ಕರ್ನಾಟಕ

ಭಾವುಕರಾಗಿದ್ದ ಇಸ್ರೋ ಅಧ್ಯಕ್ಷ ಶಿವನ್‌’ರನ್ನು ಅಪ್ಪಿಕೊಂಡು, ಮೈದಡವಿ ಸಾಂತ್ವನಿಸಿ ಸಂತೈಸಿದ ಪ್ರಧಾನಿ ಮೋದಿ

Pinterest LinkedIn Tumblr

ಬೆಂಗಳೂರು: ಚಂದ್ರಯಾನ 2 ಯೋಜನೆಯು ನಿರೀಕ್ಷಿತ ಗುರಿ ತಲುಪುವಲ್ಲಿ ಎಡವಿದ ಹಿನ್ನೆಲೆ ಬೇಸರದಲ್ಲಿರುವ ಇಸ್ರೋ ಅಧ್ಯಕ್ಷ ಕೆ ಶಿವನ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಪ್ಪಿಕೊಂಡು, ಮೈದಡವಿ ಸಂತೈಸಿದ್ದಾರೆ. ವಿಜ್ಞಾನದಲ್ಲಿ ವೈಫಲ್ಯ ಎಂಬುದು ಇಲ್ಲ, ಎಲ್ಲವೂ ಪ್ರಯೋಗ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಪ್ರಧಾನಿ ಮೋದಿ ಅವರ ನಡೆಯನ್ನು ರಾಷ್ಟ್ರವೇ ಮೆಚ್ಚಿಕೊಂಡಿದೆ.

ಚಂದ್ರಯಾನ 2 ಲ್ಯಾಂಡಿಂಗ್‌ ವೇಳೆ ಕೇವಲ 2.1 ಕಿ.ಮೀ ಅಂತರವಿದ್ದಾಗ ಲ್ಯಾಂಡರ್‌ ವಿಕ್ರಮ್‌ ಸಂಪರ್ಕ ಕಳೆದುಕೊಂಡಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ವಿಕ್ರಮ್‌ನ ಒಡಲೊಳಗಿದ್ದ ಪ್ರಜ್ಞಾನ್‌ ರೋವರ್‌ ಚಂದ್ರನ ಅಂಗಳದಲ್ಲಿ ಓಡಾಡುತ್ತ ನಮಗೆ ಬೇಕಾದ ಮಾಹಿತಿಯನ್ನು ಒದಗಿಸುತ್ತಿತ್ತು. ಆದರೆ ಕೊನೆ ಕ್ಷಣಗಳಲ್ಲಿ ಸಂಪರ್ಕ ಕಡಿದು ಹೋಗಿರುವ ಕಾರಣ ಏನಾಗುತ್ತಿದೆ ಎಂಬ ನಿಖರ ಮಾಹಿತಿಯಿನ್ನು ಲಭ್ಯವಾಗಿಲ್ಲ.

ಶನಿವಾರ ಬೆಳಗ್ಗೆ ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಹಿನ್ನಡೆಯಿಂದ ಬೇಸರಿಸಿಕೊಳ್ಳಬೇಕಾಗಿಲ್ಲ. ವಿಶ್ವದ ಯಾರೂ ಹೋಗಿರದ ಜಾಗಕ್ಕೆ ನಾವು ತಲುಪಿರುವುದೇ ಬಹುದೊಡ್ಡ ಸಾಧನೆ. ಇಸ್ರೋ ವಿಜ್ಞಾನಿಗಳ ಪರಿಶ್ರಮವನ್ನು ರಾಷ್ಟ್ರವೇ ಕೊಂಡಾಡುತ್ತಿದೆ. ವಿಜ್ಞಾನದಲ್ಲಿ ವೈಫಲ್ಯವೆಂಬುದಿಲ್ಲ, ಎಲ್ಲವೂ ಪ್ರಯೋಗವಷ್ಟೇ ಎಂದು ಸಂತೈಸಿ ಬೆಂಬಲಿಸಿದರು. ನಂತರ ದಿಲ್ಲಿಗೆ ಹಿಂತಿರುಗುವ ವೇಳೆ ಇಸ್ರೋ ಅಧ್ಯಕ್ಷ ಕೆ ಶಿವನ್‌ ಅವರನ್ನು ಅಪ್ಪಿಕೊಂಡು, ಮೈದಡವಿ ಸಾಂತ್ವನಿಸಿದರು. ಭಾವುಕರಾಗಿದ್ದ ಶಿವನ್‌ ಕಣ್ಣುಗಳಲ್ಲಿ ನೀರು ಜಿನುಗುತ್ತಿತ್ತು. ಈ ದೃಶ್ಯವೀಗ ಸಾಮಾಜಿಕ ತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Comments are closed.