ಕುಂದಾಪುರ: ತನ್ನ ಊರಿನ ಸರಕಾರಿ ಶಾಲೆಗೆ ದುಬೈ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಶಾಲಾ ವಾಹನ (ಕಾರು) ಕೊಡುಗೆಯಾಗಿ ನೀಡಿದ್ದಾರೆ. ವಕ್ವಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಹನ ನೀಡಿದ್ದು ಶನಿವಾರ ಮಧ್ಯಾಹ್ನ ವಾಹನದ ಕಿಲೀ ಕೈ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯೋಪಧ್ಯಾಯರಿಗೆ ವಾಹನದ ಕಿಲಿಕೈ ಹಸ್ತಾಂತರಿಸಿದ ಬಳಿಕ ಮಾತನಾಡಿದ ದಾನಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಆಂಗ್ಲ ಮಾಧ್ಯಮ ಶಾಲೆಗಳ ಹೆಚ್ಚುವಿಕೆಯಿಂದ ಸರಕಾರಿ ಕನ್ನಡ ಶಾಲೆಗಳು ಅಳಿವಿನಂಚಿನತ್ತ ಸಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ಬಹುತೇಕರು ಕನ್ನಡ ಮಾಧ್ಯಮದಲ್ಲಿಯೇ ಓದಿದವರು ಎಂಬುದು ಗಮನಾರ್ಹ ಸಂಗತಿ. ಸರಕಾರ ಕನ್ನಡ ಶಾಲೆಯ ಉಳಿವಿಗೆ ಹಲವು ಕೊಡುಗೆ ನೀಡುತ್ತಿದ್ದರೂ ಕೂಡ ಸರಕಾರದಿಂದ ಸಿಗಲಾರದ ಸವಲತ್ತುಗಳನ್ನು ಶಾಲೆಗೆ ಹಾಗೂ ಮಕ್ಕಳಿಗೆ ದೊರಕಿಸುವಲ್ಲಿ ದಾನಿಗಳು ಮುಂದಾಗಬೇಕು. ಈ ನಿಟ್ಟಿನಲ್ಲಿ ವಕ್ವಾಡಿಯಲ್ಲಿ ಕುಡಿಯುವ ನೀರು, ರಸ್ತೆ, ಶಾಲೆ ಹಾಗೂ ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸಿ ವಕ್ವಾಡಿ ಗ್ರಾಮವನ್ನು ಮಾದರಿಯನ್ನಾಗಿಸೋಣ ಎಂದರು.
ಜಿಲ್ಲಾಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಮಾತನಾಡಿ, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದ್ದರೂ ಕೂಡ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿಯಾಗಿದೆ. ಒಂದಷ್ಟು ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ ಹಿನ್ನೆಲೆ ಇಲಾಖೆ ಕೂಡ ಅಗತ್ಯ ಕ್ರಮಕೈಗೊಂಡಿದೆ. ಮೂಲ ಸೌಕರ್ಯಗಳನ್ನು ಹೆಚ್ಚಿಸಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ದಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳ ಮೂಲಕ ಶಾಲೆಗೆ ಸವಲತ್ತು ಒದಗಿಸುವಲ್ಲಿ ಶಾಲಾ ಹಳೆ ವಿದ್ಯಾರ್ಥಿ ಸಂಘ ಮತ್ತು ಎಸ್.ಡಿ.ಎಂ.ಸಿ. ಕೂಡ ಮುಂದಾಗುತ್ತಿದೆ ಎಂದರು.
ಇದೇ ಸಂದರ್ಭ ಶಾಲೆಯ ಹಳೆ ವಿದ್ಯಾರ್ಥಿ, ಹಿರಿಯರಾದ ಎಂ.ಸುಬ್ಬಣ್ಣ ಅವರು ದಾನಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಿದರು. ಕಾಳಾವರ ಗ್ರಾ.ಪಂ ಅಧ್ಯಕ್ಷ ಸುಖಾನಂದ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾ.ಪಂ ಸದಸ್ಯೆ ಶೈಲಶ್ರೀ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ ಆಚಾರ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಗಣೇಶ್ ಆಚಾರ್, ಕಾಳಾವರ ಗ್ರಾ.ಪಂ ಸದಸ್ಯರಾದ ಸತೀಶ್ ಪೂಜಾರಿ, ರಘುರಾಮ ಶೆಟ್ಟಿ, ರವಿರಾಜ ಶೆಟ್ಟಿ, ಸುಜಾತಾ ಆಚಾರ್ಯ, ಪ್ರೇಮಲತಾ ಶೆಟ್ಟಿ, ಚಂದ್ರಿಕಾ ಮೊದಲಾದವರಿದ್ದರು.
ಶಾಲಾ ಮುಖ್ಯೋಪಧ್ಯಾಯಿನಿ ಪುಷ್ಪಾವತಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಉಷಾ ವಂದಿಸಿದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.