವಿ ಮಾಡಿಕೊಳ್ಳುತ್ತಿದ್ದಾರೆ.
ವರ್ಷದ ಹಿಂದೆ ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಇಡೀ ರಾಜ್ಯದ ಜನತೆ ಕೊಡುಗು ಸಂತ್ರಸ್ತರ ಬೆನ್ನಿಗೆ ನಿಂತು ತಮ್ಮ ಕೈಲಾದಷ್ಟು ನೆರವು ನೀಡಿದ್ದರು. ಅದೇ ರೀತಿಯಾಗಿ ಉತ್ತರ ಕರ್ನಾಟಕಕ್ಕೂ ಸಹಾಯ ಹಸ್ತ ಚಾಚಿ ಎಂದು ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
Comments are closed.