ಕರಾವಳಿ

ಅಧಿಕಾರಿಗಳು ಕೆಲವರು ಬರಲಿಲ್ಲ, ಪಾಲನ ವರದಿಗೆ ಉತ್ತರವೇ ಇಲ್ಲ; ಕುಂದಾಪುರ ತಾ.ಪಂ ಸಭೆ ಮುಂದಕ್ಕೆ! (Video)

Pinterest LinkedIn Tumblr

ಕುಂದಾಪುರ: ‘ನಾವು ಪ್ರತಿ ಬಾರಿ ಸಭೆಗೆ ಬರೋದು ಚಾ-ತಿಂಡಿ ತಿಂದು ಕಾಟಾಚಾರದ ಚರ್ಚೆ ಮಾಡೊಕೆ ಅಲ್ಲ. ಅಧಿಕಾರಿಗಳು ಬಂದ್ರೆ ಮಾತ್ರ ಸಮಸ್ಯೆಗಳ ಬಗ್ಗೆ ಚರ್ಚೆ ಸಾಧ್ಯ. ಆದರೆ ಪ್ರತಿ ಸಭೆಯೂ ಕೂಡ ಅವ್ಯವಸ್ಥೆಯ ಆಗರವಾಗಿದೆ. ನಾವು ತಾ.ಪಂ ಸದಸ್ಯರಾಗಿದ್ದೇ ನಿಜಕ್ಕೂ ಶಾಪ ಅನ್ನಿಸುತ್ತೆ……ಇದು ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಆಡಳಿತ-ವಿರೋಧ ಪಕ್ಷದ ಬೇಧ-ಭಾವವಿಲ್ಲದೇ ಸದಸ್ಯರು ಆಕ್ರೋಷಗೊಂಡ ಪರಿಯಾಗಿತ್ತು.

ಸೋಮವಾರ ಬೆಳಿಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಕುಂದರ್ ಅಧ್ಯಕ್ಷತೆಯಲ್ಲಿ ನಡೆದ 18ನೇ ಸಾಮಾನ್ಯ ಸಭೆಯು ಆರಂಭದಿಂದಲೂ ಗೊಂದಲ, ಕೋಲಾಹಲಕ್ಕೆ ಕಾರಣವಾಗಿತ್ತು.

ಆರಂಭದಲ್ಲೇ ವಿಘ್ನ…!
ಬೆಳಿಗ್ಗೆ 10.30ಕ್ಕೆ ಸಾಮಾನ್ಯ ಸಭೆ ನಿಗದಿಯಾಗಿತ್ತು. ಆರಂಭಕ್ಕೂ ಮೊದಲೇ ವಿದ್ಯುತ್ ಕೈಕೊಟ್ಟಿದ್ದಲ್ಲದೇ ಜನರೇಟರ್ ಯಂತ್ರ ಸುಸ್ಥಿತಿಯಲ್ಲಿಲ್ಲದ ಕಾರಣ ಒಂದಷ್ಟು ಹೊತ್ತು ಸಭಾಂಗಣ ಕತ್ತಲೆಯಲ್ಲಿತ್ತು. ಸಭೆಗೆ ಆಡಳಿತ ಪಕ್ಷವಾದ ಬಿಜೆಪಿ ಸದಸ್ಯರೇ ಹಲವರು ತಡವಾಗಿ ಬಂದಿದ್ದು ಮೊದಲಿಗೆ ಕೋರಂ ಸಮಸ್ಯೆಯಿಂದ ಸಭೆ ಅಂತ್ಯಗೊಳ್ಳುವುದರಲ್ಲಿತ್ತು. ಆದರೆ ಸದಸ್ಯರು 11 ಗಂಟೆ ಸುಮಾರಿಗೆ ಬಂದ ಕಾರಣ ಕೋರಂ ಆಗಿ ಸಭೆ ಆರಂಭವಾಗಿತ್ತು.

ಚಾ ಕುಡಿಯಲು ಬರೋದಲ್ಲ!
ಮೊದಲಿಗೆ ಆಡಳಿತ ಪಕ್ಷದವರೇ ಆದ ತಾಲೂಕು ಪಂಚಾಯತ್ ಸದಸ್ಯ ಕರಣ ಕುಮಾರ್ ಪೂಜಾರಿ ಮಾತನಾಡಿ, ಕಳೆದೆರಡೂವರೆ ತಿಂಗಳಾಗಿದೆ. ಆದರೆ ಪಾಲನ ವರದಿಯಲ್ಲಿನ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಿಲ್ಲ. ಹೀಗಾದರೆ ಕಾಟಚಾರಕ್ಕೆ ಸಭೆ ಮಾಡುವುದು ಯಾಕೆ? ನಾವಿಲ್ಲಿ ಚಾ ಟಿಂಡಿ ತಿನ್ನಲು ಬರೋದಲ್ಲ. ನಮ್ಮನ್ನಾರಿಸಿ ಕಳಿಸಿದ ಜನರಿಗೆ ಉತ್ತರ ಕೊಡಬೇಕು.ಹಲವು ಸಮಸ್ಯೆಗಳಿಗೆ ಆದರೆ ಹಿಂದಿನ ಸಭೆಯ ಯಾವೊಂದು ಪ್ರಶ್ನೆಗೂ ಉತ್ತರ ನೀಡಿಲ್ಲ ಯಾಕೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ತಾ.ಪಂ ಸದಸ್ಯ ಮಹೇಂದ್ರ ಪೂಜಾರಿ ಮಾತನಾಡಿ, ಕುಂದಾಪುರ ತಹಶಿಲ್ದಾರ್ ಸಭೆಗೆ ಬರಬೇಕೆಂದು ಎಷ್ಟು ಬಾರಿ ಹೇಳಿದ್ದೇವೆ. ತಾಲೂಕು ಕಚೇರಿ ಸಮಸ್ಯೆ ಬಗ್ಗೆ ಮಾತನಾಡಲು ಇದೆ. ಅವರು ಬರುವುದಿಲ್ಲವಾದರೆ ಸಭೆ ಯಾಕೆ? ಇನ್ನು ಮರಳುಗಾರಿಕೆ ದರ ನಿಗದಿ ಹಾಗೂ ಪಡೆದುಕೊಳ್ಳುವ ಬಗ್ಗೆ ಗೊಂದಲವಿದೆ. ಗಣಿ ಇಲಾಖೆ ಅಧಿಕಾರಿಗಳು ಸಭೆಗೆ ಬಂದಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಗಳು ಕೂಡ ಸಭೆಗೆ ಬಂದಿಲ್ಲ. ಮತ್ಯಾಕೆ ಸಭೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧ್ಯಕ್ಷರ ವಿರುದ್ಧ ಗರಂ!
ವಿರೋಧ ಪಕ್ಷವಾದ ಕಾಂಗ್ರೆಸ್ ನ ತಾ.ಪಂ ಸದಸ್ಯೆ ಜ್ಯೋತಿ ಪುತ್ರನ್ ಮಾತನಾಡಿ, ಪಾಲನಾ ವರದಿ ಅಪೂರ್ಣವಾಗಿದೆ. ಪ್ರತಿ ಸಭೆಯಲ್ಲೂ ಇದೆ ಅವ್ಯವಸ್ಥೆ ಆಗುತ್ತಿದೆ. ಸಭೆಗೆ ಬರುವಾಗ ಅಧ್ಯಕ್ಷರು ತಯಾರಾಗಿ ಬರುತ್ತಿಲ್ಲ. ಉತ್ತರ ಕೇಳಿದರೆ ನುಣುಚಿಕೊಳ್ಳುವ ಯತ್ನ ಮಾಡುತ್ತಾರೆ ಎಂದರು ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಶ್ಯಾಮಲಾ ಕುಂದರ್ ‘ಮಾಧ್ಯಮದ ಮುಂದೆ ಇಂತಹ ಹೇಳಿಕೆ ನೀಡಿ ವಿಷಯ ದೊಡ್ದದು ಮಾಡುತ್ತಿದ್ದೀರಿ’ ಎಂದಾಗ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜ್ಯೋತಿ ಅವರುಸಮಸ್ಯೆ ಹೇಳಿದ್ದು ಹೊರತು ಮಾಧ್ಯಮದಲ್ಲಿ ಸುದ್ದಿಯಾಗಲು ಅಲ್ಲ ಎಂದು ಕಿಡಿಕಾರಿದರು. ಅಧ್ಯಕ್ಷರು ಇತರ ಸದಸ್ಯರ ಜೊತೆ ಸಮನ್ವಯ ಸಾಧಿಸದೇ ಈ ಸಮಸ್ಯೆಯಾಗುತ್ತಿದೆ ಎಂದು ವಾಸುದೇವ ಪೈ ಆರೋಪಿಸಿದರು.

ಸಭೆ ಮುಂದೂಡಲು ಒತ್ತಾಯ..
ಕೆಲವು ಇಲಾಖೆಯ ಅಧಿಕಾರಿಗಳ ಗೈರು, ಪಾಲನಾ ವರದಿಯಲ್ಲಿ ಉತ್ತರ ಸಿಗದ ಹಿನ್ನೆಲೆ ಸಭೆಯನ್ನು ಮುಂದೂಡುವಂತೆ ಆಡಳಿತ ಪಕ್ಷದ ಸದಸ್ಯರಾದ ಕರಣ ಪೂಜಾರಿ, ಪುಷ್ಪರಾಜ್ ಶೆಟ್ಟಿ, ಮಹೇಂದ್ರ ಪೂಜಾರಿ, ಪ್ರವೀಣ್ ಶೆಟ್ಟಿ ಕಡ್ಕೆ, ಉಮೇಶ್ ಶೆಟ್ಟಿ ಕಲ್ಗದ್ದೆ ಹಾಗೂ ವಿರೋಧ ಪಕ್ಷದ ಜ್ಯೋತಿ ಪುತ್ರನ್, ವಾಸುದೇವ ಪೈ, ಜಗದೀಶ್ ದೇವಾಡಿಗ ಸೇರಿದಂತೆ ಸರ್ವ ಸದಸ್ಯರು ಸಭೆಯನ್ನು ಮುಂದೂಡುವಂತೆ ಪಟ್ಟು ಹಿಡಿದಿದ್ದು ಕೊನೆಗೂ ಸಭೆಯನ್ನು ನವೆಂಬರ್ 26ಕ್ಕೆ ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಮುಂದೂಡಿದರು.

ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪಾ ಪೈ, ತಾ.ಪಂ ಪ್ರಭಾರ ಇಓ ಡಾ. ನಾಗಭೂಷಣ್ ಉಡುಪ, ಬೈಂದೂರು ಇಓ ಭಾರತಿ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.