ಕುಂದಾಪುರ: ಕಾಡು ಹಾಗೂ ಅರಣ್ಯ ಜೀವಗಳ ರಕ್ಷಣೆ ಬಗ್ಗೆ ವೈಲ್ಡ್‌ಲೈಪ್ ಅಧಿಕಾರಿಗಳು ನಿಗಾ ಇಡಬೇಕು. ಕಾಟಾಚಾರಕ್ಕೆ ಅರಣ್ಯ ಸಪ್ತಾಹ ಮಾಡುವುದಲ್ಲ ಬದಲಾಗಿ ನಾಗರಿಕರಿಗೆ ಪರಿಸರ, ವನ್ಯ ಜೀವಿಗಳ ಉಳಿವು ಎಷ್ಟು ಮುಖ್ಯ ಎನ್ನುವ ಬಗ್ಗೆ ಜಾಗೃತಿ ಮೂಡಿಸಿ. ಅರಣ್ಯ ಒತ್ತುವರಿ, ಮರಗಳ್ಳರು ರಕ್ಷಿತಾರಣ್ಯ ಒತ್ತುವರಿ ಹಾಗೂ ಗಾಂಜಾ ಬೆಳೆಯುವವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ತೆಗೆದುಕೊಳ್ಳಿ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಳದಲ್ಲಿ ಶುಕ್ರವಾರ ನಡೆದ ತ್ರೈ ಮಾಡಿಸಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಕೆಡಿಪಿ ಸಭೆ ನಡೆಸುವುದು ಕಾಟಾಚಾರಕ್ಕೆ ಅಲ್ಲ. ಕೆಡಿಪಿ ಸಭೆಗೆ ಹಾಜರಾಗದ ಅಧಿಕಾರಿಗಳು ಜಿಲ್ಲೆ ಬಿಟ್ಟು ಹೋಗಲಿ. ಬಡವರ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಅಧಿಕಾರಿಗಳು ನಿರಾಸಕ್ತಿ ತೋರಿಸಿದರೆ ಸುಮ್ಮನಿರೋದಿಲ್ಲ ಎಂದರು.
ಮರಳು ಲೋಡಿಗೆ ಜಿಲ್ಲಾಡಳಿತ 6500 ರೂ.ನಿಗದಿ ಮಾಡಿದ್ದರೂ ಮರಳು ವಿತರಣೆ ಕೇಂದ್ರದಲ್ಲಿ ೭೫೦೦ ರೂ. ಪಡೆಯುತ್ತಿದ್ದಾರೆ. ಮರಳು ಹಾಗೂ ವಾಹನ ಬಾಡಿಗೆ ಎಲ್ಲಾ ಸೇರಿದರೆ ಮರಳು ತುಟ್ಟಿಯಾಗಿ ಜನಸಾಮಾನ್ಯರಿಗೆ ತುಟ್ಟಿಯಾಗುತ್ತಿದೆ. ಜಿಲ್ಲಾಡಳಿತ ಸೂಚಿಸಿದ ಬೆಲೆಯಲ್ಲೇ ಮರಳು ವಿತರಣೆ ಕೇಂದ್ರದಿಂದ ಪೂರೈಕೆ ಮಾಡಬೇಕು. ಜನಪ್ರತಿನಿಧಿಗಳು ಮರಳು ತೆಗೆಯುವವರ ಪರ ನಿಲ್ಲದೆ, ಜನಸಾಮಾನ್ಯರ ಪರವಾಗಿರಬೇಕು ಎಂದು ಜಿಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಹೇಳಿದರು.
ಶಾಸಕ ಸುಕುಮಾರ್ ಶೆಟ್ಟಿ ಉತ್ತರಿಸಿ ಜಿಲ್ಲಾಡಳಿತ 6500 ರೂ ಮರಳು ಬೆಲೆ ಫಿಕ್ಸ್ ಮಾಡಿದ್ದು, ಅದೇ ಧಾರಣೆಯಲ್ಲಿ ಮರಳು ನೀಡಬೇಕು ವಾಹನ ಬಾಡಿಗೆ ಕೂಡಾ ಜಿಲ್ಲಾಡಳಿತ ಸೂಚಿಸಿದಂತೆ ಪಡೆಯಬೇಕು ಎಂದು ಹೇಳಿದರು.
ಕುಂದಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಕಾಪಾಡಿಕೊಳ್ಳಲು ವಿಫಲವಾಗಿದ್ದು, ಬಡವರನ್ನು ಕೇಳುವವರೇ ಇಲ್ಲದಂತೆ ಆಗಿದೆ. ಬೇರೆ ಔಷಧ ಅಂಗಡಿಗೆ ಚೀಟಿ ಬರೆದು ಕೊಡುತ್ತಾರೆ. ಜನಪ್ರತಿನಿಧಿಗಳಿಗೆ ಸೌಜನ್ಯಕ್ಕಾದರೂ ಗೌರವ ಕೊಡುವ ಮಾತೇ ಇಲ್ಲಾ. ದಾನಿಗಳು ಆಸ್ಪತ್ರೆ ಕೊಡುಗೆಯಾಗಿ ನೀಡಿದರೂ ಅದರ ಮೈಂಟೇನ್ ಹಾಗೂ ಇನ್ನಿತರ ವಿಷಯದಲ್ಲಿ ವೈದ್ಯಾಧಿಕಾರಿಗಳು ಸೋತಿದ್ದಾರೆ ಎಂದು ಜಿಪಂ ಸದಸ್ಯ ಗೌರಿ ದೇವಾಡಿಗ ದೂರಿದರು.
ಸಾರ್ವಜನಿಕ ಆಸ್ಪತ್ರೆ ಸ್ವಚ್ಛತೆ ಬಗ್ಗೆ ಆಸ್ಪತ್ರೆ ಕಟ್ಟಡ ಕಟ್ಟಿಕೊಟ್ಟವರೇ ಅಪಸ್ವರ ಎತ್ತಿದಾರೆ. ವೈದ್ಯಾಧಿಕಾರಿಗಳು ಆಸ್ಪತ್ರೆ ಮೈಂಟೇನ್ ಮಾಡಲಾಗದಿದ್ದರೆ ಬೇರೆಕಡೆ ವರ್ಗ ಮಾಡಿಕೊಂಡು ಹೋಗಿ ಎಂದು ಶಾಸಕ ಸುಕುಮಾರ್ ಶೆಟ್ಟಿ ಸೂಚಿಸಿದ್ದು, ಕಾವೇರಿದ ಚರ್ಚೆಗೂ ಕಾರಣವಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಿದ್ದರೂ ಅವರ ಬಿಟ್ಟು ವೈದ್ಯಾಧಿಕಾರಿ ನೇಮಕ ಮಾಡಲಾಗಿದೆ. ಸರ್ಕಾರ ವೈದ್ಯಾಧಿಕಾರಿ ನೇಮಕ ಬದಲಾಯಿಸುವಂತೆ ಸೂಚಿಸಿದ್ದರೂ ಏಕೆ ಇನ್ನೂ ಬದಲಾಯಿಸಿಲ್ಲ ಎಂದು ಬಾಬು ಶೆಟ್ಟಿ ತಗ್ಗರ್ಸೆ ಪ್ರಶ್ನಿಸಿದರು.
ಇದಕ್ಕೆ ಪೂರಕಾವಗಿ ಗೌರಿ ದೇವಾಡಿಗ ಮಾತನಾಡಿ, ಕುಂದಾಪುರ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಗೌರವ ಕೊಡುವ ಸೌಜನ್ಯವೂ ಇಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕೊರತೆ ಒಂದೇ ಅಲ್ಲಾ.. ಔಷಧವೂ ಸಿಗೋದಲ್ಲ ಎಂದು ಹೇಳಿದ್ದು, ತಾಲುಕು ಪಂಚಾಯಿತಿ ಅರ್ಧ ಸಾಮಾನ್ಯ ಸಭೆ ಕೂಡಾ ತಾಲೂಕು ಆಸ್ಪತ್ರೆ ವಿಷಯದಲ್ಲೇ ಕಳೆದು ಹೋಗುತ್ತದೆ ಎಂದು ತಾಪಂ ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ ಹೇಳಿದರು.
ಶಾಸಕ ಸುಕುಮಾರ್ ಶೆಟ್ಟಿ ವೈದ್ಯರ ತರಾಟೆಗೆ ತೆಗೆದುಕೊಂಡು ಸರ್ಕಾರಿ ಆಸ್ಪತ್ರೆ ಸಂಗತಿ ಬಗ್ಗೆ ಸಾಕಷ್ಟು ದೂರುಗಳಿದ್ದು, ಸಮಸ್ಯೆ ನಿಭಾಯಿಸುವುದು ವೈಧ್ಯಾಧಿಕಾರಿ ಕರ್ತವ್ಯ. ವೈದ್ಯಾಧಿಕಾರಿ ಪೋಸ್ಟ್ ನಿಭಾಯಿಸಲಾಗದಿದ್ದರೆ ಬೇಡೆ ಕಡೆ ಹೋಗಿ. ಕಳೆದ ೧೩ ವರ್ಷದಿಂದ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದು, ಸರ್ಕಾರಿ ಆಸ್ಪತ್ರೆಗಿಂತ ನಿಮ್ಮ ಖಾಸಗಿ ಪ್ರಾಕ್ಟೀಸ್ ಹೆಚ್ಚಾಗಿದೆ. ನೀವು ಬೇರೆ ಕಡೆ ವರ್ಗಮಾಡಿಕೊಂಡು ಹೋಗಿ ಎಂದು ಸೂಚಿಸಿದರು.
೯೪ಸಿ, ಆಹಾರ, ಕೃಷಿ, ತೋಟಗಾರಿಕೆ, ಆರೋಗ್ಯ, ಪಡಿತರ ವಿತರಣೆ ಥಮ್, ಅಂಗನವಾಡಿ, ಶಾಲೆ ಇನ್ನಿತರ ಇಲಾಖೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಕುಂದಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಜಿಪಂ ಸ್ಥಾಯಿ ಸಮಿತಿ ಅಧ್ಯಕೆ ಶೋಭಾ ಪುತ್ರನ್, ನಾಮ ನಿರ್ದೇಡಿತ ಸದಸ್ಯೆ ರೂಪಾ ಪೈ, ತಾಪಂ ಪ್ರಭಾರ ಇಒ ಡಾ.ನಾಗಭೂಷಣ ಉಡುಪ ಇದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.