ಕುಂದಾಪುರ: ಕಳೆದ ಮೂರೂವರೆ ವರ್ಷಗಳಿಂದ ಸಾಸ್ತಾನ ಭಾಗದ ಜನರು ಸರ್ವೀಸ್ ರಸ್ತೆ ಬೇಡಿಕೆಯಿಟ್ಟದ್ದರೂ ಕೂಡ ರಸ್ತೆ ನಿರ್ಮಿಸದೇ ನವಯುಗ ಕಂಪೆನಿ ವಿಳಂಭ ನೀತಿ ಅನುಸರಿಸುತ್ತಿದೆ. ಇತ್ತ ಪೊಲೀಸ್ ಇಲಾಖೆಯವರು ಏಕಮುಖ ಸಂಚಾರದಲ್ಲಿ (ಒನ್ ವೇ) ಬಂದವರನ್ನು ಅಡ್ಡಗಟ್ಟಿ ದುಬಾರಿ ದಂಡ ವಿಧಿಸುತ್ತಾರೆ. ಒಂದು ತಿಂಗಳ ಅವಧಿಯಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಬಂದ್ ನಡೆಸಿ ರಸ್ತೆ ತಡೆ ಮಾಡುವುದು ನಿಶ್ಚಿತ ಎಂಬ ಕೂಗು ಕೇಳಿಬಂದಿತು.
ಸರ್ವಿಸ್ ರಸ್ತೆಗೆ ಆಗ್ರಹಿಸಿ ಸೋಮವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯವರು ನಾಗರಿಕರನ್ನೊಡಗೂಡಿಸಿಕೊಂಡು ಮಾಬುಕಳದಿಂದ ಕೋಟದವರೆಗೂ ಬ್ರಹತ್ ಪ್ರತಿಭಟನಾ ಪಾದಯಾತ್ರೆ ನಡೆಸಿದ್ದು ಈ ವೇಳೆ ಸಾರ್ವಜನಿಕರು ಮತ್ತು ಹೋರಾಟ ಸಮಿತಿಯವರು ಆಕ್ರೋಷ ಹೊರಹಾಕಿದರು.
ಪಾದಯಾತ್ರೆಯು ಕೋಟಕ್ಕೆ ಬರುತ್ತಿದ್ದಂತೆಯೇ ಪ್ರತಿಭಟನಾಕರರನ್ನು ಉದ್ದೇಶಿಸಿ ಮಾತನಾಡಿದ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಪ್ರತಾಪ್ ಶೆಟ್ಟಿ, ವಾಹನ ಸವಾರರು, ಬೈಕ್ ಸವಾರರನ್ನು ಕ್ರಿಮಿನಲ್ ಅಂತೆ ನೋಡುವುದು ಬಿಟ್ಟು ಮಾನವೀಯವಾಗಿ ನೋಡುವುದನ್ನು ಇಲಖೆಯವರು ಮೊದಲು ಕಲಿಯಬೇಕು. ಜನಸಾಮಾನ್ಯರಿಗೆ ಜನಸ್ನೇಹಿ ವ್ಯವಸ್ಥೆ ಕಲ್ಪಿಸುವುದು ಬಿಟ್ಟು ದಬ್ಬಾಳಿಕೆ ಮಾಡುವುದು ಸರಿಯಲ್ಲ. ಮೂರು ವರ್ಷಗಳಿಂದ ಕುಮ್ರಗೋಡು, ಮಾಬುಕಳ, ಸಾಸ್ತಾನ, ಸಾಲಿಗ್ರಾಮ ಹಾಗೂ ಕೋಟ ವ್ಯಾಪ್ತಿಯ ಸರ್ವೀಸ್ ರಸ್ತೆಯನ್ನು ನಿರ್ಮಾಣ ಮಾಡಿಯೆಂಬ ಹೋರಾಟ ಮಾಡುತ್ತಿದ್ದೇವೆ. ಆದರೆ ಹೆದ್ದಾರಿ ಗುತ್ತಿಗೆ ಮಾಡುತ್ತಿರುವ ನವಯುಗ ಕಂಪೆನಿ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಗ್ರಾಮೀಣ ರಸ್ತೆಯಲ್ಲಿ ಸಂಚರಿಸುವ ಮಂದಿ ನಿತ್ಯ ಕಗ್ಗಂಟಿನ ಸಂಚಾರ ಮಾಡುತ್ತಿದ್ದು ಹೆದ್ದಾರಿ ಇಕ್ಕೆಲಗಳಲ್ಲಿ ಅಪಘಾತ ನಡೆಯುತ್ತಿದೆ. ನೂತನ ಮೋಟಾರು ವಾಹನ ಕಾಯ್ದೆಯಡಿ ಒನ್ ವೇ ಸಂಚಾರ ಮಾಡುವರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ಒಂದೊಮ್ಮೆ ಡಿವೈಡರ್ ಹೋಗಬೇಕಾದರೆ ಮೂರು ಕಿ.ಮೀ ಸುತ್ತಿ ಹಾಕಬೇಕಾದ ಅನಿವಾರ್ಯತೆ ಇದೆ. ನಮ್ಮನ್ನು ಶಾಂತಿಯುತವಾಗಿ ಬದುಕಲು ಇಲಾಖೆ ಬಿಡಬೇಕಿದೆ ಎಂದು ಗುಡುಗಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ, ನವಯುಗ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಹಲವು ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮದು ಯಾರ ವಿರುದ್ಧ ವೈಯಕ್ತಿಕ ಹೋರಾಟವಲ್ಲ. ಬದಲಾಗಿ ನಮ್ಮ ನೋವನ್ನು ನಾವು ಹೇಳುತ್ತಿದ್ದೇವೆ. ಶೀಘ್ರವಾಗಿ ಬೀಜಾಡಿ ಹಾಗೂ ಸಾಲಿಗ್ರಾಮದಲ್ಲಿ ಅನುಮೋದನೆಗೊಂಡ ಸರ್ವಿಸ್ ರಸ್ತೆ ಕಾರ್ಯ ಕೈಗೆತ್ತಿಕೊಳಬೇಕು. ಹಾಗೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಕಾವೇರಿ ಮಾತನಾಡಿ, ನವಯುಗದವರು ಮಾಡುತ್ತಿರುವ ಸಮಸ್ಯೆಗಳ ವಿರುದ್ಧ ಧ್ವನಿಯೆತ್ತಲೇ ಬಂದಿದ್ದರೂ ಕೂಡ ಅವರು ಕ್ಯಾರೇ ಅನ್ನುತ್ತಿಲ್ಲ. ನಮ್ಮ ಇಂದಿನ ಬೇಡಿಕೆಗಳ ಈಡೇರಿಕೆಗೆ ಒಂದು ತಿಂಗಳ ಗಡುವು ನೀಡುತ್ತೇವೆ. ಅಷ್ಟರೊಳಗೆ ಕುಂದಾಪುರ ಎಸಿ ಕಚೇರಿಯಲ್ಲಿ ನವಯುಗ, ಪೊಲೀಸ್ ಹಾಗೂ ಹೋರಾಟ ಸಮಿತಿಯ ಸಭೆ ಕರೆಯಬೇಕು. ತಿಂಗಳೊಳಗಾಗಿ ಸಮಸ್ಯೆ ನಿವಾರಣೆಯಾಗದಿದ್ದರೆ ಬಂದ್ ನಡೆಸಿ ರಸ್ತೆ ತಡೆ ಮಾಡುವುದು ಖಂಡಿತ ಎಂಬ ಎಚ್ಚರಿಕೆ ನೀಡಿದರು.
ಈ ಸಂದರ್ಭ ಹೆದ್ದಾರಿ ಜಾಗೃತಿ ಸಮಿತಿಯ ವಿಠಲ ಪೂಜಾರಿ, ಶ್ಯಾಮಸುಂದರ್ ನಾಯರಿ, ಪ್ರಶಾಂತ ಶೆಟ್ಟಿ, ಅಲ್ವಿನ್ ಅಂದ್ರಾದೆ, ನಾಗರಾಜ್ ಗಾಣಿಗ, ದಿನೇಶ್ ಗಾಣಿಗ, ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ತಾ.ಪಂ ಸದಸ್ಯರಾದ ಜ್ಯೋತಿ ಉದಯ್ ಪೂಜಾರಿ, ಲಲಿತಾ ಪೂಜಾರಿ, ಪಾಂಡೇಶ್ವರ ಗ್ರಾ.ಪಂ ಅಧ್ಯಕ್ಷ ಗೋವಿಂದ, ಕೋಟ ಗ್ರಾ.ಪಂ ಅಧ್ಯಕ್ಷೆ ವನಿತಾ ಶ್ರೀಧರ್ ಆಚಾರ್ಯ, ಕೋಟತಟ್ಟು ಗ್ರಾ,ಪಂ ಅಧ್ಯಕ್ಷ ರಘು ತಿಂಗಳಾಯ ಮೊದಲಾದವರಿದ್ದರು.
(ವರದಿ-ಯೋಗೀಶ್ ಕುಂಭಾಸಿ)
Comments are closed.